Site icon Vistara News

Murder Case : ಫೋಟೊ ಶೂಟ್‌ ತಗಾದೆ ; ನಾಲ್ವರ ಗ್ಯಾಂಗ್‌ನಿಂದ ಯುವಕನ ಕೊಲೆ

Doddaballapura Murder

ದೊಡ್ಡಬಳ್ಳಾಪುರ: ಇತ್ತೀಚೆಗೆ ಎಷ್ಟೊಂದು ಕ್ಷುಲ್ಲಕ ವಿಷಯಕ್ಕೆ ಕೊಲೆಗಳು (Murder Case) ನಡೆದು ಹೋಗುತ್ತಿವೆ ಎನ್ನುವುದನ್ನು ಯೋಚಿಸುವುದೂ ಕಷ್ಟವಾಗುತ್ತಿದೆ. ಬೋಂಡಾ ಬಜ್ಜಿ ಕೊಡುವುದು ತಡವಾಯಿತು, ಕೆಕ್ಕರಿಸಿ ನೋಡಿದ ಎಂಬಿತ್ಯಾದಿ ಕಾರಣಗಳಿಗಾಗಿಯೂ ಕೊಲೆ ಆಗಿದೆ. ಜನರು ಸಹನೆಯನ್ನು ಕಳೆದುಕೊಳ್ಳುತ್ತಿರುವುದು, ಶಿಕ್ಷೆಯ ಬಗ್ಗೆ ಭಯವೇ ಇಲ್ಲದೆ ಕ್ಷಣಿಕ ಆಕ್ರೋಶದ ಕೈಗೆ ತಮ್ಮ ಬದುಕನ್ನು ನೀಡುವುದು ಇದಕ್ಕೆ ಕಾರಣ. ದೊಡ್ಡ ಬಳ್ಳಾಪುರದಲ್ಲಿ (Doddaballapura News) ಶನಿವಾರ ರಾತ್ರಿ ನಡೆದ ಕೊಲೆಯೂ (Murder Case) ಇದೇ ರೀತಿಯದ್ದು.

ದೊಡ್ಡಬಳ್ಳಾಪುರದ ಕೂಗೇನಹಳ್ಳಿ ಬಳಿಯ ಡಾರ್ಕ್ ನೈಟ್ ಡಾಬಾದಲ್ಲಿ (Dark Night Dhaba) ಫೋಟೋ ಶೂಟ್‌ಗೆ (Photo Shoot) ಸಂಬಂಧಿಸಿ ಹುಟ್ಟಿಕೊಂಡ ಸಣ್ಣ ವಿವಾದ ಕೇವಲ 22 ವರ್ಷದ ಯುವಕನ ದಾರುಣ ಸಾವಿಗೆ ಕಾರಣವಾಗಿದೆ. ದುಷ್ಟರ ಗ್ಯಾಂಗ್‌ ಯುವಕನ ಎದೆಗೇ ಚೂರಿಯಿಂದ ಇರಿದಿದೆ. ಅತಿಯಾದ ರಕ್ತ ಸ್ರಾವದಿಂದ ಆತ ಪ್ರಾಣ ಕಳೆದುಕೊಂಡಿದ್ದಾನೆ.

ಢಾಬಾ ಹೊರಗಡೆ ಮಾಡಿರುವ ಆಕರ್ಷಕ ವಿನ್ಯಾಸಗಳು

ಹೀಗೆ ಪ್ರಾಣ ಕಳೆದುಕೊಂಡ ಯುವಕನ ಹೆಸರು ಸೂರ್ಯ. ಅವನು ಕಚೇರಿ ಪಾಳ್ಯ ನಿವಾಸಿಯಾಗಿದ್ದಾನೆ. ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದ ಆತ ಡಾರ್ಕ್‌ ನೈಟ್‌ ಡಾಬಾದಲ್ಲಿ ಫೋಟೋ ಶೂಟ್‌ಗೆ ಮುಂದಾಗಿದ್ದ. ವೀಕೆಂಡ್‌ ಮತ್ತು ಹಬ್ಬದ ಸರಣಿ ಇದ್ದ ಹಿನ್ನೆಲೆಯಲ್ಲಿ ಡಾರ್ಕ್‌ನೈಟ್‌ ವೆಬ್‌ನ್ನು ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಫೋಟೋ ಶೂಟ್‌ಗೆ ಅನುಕೂಲವಾಗುವಂತೆಯೂ, ಜನರನ್ನು ಆಕರ್ಷಿಸುವುದಕ್ಕೂ ಇಲ್ಲಿ ವ್ಯವಸ್ಥೆ ಮಾಡಲಾಗಿತ್ತು.

ಸೂರ್ಯ ಮತ್ತು ಆತನ ಇಬ್ಬರು ಗೆಳೆಯರು ಡಾಬಾಕ್ಕೆ ಹೋಗಿ ಶೂಟಿಂಗ್‌ ಮಾಡಿದ್ದರು. ಇದನ್ನು ಅಲ್ಲೇ ಇದ್ದ ನಾಲ್ವರು ಯುವಕರ ತಂಡ ಗಮನಿಸಿತು. ʻನೀವು ಫೋಟೊ ಶೂಟ್‌ ಮಾಡಿದ್ದೀರಲ್ಲಾ.. ಅದೇ ರೀತಿ ನಮ್ಮದೂ ಮಾಡಿʼʼ ಎಂದು ಕೇಳಿಕೊಂಡಿತು. ಸೂರ್ಯ ಮತ್ತು ಅವರ ಗೆಳೆಯರ ಈ ಗ್ಯಾಂಗ್‌ನ ಮಾತಿಗೆ ಮನ್ನಣೆ ಅವರ ಫೋಟೊ ಶೂಟ್‌ ಕೂಡಾ ಮಾಡಿತು.

ಆಸ್ಪತ್ರೆ ಬಳಿ ಕುಟುಂಬಿಕರ ಆಕ್ರಂದನ

ಅಲ್ಲಿವರೆಗೆ ಎಲ್ಲವೂ ಚೆನ್ನಾಗಿತ್ತು. ಫೋಟೋ ಶೂಟ್‌ ಮುಗಿಯುತ್ತಿದ್ದಂತೆಯೇ ಫೋಟೋ ತೆಗೆಸಿಕೊಂಡ ಗ್ಯಾಂಗ್‌, ಫೋಟೊಗಳನ್ನು ಕಳುಹಿಸಿಕೊಡುವಂತೆ ಹೇಳಿತು. ಫೋಟೊಗಳನ್ನು ವಾಟ್ಸ್‌ ಆಪ್‌ ಮಾಡಿ ಎಂದಿತ್ತು. ಆಗ ಸೂರ್ಯ ʻಇದು ಕ್ಯಾಮೆರಾದಿಂದ ತೆಗೆದಿರುವ ಫೋಟೊಗಳಾಗಿರುವುದರಿಂದ ಅದನ್ನು ನೇರವಾಗಿ ಕಳುಹಿಸಲು ಬರುವುದಿಲ್ಲ. ಮೊದಲು ಕಂಪ್ಯೂಟರ್‌ಗೆ ಡೌನ್‌ ಲೋಡ್‌ ಮಾಡಿಕೊಂಡು ಅಲ್ಲಿಂದ ಕಳುಹಿಸಿಕೊಡಬೇಕಾಗಿದೆ ಎಂದು ಹೇಳಿತು.

ಆದರೆ, ಮೊದಲೇ ಕುಡಿದು ಚಿತ್ತಾಗಿದ್ದ ಗ್ಯಾಂಗ್‌ ಇದನ್ನು ಕೇಳಿಸಿಕೊಳ್ಳುವ ಮೂಡ್‌ನಲ್ಲಿ ಇರಲಿಲ್ಲ. ಈಗಲೇ ಕಳುಹಿಸಿಕೊಡಬೇಕು ಎಂದು ಪಟ್ಟು ಹಿಡಿಯಿತು. ಸೂರ್ಯನನ್ನು ಹಿಡಿದಿಟ್ಟು ಆತನ ಮೇಲೆ ಒತ್ತಡ ಹೇರಿತು. ಅಂತಿಮವಾಗಿ ನಾಲ್ವರ ಗ್ಯಾಂಗ್‌ನಲ್ಲಿದ್ದ ಒಬ್ಬಾತ ಸೂರ್ಯನ ಹೊಟ್ಟೆಗೆ ಚೂರಿಯಿಂದ ಇರಿದೇ ಬಿಟ್ಟ.

ಚಾಕು ಇರಿತಕ್ಕೆ ಒಳಗಾದ ಸೂರ್ಯನನ್ನು ದೊಡ್ಡಬಳ್ಳಾಪುರದ‌ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಯಿತಾದರೂ ಅತೀ ರಕ್ತ ಸ್ರಾವದಿಂದ ಯುವಕ ಆಸ್ಪತ್ರೆಯಲ್ಲಿ ಸಾವು ಕಂಡಿದ್ದಾನೆ.ದೊಡ್ಡಬೆಳವಂಗಲ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕೊಲೆ ಮಾಡಿದ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಇದಾದ ಬಳಿಕ ಕುಟುಂಬಿಕರು ಆಸ್ಪತ್ರೆ ಬಳಿ ಧಾವಿಸಿದರು. ಕುಟುಂಬಸ್ಥರ ಆಕ್ರಂದ ಮುಗಿಲುಮುಟ್ಟಿದೆ.

ಅತ್ಯಂತ ಕ್ಷುಲ್ಲಕ ಕಾರಣಕ್ಕಾಗಿ ಮಗನನ್ನು ಕೊಂದು ಹಾಕಿದ ಕ್ರೂರಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಮನೆಯವರು ಆಗ್ರಹಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version