ಬೆಂಗಳೂರು: ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಯಲಹಂಕ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯ ಡೇರಿ ಸರ್ಕಲ್ ಬಳಿ ನಡೆದಿದೆ. ಸುಮಾರು 35-40 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯನ್ನು ಕೊಲೆ (Murder Case) ಮಾಡಲಾಗಿದೆ.
ಶುಕ್ರವಾರ ರಾತ್ರಿ 8.30ರ ಸುಮಾರಿಗೆ ಕೊಲೆ ಮಾಡಿದ್ದು, ಯಾರೋ ಅಪರಿಚಿತ ವ್ಯಕ್ತಿಗಳು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಎಸ್ಕೇಪ್ ಆಗಿದ್ದಾರೆ. ಸ್ಥಳಕ್ಕೆ ಯಲಹಂಕ ಉಪನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮೃತದೇಹವನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕೃತ್ಯದ ಬಗ್ಗೆ ಯಲಹಂಕ ಉಪನಗರ ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಗೋಡೆ ಕುಸಿದು ಐವರು ಮಹಿಳೆಯರಿಗೆ ಗಾಯ
ಕೊಪ್ಪಳ: ಬಯಲು ಬಹಿರ್ದೆಸೆಗೆ ತೆರಳಿದ್ದಾಗ ಗೋಡೆ ಕುಸಿದು ಐವರು ಮಹಿಳೆಯರು ಗಾಯಗೊಂಡಿರುವ ಘಟನೆ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ತಾವರಗೇರಿ ಪಟ್ಟಣದಲ್ಲಿ ನಡೆದಿದೆ. ನೆನ್ನೆ ಭಾರಿ ಮಳೆ ಹಿನ್ನೆಲೆಯಲ್ಲಿ ಗೋಡೆಗಳು ನೆನೆದಿದ್ದವು. ಸಂಜೆ ಬಹಿರ್ಸೆಸೆಗೆ ಹೋದಾಗ ಗೋಡೆ ಕುಸಿದಿದೆ. ಈ ವೇಳೆ ಗೋಡೆ ಅವಶೇಷಗಳಡಿ ಸಿಲುಕಿದ್ದ ಮಹಿಳೆಯರ ರಕ್ಷಣೆ ಮಾಡಲಾಗಿದೆ. ಪಟ್ಟಣ ಪಂಚಾಯತ್, ಅಗ್ನಿ ಶಾಮಕ ದಳದಿಂದ ಕಾರ್ಯಾಚರಣೆ ನಡೆಸಿ ಮಹಿಳೆಯನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ | Rain News: ಮುಧೋಳದಲ್ಲಿ ಸಿಡಿಲಿಗೆ ಬಾಲಕಿ ಬಲಿ; ಚನ್ನರಾಯಪಟ್ಟಣ, ಗುಂಡ್ಲುಪೇಟೆ ಸೇರಿ ವಿವಿಧೆಡೆ ವರುಣಾರ್ಭಟ
ಹಾಸ್ಟೆಲ್‌ನಲ್ಲಿ ನೇಣಿಗೆ ಶರಣಾದ ಎಂಜಿನಿಯರಿಂಗ್ ವಿದ್ಯಾರ್ಥಿನಿ; ಕಾಲೇಜು ಕಿರುಕುಳಕ್ಕೆ ಬೇಸತ್ತಳೇ?
ಆನೇಕಲ್: ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ (Student Death) ಮೃತಪಟ್ಟಿದ್ದಾಳೆ. ಕಾಲೇಜು ಹಾಸ್ಟೆಲ್‌ನಲ್ಲಿ ನೇಣಿಗೆ ಶರಣಾದ ಸ್ಥಿತಿಯಲ್ಲಿ (Self Harming) ಶವ ಪತ್ತೆಯಾಗಿದೆ. ಬೆಂಗಳೂರು ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಕಾಲೇಜಿನ ವಿದ್ಯಾರ್ಥಿನಿ ಹರ್ಷಿತ (18) ಮೃತ ದುರ್ದೈವಿ.
ಬೆಂಗಳೂರು ಹೊರವಲಯದ ಚಂದಾಪುರ ಸಮೀಪದ ಹೀಲಲಿಗೆಯಲ್ಲಿ ಘಟನೆ ನಡೆದಿದೆ. ಅರಸೀಕೆರೆ ಮೂಲದ ಕರಡಿಹಳ್ಳಿ ಗ್ರಾಮದ ವಿದ್ಯಾರ್ಥಿನಿ ಹರ್ಷಿತ ಕಾಲೇಜು ಹಾಸ್ಟೆಲ್‌ನಲ್ಲಿ ಇದ್ದಳು. ನಿನ್ನೆ ಗುರುವಾರ ರಾತ್ರಿ ಹಾಸ್ಟೆಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಪತ್ತೆಯಾಗಿದ್ದಾಳೆ.
ಕಾಲೇಜಿನವರ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಆಡಳಿತ ಮಂಡಳಿ ಸಾಕಷ್ಟು ದಿನಗಳಿಂದ ಕಿರುಕುಳ ನೀಡುತ್ತಿದ್ದರೆಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ವಿದ್ಯಾರ್ಥಿನಿ ಸಾವು ಖಂಡಿಸಿ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು ಪ್ರತಿಭಟಿಸಿದ್ದರು. ಸ್ಥಳಕ್ಕೆ ಸೂರ್ಯನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ: Murder case : ಕಳ್ಳನೆಂದು ಹಿಡಿಯಲು ಹೋದ ಸೆಕ್ಯೂರಿಟಿ ಗಾರ್ಡ್‌ಗಳು; ನೂಕಾಟದಲ್ಲಿ ಬಿದ್ದ ಯುವಕ, ಕರೆಂಟ್ ಶಾಕ್‌ನಿಂದ ಸಾವು
ರಕ್ಷಿಸಲು ಹೋದ ವಿದ್ಯಾರ್ಥಿನಿಗೆ ಎಚ್‌ಓಡಿ ಬೈಗುಳ
ಇನ್ನೂ ಪಕ್ಕದ ರೂಮಿನ ವಿದ್ಯಾರ್ಥಿನಿ ಪ್ರಗತಿ ಎಂಬಾಕೆ ಬಾಗಿಲು ತೆರೆದು ನೋಡಿದಾಗ ಹರ್ಷಿತಾ ನೇಣಿಗೆ ಶರಣಾಗಿದ್ದು ಕಂಡಿದೆ. ಕೊಠಡಿಯ ಬಾಗಿಲು ತೆರೆದು ರಕ್ಷಣೆ ಮಾಡಲು ಪ್ರಗತಿ ಮುಂದಾಗಿದ್ದಕ್ಕೆ, ಎಚ್‌ಓಡಿ ಭಾರತಿ ಎಂಬುವವರು ಕೊಠಡಿ ಬಾಗಿಲನ್ನು ತೆರೆದಿದ್ದು ಯಾಕೆ ಎಂದು ಪ್ರಶ್ನೆ ಮಾಡಿ ಬೈದಿದ್ದಾರೆ. ರಕ್ಷಣೆ ಮಾಡಲು ಮುಂದಾಗಿದ್ದೆ ತಪ್ಪಾ ಎಂದು ವಿದ್ಯಾರ್ಥಿಗಳು ಶುಕ್ರವಾರ ಪ್ರತಿಭಟಿಸಿದ್ದಾರೆ. ಹರ್ಷಿತಾ ಮೃತಪಟ್ಟಾಗ ರಕ್ಷಣೆಗೆ ಹಾಸ್ಟೆಲ್‌ನಲ್ಲಿ ಯಾರು ಇರಲಿಲ್ಲ. ವಾರ್ಡನ್, ಆಯಾ ಯಾರು ಹಾಸ್ಟೆಲ್‌ನಲ್ಲಿ ಇರಲಿಲ್ಲ. ಹಾಸ್ಟೆಲ್ ಆಡಳಿತ ವ್ಯವಸ್ಥೆ ಸರಿಯಿಲ್ಲ ಎಂದು ವಿದ್ಯಾರ್ಥಿಗಳು ಪ್ರತಿಭಟಿಸಿದರು.