ಬೆಂಗಳೂರು: ಪ್ರೀತಿಸಿ ಮದುವೆ ಆಗಿದ್ದ ಆ ಜೋಡಿ ಮಗು ಮಾಡಿಕೊಳ್ಳುವ ವಿಚಾರಕ್ಕೆ ಗಲಾಟೆ ಶುರುವಾಗಿದ್ದು, ಕೊಲೆಯಲ್ಲಿ (Murder case) ಅಂತ್ಯವಾಗಿದೆ. ಭಟ್ಕಳಾ ಮೂಲದ ಗಿರಿಜಾ (30) ಕೊಲೆಯಾದವರು. ಗಿರಿಜಾಳನ್ನು ಉಸಿರುಗಟ್ಟಿಸಿ ಪತಿ ನವೀನ್ ಕೊಲೆ ಮಾಡಿದ್ದಾನೆ. ಬೆಂಗಳೂರಿನ (Bengaluru News) ಎಚ್‌ಎಎಲ್ ಠಾಣಾ ವ್ಯಾಪ್ತಿಯ ಅನ್ನಸಂದ್ರದಲ್ಲಿ ಘಟನೆ ನಡೆದಿದೆ.
ಗಿರಿಜಾ ಮತ್ತು ನವೀನ್ ಕಳೆದ ಎಂಟು ತಿಂಗಳ ಹಿಂದಷ್ಟೇ ಮದುವೆ ಆಗಿದ್ದರು. ಇತ್ತೀಚೆಗೆ ಗರ್ಭಿಣಿಯಾಗಿದ್ದ ಗಿರಿಜಾಗೆ ಗರ್ಭಪಾತ ಆಗಿತ್ತು. ಗರ್ಭಪಾತ ಆಗಿದ್ದರಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಗಿರಿಜಾ, ಸದ್ಯಕ್ಕೆ ಮಗು ಬೇಡ ಅಂದಿದ್ದಳು. ಆದರೆ ಮಗು ಮಾಡಿಕೊಳ್ಳುವ ವಿಚಾರಕ್ಕೆ ಗಂಡ- ಹೆಂಡತಿ ನಡುವೆ ಸದಾ ಗಲಾಟೆ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.
ಕಳೆದ ಏಪ್ರಿಲ್ 12ರಂದು ಮಗು ಮಾಡಿಕೊಳ್ಳುವ ವಿಚಾರಕ್ಕೆ ಮತ್ತೆ ಗಲಾಟೆ ನಡೆದಿದೆ. ಸಿಟ್ಟಿನಲ್ಲಿ ಪತ್ನಿ ಗಿರಿಜಾ ಮಲಗಿರುವಾಗ ನವೀನ್ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಇದನ್ನೂ ಓದಿ: Murder Case: ಹೆಂಡತಿಯ ಕೊಂದ ಗಂಡನ ಸುಳಿವಿಗೆ 3 ಕೋಟಿ ರೂ. ಬಹುಮಾನ!
ಪೋಷಕರ ವಿರೋಧದಲ್ಲೂ ಪ್ರೀತಿಸಿ ಮದುವೆ ಆದ ಜೋಡಿ
ಇನ್ನೂ ಬೆಂಗಳೂರಿನ ಗಾರ್ಮೆಂಟ್ಸ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಗಿರಿಜಾಗೆ ನವೀನ್‌ನ ಪರಿಚಯವಾಗಿತ್ತು. ಪರಿಚಯ ಪ್ರೀತಿಗೆ ತಿರುಗಲು ಬಹಳ ಸಮಯವೇನು ಹಿಡಿದಿರಲಿಲ್ಲ. ಇವರಿಬ್ಬರ ಪ್ರೀತಿಗೆ ಗಿರಿಜಾ ಪೋಷಕರು ಪ್ರಾರಂಭದಲ್ಲಿ ವಿರೋಧ ತೋರಿದ್ದರು. ಆದರೆ ಕೊನೆಗೆ ಇವರ ಮದುವೆಗೆ ಒಪ್ಪಿಕೊಂಡಿದ್ದರು.
ಈ ಮಧ್ಯೆ ಮಗು ವಿಚಾರಕ್ಕೆ ಇಬ್ಬರು ಆಗಾಗ ಗಲಾಟೆ ಮಾಡಿಕೊಳ್ಳುತ್ತಿದ್ದರು. ಕಳೆದ ಏ.12ರ ರಾತ್ರಿಯೂ ನವೀನ್ ಮತ್ತು ಗಿರಿಜಾ ಮಧ್ಯೆ ಜಗಳ ಶುರುವಾಗಿತ್ತು. ಕೋಪದ ಕೈಗೆ ಬುದ್ಧಿಕೊಟ್ಟ ನವೀನ್ ಗಿರಿಜಾಳ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿ ಆಗಿದ್ದ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ ಪೊಲೀಸರು, ಆರೋಪಿ ನವೀನ್‌ನನ್ನು ಬಂಧಿಸಿದ್ದರು.
ಸದ್ಯ ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ. ಗಿರಿಜಾ ಮೂಲತಃ ಭಟ್ಕಳ ಮೂಲದವರು, ಹೀಗಾಗಿ ಅವರ ಪೋಷಕರು ಭಟ್ಕಳದಿಂದ ಬಂದಿದ್ದಾರೆ. ಬೌರಿಂಗ್ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದ್ದು, ನಂತರ ಮೃತದೇಹವನ್ನು ಭಟ್ಕಳಕ್ಕೆ ತೆಗೆದುಕೊಂಡು ಹೋಗಲಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಇಬ್ಬರು ಮಕ್ಕಳನ್ನು ಕೊಂದಿದ್ದ ತಾಯಿ ಜೈಲಲ್ಲೇ ಆತ್ಮಹತ್ಯೆ!
ಬೆಂಗಳೂರು: ಜಾಲಹಳ್ಳಿಯಲ್ಲಿ ಇಬ್ಬರು ಮಕ್ಕಳನ್ನು ಕೊಲೆ ಮಾಡಿದ್ದ ತಾಯಿ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಆತ್ಮಹತ್ಯೆ (Self Harming) ಮಾಡಿಕೊಂಡಿರುವುದು ನಡೆದಿದೆ. ಜೈಲಿಗೆ ಹೋದ ದಿನವೇ ಶೌಚಾಲಯದಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಗಂಗಾದೇವಿ ಆತ್ಮಹತ್ಯೆ ಮಾಡಿಕೊಂಡ ಆರೋಪಿ. ಮಂಗಳವಾರ ರಾತ್ರಿ ಇಬ್ಬರು ಮಕ್ಕಳನ್ನು ಸಾಯಿಸಿದ್ದ ಗಂಗಾದೇವಿ, ಬುಧವಾರ ಬೆಳಗ್ಗೆ 112 ಗೆ ಕರೆ ಮಾಡಿ, ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಳು. ತಕ್ಷಣ ಸ್ಥಳಕ್ಕೆ ಹೋಗಿ ಗಂಗಾದೇವಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ವಿಚಾರಣೆ ಬಳಿಕ ಗಂಗಾದೇವಿಯನ್ನು ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ, ಗುರುವಾರ ರಾತ್ರಿ ಜೈಲಿನಲ್ಲೇ ಆರೋಪಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನೆನ್ನೆ ಮರಣೋತ್ತರ ಪರೀಕ್ಷೆ ಮಾಡಿ ಸಂಬಂಧಿಕರಿಗೆ ಮೃತದೇಹ ಹಸ್ತಾಂತರ ಮಾಡಲಾಗಿದ್ದು, ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಪ್ರಕರಣ?
ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಏಪ್ರಿಲ್ 9ರಂದು ರಾತ್ರಿ ಇಬ್ಬರು ಮಕ್ಕಳನ್ನು ಗಂಗಾದೇವಿ ಕೊಂದಿದ್ದಳು. ಲಕ್ಷ್ಮೀ (9) ಹಾಗೂ ಗೌತಮ್ (7) ಕೊಲೆಯಾದ ಮಕ್ಕಳು. ಕೊಲೆ ಮಾಡಿದ ಬಳಿಕ ತಾಯಿ ಗಂಗಾದೇವಿಯನ್ನು ಜಾಲಹಳ್ಳಿ ಪೊಲೀಸರು ಆರೆಸ್ಟ್ ಮಾಡಿದ್ದರು.
ಆಂಧ್ರ ಪ್ರದೇಶ ಮೂಲದ ಗಂಗಾದೇವಿ ಕುಟುಂಬ, ಬೆಂಗಳೂರಿನ ಜಾಲಹಳ್ಳಿಯಲ್ಲಿ ವಾಸವಾಗಿತ್ತು. ಅಚ್ಚರಿ ಎಂದರೆ ಕೊಲೆ ಆರೋಪಿತೆ ಗಂಗಾದೇವಿ ಪತಿ ಪೋಕ್ಸೋ ಕೇಸ್‌ನಲ್ಲಿ ಬಂಧಿತನಾಗಿ ಈಗಾಗಲೇ ಜೈಲಿನಲ್ಲಿದ್ದಾನೆ. ಪತಿ ಮಗಳ ಜತೆಗೆ ಅಸಭ್ಯವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಸ್ವತಃ ಗಂಗಾದೇವಿಯೇ ಪತಿಯ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಗಂಗಾದೇವಿ ಖಾಸಗಿ ಕಂಪನಿಯಲ್ಲಿ ಮಾರ್ಕೆಟಿಂಗ್ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ.
ಕೊಲೆಗೆ ಕಾರಣವೇನು?
ಮಕ್ಕಳಿಬ್ಬರನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ ಬಳಿಕ ಗಂಗಾದೇವಿ ಕಂಟ್ರೊಲ್ ರೂಂಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಳು. ಗಂಗಾದೇವಿಗೆ ಹತ್ತು ವರ್ಷಗಳ ಹಿಂದೆ ಮದುವೆಯಾಗಿತ್ತು. ಆಕೆಯ ಪತಿ ಪತಿ ಪೌರಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಕಳೆದ ತಿಂಗಳು ಆತನ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿತ್ತು. ʼʼಕೇಸ್ ಸಂಬಂಧ ಕೌನ್ಸಿಲಿಂಗ್ ನಡೆಸಿ ಆತನನ್ನು ಬಂಧಿಸಲಾಗಿತ್ತು. ಹೀಗಾಗಿ ಕೌಟುಂಬಿಕ ಸಮಸ್ಯೆಯಿಂದ ಬೇಸತ್ತು ಗಂಗಾದೇವಿ ಈ ಕೃತ್ಯ ಎಸಗಿದ್ದಾಳೆʼʼ ಎಂದು ಪೊಲೀಸರು ಮಾಹಿತಿ ನೀಡಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ