ಬೆಂಗಳೂರು: ವ್ಯಕ್ತಿಗೆ ಚಾಕುವಿನಿಂದ ಇರಿದು ಕೊಲೆ (Murder case) ಮಾಡಲಾಗಿದೆ. ಬೆಂಗಳೂರಿನ (Bengaluru News) ತಲಘಟ್ಟಪುರ (Talaghattapura) ಪೊಲೀಸ್ ಠಾಣಾ ವ್ಯಾಪ್ತಿಯ ಹೆಮ್ಮಿಗೆಪುರದಲ್ಲಿ ಘಟನೆ ನಡೆದಿದೆ. ಪಂಚಲಿಂಗ (42) ಮೃತ ದುರ್ದೈವಿ.
ಪಂಚಲಿಂಗ ಲಾರಿಯಲ್ಲಿದ್ದ ಮರಳು ಅನ್ ಲೋಡಿಂಗ್ ಕೆಲಸ ಮಾಡುತ್ತಿದ್ದ. ನಿನ್ನೆ ಶುಕ್ರವಾರ ಲಾರಿ ಮನೆ ಬಳಿ ಓಡಾಡುವಾಗ ಧೂಳು ಬರುತ್ತಿದೆ ಎಂದು ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದೆ. ಪಂಚಲಿಂಗ ಅದೇ ಊರಿನ ಚಿರಂಜೀವಿ ಎಂಬಾತನೊಂದಿಗೆ ಗಲಾಟೆ ಮಾಡಿಕೊಂಡಿದ್ದಾರೆ.
ಧೂಳಿನ ವಿಚಾರವು ಗಲಾಟೆಯಲ್ಲಿ ಅಂತ್ಯವಾಗದೆ ದ್ವೇಷಕ್ಕೆ ತಿರುಗಿದೆ. ನಿನ್ನೆ ರಾತ್ರಿ ಚಿರಂಜೀವಿ ತನ್ನಿಬ್ಬರು ಸ್ನೇಹಿತರನ್ನು ಕರೆತಂದು ಪಂಚಲಿಂಗನಿಗೆ ಚಾಕು ಇರಿದಿದ್ದರು. ತೀವ್ರ ರಕ್ತಸ್ರಾವದಿಂದ ಪಂಚಲಿಂಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೊಲೆ ಮಾಡಿ ಆರೋಪಿ ಚಿರಂಜೀವಿ ಪರಾರಿ ಆಗಿದ್ದಾನೆ.
ಸ್ಥಳಕ್ಕೆ ತಲಘಟ್ಟಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
ಇದನ್ನೂ ಓದಿ: Road Accident : ಹಾಸನದಲ್ಲಿ ಹಿಟ್ ಆ್ಯಂಡ್ ರನ್‌ಗೆ ಮಾವ-ಅಳಿಯ ಬಲಿ; ಮಗಳು ಗಂಭೀರ
ಕೋಲಾರದಲ್ಲಿ ಲಾರಿ ಚಾಲಕನ ಶವ ಪತ್ತೆ
ಅಪರಿಚಿತ ಲಾರಿ ಚಾಲಕನ ಶವವು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೋಲಾರ ತಾಲೂಕಿನ ನರಸಾಪುರ ಬೈಪಾಸ್‌ನಲ್ಲಿ ಘಟನೆ ನಡೆದಿದೆ. ಲಾರಿ ಚಾಲಕನನ್ನು ಕೊಲೆ ಮಾಡಿ ಗಿಡಕ್ಕೆ ನೇತು ಹಾಕಿರುವ ಶಂಕೆ ವ್ಯಕ್ತವಾಗಿದೆ. ಸಿಮೆಂಟ್ ಪೈಪುಗಳನ್ನು ತುಂಬಿಕೊಂಡಿರುವ ಲಾರಿ ಬಳಿ ಶವ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ವೇಮಗಲ್ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಮೃತನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
Murder Case : ಮಚ್ಚಿನಿಂದ ಪತ್ನಿ ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪಾಪಿ ಪತಿ
ಆನೇಕಲ್: ಪತ್ನಿಯನ್ನು ಬರ್ಬರವಾಗಿ ಕೊಂದು (Murder case) ಪತಿಯೊಬ್ಬ ಆತ್ಮಹತ್ಯೆಗೆ (Self Harming) ಯತ್ನಿಸಿದ್ದಾನೆ. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಜಿಗಣಿ ಟೌನ್‌ನಲ್ಲಿ ಈ ಘಟನೆ ನಡೆದಿದೆ. ಅರ್ಬಿಯಾ ತಾಜ್( 24) ಮೃತ ದುರ್ದೈವಿ. ಮುಬಾರಕ್(28) ಕೊಲೆಗೈದು ಆತ್ಮಹತ್ಯೆಗೆ ಯತ್ನಿಸಿದವನು.
ಮುಬಾರಕ್ ಮಚ್ಚಿನಿಂದ ಕೊಚ್ಚಿ ಅರ್ಬಿಯಾಳನ್ನು ಕೊಲೆ ಮಾಡಿದ್ದಾನೆ. ಬಳಿಕ ತಾನೂ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅರ್ಬಿಯಾ ತಾಜ್ ಮುಬಾರಕ್‌ನ ಕಿರುಕುಳದಿಂದ ಬೇಸತ್ತಿದ್ದಳು. ಹೀಗಾಗಿ ತಿಂಗಳ ಹಿಂದೆ ತವರು ಮನೆಗೆ ಸೇರಿಕೊಂಡಿದ್ದಳು. ವಾರದ ಹಿಂದೆ ಅರ್ಬಿಯಾಳನ್ನು ಮನೆಗೆ ವಾಪಸ್ ಬರುವಂತೆ ಒತ್ತಾಯಿಸಿದ್ದ.
ಆದರೆ ಅರ್ಬಿಯಾ ತಾಜ್ ಗಂಡನ ಮನೆಗೆ ತೆರಳಲು ನಿರಾಕರಿಸಿದ್ದಳು. ಪತ್ನಿಯ ತವರು ಮನೆಗೆ ಬಂದಿದ್ದ ಮುಬಾರಕ್, ಬಾಗಿಲು ಬಡಿದಿದ್ದ. ತೆರೆಯದೇ ಇದ್ದಾಗ ಕೊಡಲಿ ಹಾಗೂ ಮಚ್ಚಿನಿಂದ ಬಾಗಿಲು ಮುರಿದು ಒಳ ನುಗ್ಗಿದ್ದಾನೆ. ನಂತರ ಮುಬಾರಕ್ ಮಚ್ಚಿನಿಂದ ಪತ್ನಿಗೆ ಹಲ್ಲೆ ನಡೆಸಿ ಬರ್ಬರವಾಗಿ ಕೊಂದಿದ್ದಾನೆ. ಇತ್ತ ಮಗಳ ಕೂಗಾಟ ಕೇಳಿ ತಾಯಿ ನೆರವಿಗೆ ಧಾವಿಸಿದಾಗ, ರೂಮಿನ ಬಾಗಿಲು ಲಾಕ್ ಮಾಡಿಕೊಂಡು ಆತ್ಮಹತ್ಯೆ ಯತ್ನಿಸಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಿಗಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗೆ ಜಿಗಣಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅರ್ಬಿಯಾ ತಾಜ್‌ಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ದೂರು ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ