Site icon Vistara News

Murder Case : ಪೊಲೀಸನೇ ಇಲ್ಲಿ ಕ್ರಿಮಿನಲ್; ಬಾಣಂತಿ ಪತ್ನಿಯ ಉಸಿರುಗಟ್ಟಿಸಿ ಕೊಂದ ಧೂರ್ತ

Police constable kills wife

ಹೊಸಕೋಟೆ, ಬೆಂಗಳೂರು ಗ್ರಾಮಾಂತರ : ಪೊಲೀಸರಿಗೆ ಪ್ರತಿಯೊಂದು ವಿಚಾರದಲ್ಲೂ ಅನುಮಾನಗಳು (Suspicious nature) ಇರುವುದು ಸಹಜ. ಅದು ಅವರ ವೃತ್ತಿ ಬದುಕಿನ ಭಾಗ. ಆದರೆ, ಇಲ್ಲೊಬ್ಬ ಧೂರ್ತ ಅನುಮಾನ ಪಿಶಾಚಿಯಾಗಿ ವರ್ತಿಸಿ ತನ್ನ ಪತ್ನಿಯನ್ನೇ ಉಸಿರುಗಟ್ಟಿಸಿ (Husband kills wife) ಕೊಂದಿದ್ದಾನೆ. ಬಳಿಕ ತಪ್ಪಿಸಿಕೊಳ್ಳಲು ಕ್ರಿಮಿನಲ್‌ ನಾಟಕವಾಡಿದ್ದಾನೆ. ಅಂದ ಹಾಗೆ ಆ ಹೆಣ್ಮಗಳು ಒಂದು ಪುಟ್ಟ ಮಗುವಿಗೆ ಜನ್ಮ ಕೊಟ್ಟು ಇನ್ನೂ 11 ದಿನ ದಾಟಿಲ್ಲ. ಆಗಲೇ ಕೊಲೆಯಾಗಿದ್ದಾಳೆ (Murder Case), ಈಗ ಮಗು ಅನಾಥವಾಗಿದೆ.

ಹೊಸಕೋಟೆ ತಾಲೂಕಿನ ಕೊಳತ್ತೂರು ಗ್ರಾಮದಲ್ಲಿ ಈ ಭೀಕರ ಘಟನೆ ನಡೆದಿದೆ. ಕೊಳತೂರು ನಿವಾಸಿ ಪ್ರತಿಭಾ (23) ಕೊಲೆಯಾದ ಬಾಣಂತಿ ಹೆಣ್ಮಗಳು. ಪೊಲೀಸ್‌ ಪೇದೆಯಾಗಿರುವ (Police Constable) ಗಂಡ ಕಿಶೋರ್‌ ಎಂಬಾತನೇ ಪತ್ನಿಯನ್ನು ಕೊಲೆ ಮಾಡಿದ ಧೂರ್ತ. ಅನುಮಾನ ಮತ್ತು ಸೈಕೋ ವರ್ತನೆಗಳೇ ಮೈವೆತ್ತಂತಿದ್ದ ಆತ ಇದೀಗ ತನ್ನದೇ ಮಗುವನ್ನು ಅನಾಥ ಶಿಶುವಾಗಿಸಿದ್ದಾನೆ.

ಕಿಶೋರ್‌ ಚಾಮರಾಜನಗರದಲ್ಲಿ ಪೊಲೀಸ್‌ ಪೇದೆಯಾಗಿದ್ದಾನೆ. ಅವನಿಗೂ ಕೊಳತ್ತೂರಿನ ಪ್ರತಿಭಾಳಿಗೂ ಒಂದು ವರ್ಷದ ಹಿಂದಷ್ಟೇ ಮದುವೆಯಾಗಿತ್ತು. ಮದುವೆಯಾದ ಕೆಲವೇ ದಿನಗಳಲ್ಲಿ ಕಿಶೋರ್‌ ತನ್ನ ಸೈಕೋ ಬುದ್ಧಿಯನ್ನು ತೋರಿಸಲು ಶುರು ಮಾಡಿದ್ದ ಮತ್ತು ಆಕೆಯನ್ನು ಬಗೆ ಬಗೆಯಾಗಿ ಕಾಡುತ್ತಿದ್ದ ಎನ್ನಲಾಗಿದೆ.

ಈ ನಡುವೆ ಪ್ರತಿಭಾ ಗರ್ಭಿಣಿಯಾಗಿದ್ದಾಳೆ. ಆದರೆ, ಈ ಸ್ಥಿತಿಯಲ್ಲೂ ಆತ ಆಕೆಯನ್ನು ಬಿಡದೆ ಕಾಡಿದ್ದಾನೆ. ಯಾವಾಗಲೂ ಅನುಮಾನಪಡುವುದೇ ಅವನ ಜಾಯಮಾನವಾಗಿತ್ತು. ಜತೆಗೆ ನಮ್ಮ ಕಡೆಯವರನ್ನು ನೀನು ಸರಿಯಾಗಿ ನೋಡುತ್ತಿಲ್ಲ ಎಂದು ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಮದುವೆಯಾದ ಒಂದು ವರ್ಷದಲ್ಲೇ ಹಲವು ಬಾರಿ ಗಲಾಟೆಯಾಗಿದೆ. ಜತೆಗೆ ಮಾತುಕತೆಗಳು ನಡೆದು ಸರಿ ಹೋಗಿದೆ.

ಕೆಲವು ತಿಂಗಳ ಹಿಂದೆ ಪ್ರತಿಭಾ ಮೊದಲ ಹೆರಿಗೆಗಾಗಿ ತಾಯಿ ಮನೆಯಾದ ಕೊಳತ್ತೂರಿಗೆ ಬಂದಿದ್ದಾಳೆ. ಆಸ್ಪತ್ರೆಯಲ್ಲಿ ಹೆರಿಗೆಯಾಗಿ ಮತ್ತೆ ತಾಯಿ ಮನೆಯಲ್ಲಿ ಬಾಣಂತನ ನಡೆಯುತ್ತಿದೆ.

ಸೋಮವಾರ ಕಿಶೋರ್‌ ಪತ್ನಿ ಮತ್ತು ಮಗುವನ್ನು ನೋಡುವ ನೆಪದಲ್ಲಿ ಕೊಳತ್ತೂರಿನ ಮನೆಗೆ ಬಂದಿದ್ದಾನೆ. ಈ ನಡುವೆ, ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ನೋಡಿದ ಈ ಧೂರ್ತ ಪೊಲೀಸ್‌ ತನ್ನ ಹೆಂಡತಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

ಬಳಿಕ ಆಕೆ ತಾನೇ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸುವುದಕ್ಕಾಗಿ ಫ್ಯಾನ್‌ಗೆ ಸೀರೆಯನ್ನು ನೇತು ಹಾಕಿದ್ದಾನೆ. ಆದರೆ, ಅಷ್ಟು ಹೊತ್ತಿಗೆ ಮನೆಯವರು ಬಂದಿದ್ದರಿಂದ ಆತನ ಪ್ಲ್ಯಾನ್‌ ವಿಫಲವಾಗಿದೆ. ಮನೆಯವರು ಬಂದಿದ್ದನ್ನು ನೋಡಿದ ಆತ ತಕ್ಷಣವೇ ಅಲ್ಲಿಂದ ಎಸ್ಕೇಪ್‌ ಆಗಿದ್ದಾನೆ.

ಇದೀಗ ಬಾಣಂತನಕ್ಕೆ ಬಂದ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಆರೋಪಿ ಕಿಶೋರ್‌ ತಲೆಮರೆಸಿಕೊಂಡಿದ್ದಾನೆ. ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟ‌ನೆ ನಡೆದಿದ್ದು, ಧೂರ್ತ ಪೊಲೀಸ್‌ ಪೇದೆಗಾಗಿ ಹುಡುಕಾಟ ನಡೆಯುತ್ತಿದೆ.

Exit mobile version