ಬೆಂಗಳೂರು: ಚನ್ನನಾಯಕನಪಾಳ್ಯದಲ್ಲಿ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾದ ಪ್ರಕರಣವನ್ನು ಪೀಣ್ಯ ಪೊಲೀಸರು ಭೇದಿಸಿದ್ದು, ಕೊಲೆ ಮಾಡಿದ (Murder Case) ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.
ಹೆಗ್ಗನಹಳ್ಳಿ ನಿವಾಸಿ ಅನಂದ್ (38) ಎಂಬವರನ್ನು ಕೊಲೆ ಮಾಡಲಾಗಿತ್ತು. ಸತೀಶ, ಪುಟ್ಟ ಹಾಗೂ ದಯಾನಂದ ಬಂಧಿತ ಆರೋಪಿಗಳು. ತಮಿಳುನಾಡು ಮೂಲದ ಆನಂದ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದರು. ಆರೋಪಿ ಸತೀಶ್ ಅಡುಗೆ ಭಟ್ಟನಾಗಿದ್ದು, ಆನಂದ್ ಈತನ ಬಳಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಆನಂದನೇ ಸ್ವಂತ ಅಡುಗೆ ಕಂಟ್ರಾಕ್ಟ್ ಆರಂಭಿಸಿದ್ದ. ಇದರಿಂದ ಸತೀಶನ ವಹಿವಾಟಿಗೆ ಹೊಡೆತ ಬಿದ್ದಿತ್ತು.
ಹೀಗಾಗಿ ಆನಂದನನ್ನು ಮುಗಿಸಲು ಸತೀಶ್ ತೀರ್ಮಾನಿಸಿದ್ದ. ಪಾರ್ಟಿ ನೆಪದಲ್ಲಿ ಆನಂದನನ್ನು ತನ್ನ ಮನೆಗೆ ಕರೆಸಿಕೊಂಡಿದ್ದ ಸತೀಶ್ ಸ್ನೇಹಿತರೊಂದಿಗೆ ಸೇರಿ ಹತ್ಯೆ ಮಾಡಿದ್ದಾನೆ. ಹತ್ಯೆ ಬಳಿಕ ಶವದ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ.
ಆನಂದನ ವಿವಾಹ ವಾರ್ಷಿಕೋತ್ಸವ ದಿನದಂದೇ ಈ ಕಿರಾತಕರು ಆತನ ಹತ್ಯೆಗೈದಿದ್ದಾರೆ. ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಲು ತನ್ನ ಹೆಂಡತಿ ಪವಿತ್ರಾಳನ್ನು ಆನಂದ ತಮಿಳುನಾಡಿನಿಂದ ಕರೆಸಿದ್ದ. ಆಕೆ ಬೆಂಗಳೂರಿಗೆ ಬರುವಷ್ಟರಲ್ಲಿ ಆರೋಪಿಗಳು ಈತನ ಜೀವವನ್ನೇ ತೆಗೆದಿದ್ದಾರೆ. ಸದ್ಯ ಆರೋಪಿಗಳನ್ನು ವಶಕ್ಕೆ ಪಡೆದು ಪೀಣ್ಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: Murder Case : ತೋಟದ ಮನೆಯಲ್ಲಿ ಪತ್ನಿಯ ಕೊಂದ; ಅಣ್ಣ-ತಮ್ಮಂದಿರ ಗಲಾಟೆ ಕೊಲೆಯಲ್ಲಿ ಅಂತ್ಯ