ಬೆಂಗಳೂರು: ಬೆಂಗಳೂರಿನ ಶ್ರೀರಾಂಪುರದ ರೈಲ್ವೆ ಬ್ರಿಡ್ಜ್ ಬಳಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ಮೃತದೇಹ (Murder case) ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೃತನ ಗುರುತು ಪತ್ತೆ ಹಚ್ಚಿ, ಆರೋಪಿಯನ್ನು ಬಂಧಿಸಿದ್ದಾರೆ. ಎಲ್.ಎನ್ ಪುರದ ದಿಲೀಪ್ (34) ಮೃತಪಟ್ಟವನು.
ದಿಲೀಪ್ ಬೈಕ್ ಮೆಕ್ಯಾನಿಕ್ ಆಗಿದ್ದ. ಇದೇ ತಿಂಗಳ 1ರಂದು ರೈಲ್ವೆ ಸೇತುವೆಯಲ್ಲಿ ಕೊಲೆ ಮಾಡಿದ ಸ್ಥಿತಿಯಲ್ಲಿ ದಿಲೀಪ್‌ನ ಕೊಳತೆ ಶವ ಪತ್ತೆಯಾಗಿತ್ತು. ಶ್ರೀರಾಂಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದರು. ಈ ಸಂಬಂಧ ಶ್ರೀರಾಂಪುರ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ತನಿಖೆಗಿಳಿದಿದ್ದ ಪೊಲೀಸರಿಗೆ ಅಸಲಿ ಕಹಾನಿ ಬಯಲಾಗಿದೆ.
ಇದನ್ನೂ ಓದಿ: Murder case : ತೃತೀಯ ಲಿಂಗಿಯನ್ನು ಕೊಂದ ಮಹಿಳೆ; ಮಗನಿಗೆ ನಾಯಿ ಚೈನ್ ಹಾಕಿ ಎಳೆಯುವಾಗ ಸಾವು
ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಗೆಳೆಯನಿಂದಲೇ ದಿಲೀಪ್ ಕೊಲೆ ಆಗಿದ್ದ. ಗೆಳೆಯ ವಿಠಲ ಅಲಿಯಾಸ್ ಪಾಂಡು ಎಂಬಾತ ದಿಲೀಪ್‌ನನ್ನು ಬರ್ಬರವಾಗಿ ಕೊಂದಿದ್ದ. ವಿಠಲ ಮತ್ತು ದಿಲೀಪ್ ಒಂದೇ ಏರಿಯಾದ ನಿವಾಸಿಗಳಾಗಿದ್ದರು. ನಾಲ್ಕು ತಿಂಗಳ ಹಿಂದೆ ದಿಲೀಪ್‌ನಿಂದ 20 ಸಾವಿರ ಹಣವನ್ನು ವಿಠಲ ಪಡೆದಿದ್ದ.
ಬಳಿಕ ಸಾಲದ ಹಣಕ್ಕೆ ಬಡ್ಡಿ ಸೇರಿ 30 ಸಾವಿರ ರೂ. ಆಗಿತ್ತು. ತಿಂಗಳು ಕಳೆದರೂ ವಿಠಲ ಹಣವನ್ನು ಕೊಟ್ಟಿರಲಿಲ್ಲ. ಇತ್ತ ದಿಲೀಪ್ ಹಣ ವಾಪಸ್ ಕೊಡುವಂತೆ ಪದೇಪದೆ ವಿಠಲನನ್ನು ಕೇಳುತ್ತಿದ್ದ. ಜತೆಗೆ ಅವಾಚ್ಯ ಶಬ್ಧಗಳಿಂದ ಕುಟುಂಬದವರನ್ನು ನಿಂದಿಸುತ್ತಿದ್ದ. ಇದೇ ವಿಚಾರವಾಗಿ ವಿಠಲ ದಿಲೀಪ್ ಮೇಲೆ ಕೋಪಗೊಂಡಿದ್ದ.
ದಿಲೀಪ್ ಮೇಲೆ ಸೇಡು ತೀರಿಸಿಕೊಳ್ಳಬೇಕೆಂದು ವಿಠಲ ಹಣ ಕೊಡುವುದಾಗಿ ಹೇಳಿ ಏಪ್ರಿಲ್ 28ರಂದು ಕರೆಸಿಕೊಂಡಿದ್ದ. ನಿರ್ಜನ ಪ್ರದೇಶವಾದ ಓಕಳಿಪುರಂನ ರೈಲ್ವೆ ಸೇತುವೆ ಸಮೀಪ ಭೇಟಿ ಮಾಡಿದ್ದ. ವಿಠಲ ಕೊಲೆ ಮಾಡುವ ಕಾರಣಕ್ಕೆ ಈ ಮೊದಲೇ ತಂದಿದ್ದ ಚಾಕುವಿನಿಂದ ದಿಲೀಪ್‌ಗೆ ಇರಿದು ಕೊಲೆ ಮಾಡಿ ಪರಾರಿ ಆಗಿದ್ದ.
ಕೊಲೆಯಾದ ಸ್ಥಳದಲ್ಲಿ ಯಾರು ಓಡಾಡದ ಕಾರಣಕ್ಕೆ ಮೂರು ದಿನಗಳ ಕಾಲ ದಿಲೀಪ್ ಮೃತ ದೇಹ ಅಲ್ಲೆ ಕುಳಿಯುತ್ತಿತ್ತು. ನಂತರ ಮೇ 1ರಂದು ಸ್ಥಳೀಯರ ಮಾಹಿತಿ ಮೇರೆಗೆ ಮೃತದೇಹ ಪತ್ತೆಯಾಗಿತ್ತು. ಅದನ್ನು ಕಂಡ ಮೃತ ವಿಠಲನ ತಮ್ಮನ ಗೆಳೆಯ ಮಾಹಿತಿ ನೀಡಿದ್ದ. ಈತನ ಮಾಹಿತಿ ಆಧರಿಸಿ ಮೃತನ ಸಹೋದರ ಠಾಣೆಗೆ ದೂರು ನೀಡಿದ್ದ. ತನಿಖೆ ವೇಳೆ ಕೊಲೆ ರಹಸ್ಯ ಬಯಲಾಗಿತ್ತು. ಸದ್ಯ ಶ್ರೀರಾಮಪುರಂ ಪೊಲೀಸರಿಂದ ಆರೋಪಿ ವಿಠಲನನ್ನು ಬಂಧಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ