Site icon Vistara News

Murder Case: ತಾಯಿ ಜತೆಗೆ ಆತ್ಮೀಯವಾಗಿದ್ದ ವ್ಯಕ್ತಿಯ ಕೊಲೆ ಮಾಡಿದ ಮಗ

ravi bhandari killed

ಬೆಂಗಳೂರು: ತಾಯಿಯ ಜತೆಗೆ ಅನ್ಯೋನ್ಯವಾಗಿದ್ದ ಎಂಬ ಕಾರಣಕ್ಕೆ ಅಡುಗೆ ಭಟ್ಟರೊಬ್ಬರನ್ನು ತಡರಾತ್ರಿ ಬೆಂಗಳೂರಲ್ಲಿ ಮಗನೊಬ್ಬ ಬರ್ಬರವಾಗಿ ಹತ್ಯೆ (Murder Case) ಮಾಡಿದ್ದಾನೆ.

ರವಿ ಭಂಡಾರಿ (44) ಮೃತ ದುರ್ದೈವಿ. ರಾಜಾಜಿನಗರದ ಪಿಜಿಯಲ್ಲಿ ಇವರು ಅಡುಗೆ ಭಟ್ಟರಾಗಿದ್ದರು. ಅಲ್ಲಿಯೇ ಅಡುಗೆ ಸಹಾಯಕಿಯಾಗಿದ್ದ ಪದ್ಮಾವತಿ ಎಂಬವರ ಮನೆಯಲ್ಲಿ ಇವರು ಕೊಲೆಯಾಗಿದ್ದಾರೆ. ರಾಜಾಜಿನಗರದ 6ನೇ ಬ್ಲಾಕ್‌ನಲ್ಲಿ ಘಟನೆ ನಡೆದಿದೆ. ಪದ್ಮಾವತಿಯ ಮಗ ರಾಹುಲ್ ಚಾಕುವಿನಿಂದ ಇರಿದು ರವಿ ಭಂಡಾರಿಯ ಹತ್ಯೆ ಮಾಡಿದ್ದಾನೆ.

ತಾಯಿಯ ಜೊತೆ ರವಿ ಭಂಡಾರಿ ಅನ್ಯೋನ್ಯವಾಗಿ ಮಾತಾಡುತ್ತಾನೆ ಎಂದು ಈತ ಸದಾ ಕೋಪದಿಂದ ಕೂಗಾಡುತ್ತಿದ್ದ. ನಿನ್ನೆ ಮೃತ ರವಿ ಭಂಡಾರಿಗೆ ಕರೆ ಮಾಡಿ,‌ ಮಾತಾಡಬೇಕೆಂದು ಮನೆಗೆ ಬಾ ಎಂದು ಕರೆಸಿಕೊಂಡಿದ್ದ. ನಂತರ ಮನೆಯಲ್ಲಿಯೇ ಕೊಲೆ ಮಾಡಿದ್ದ. ಕೊಲೆ ನಡೆದ ವೇಳೆ ಆರೋಪಿಯ ತಾಯಿ ಪದ್ಮಾವತಿ ಪಿಜಿಯಲ್ಲಿದ್ದರು. ಸದ್ಯ ಆರೋಪಿ ರಾಹುಲ್ ಫೋನ್ ಸ್ವಿಚ್ ಆಫ್ ಮಾಡಿ ಎಸ್ಕೇಪ್ ಆಗಿದ್ದಾನೆ. ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ಕಾರಿನ ಗ್ಲಾಸ್‌ ಒಡೆದು ಹಣ ಕಳವು

ಆನೇಕಲ್: ಕಾರಿನ ಗ್ಲಾಸ್ ಒಡೆದ ಕಳ್ಳರು ಕ್ಷಣಾರ್ಧದಲ್ಲಿ ಹಣದ ಬ್ಯಾಗ್ ಕದ್ದು ಎಸ್ಕೇಪ್ ಆಗಿದ್ದಾರೆ. ಈ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಸೂರ್ಯಸಿಟಿ ಸಮೀಪದ ಆತ್ರೇಯ ಆಸ್ಪತ್ರೆ ಮುಂಭಾಗ ನಡೆದಿದೆ.

ಆಶ್ವಿನ್ ರೆಡ್ಡಿ ಎಂಬವರಿಗೆ ಸೇರಿದ ಸ್ವಿಫ್ಟ್ ಕಾರನ್ನು ಆಸ್ಪತ್ರೆಯ ಮುಂಭಾಗ ಕಾರನ್ನ ನಿಲ್ಲಿಸಿ ಹೋಗಿದ್ದು, ಈ ವೇಳೆ ಹೊಂಚು ಹಾಕಿದ್ದ ಖದೀಮರು ಕಾರಿನ ಗ್ಲಾಸ್ ಒಡೆದು 27,500 ರೂ. ಇದ್ದ ಹಣದ ಬ್ಯಾಗ್ ಕದ್ದು ಎಸ್ಕೇಪ್ ಆಗಿದ್ದಾರೆ. ಕಳ್ಳರ ಕೈಚಳಕದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸೂರ್ಯನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: Murder Case : 8 ಹುಡುಗರು, ಒಬ್ಬ ಹುಡುಗಿ; ಏಕಮುಖ ಪ್ರೀತಿಗಾಗಿ ಯುವಕನ ಮರ್ಡರ್‌; ಆದರೆ, ಪ್ರೀತಿಸಿದ್ದು ಅವನಲ್ಲ!

Exit mobile version