Site icon Vistara News

Murder Case: ಕೊಲೆ ಆರೋಪಿಯನ್ನು ಹೋಟೆಲ್‌ನೊಳಗೆ ಕೊಚ್ಚಿ ಹತ್ಯೆ

jaiprakash murderd

ಬೆಂಗಳೂರು: ರೌಡಿ ಶೀಟರ್ ಹಾಗೂ ಕೊಲೆ ಆರೋಪಿಯೊಬ್ಬನನ್ನು ಹೋಟೆಲ್‌ನೊಳಗಡೆಯೇ ಬರ್ಬರವಾಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ (Murder Case) ಮಾಡಲಾಗಿದೆ. ಆಡುಗೋಡಿ ಠಾಣೆ ವ್ಯಾಪ್ತಿಯ ಲಕ್ಕಸಂದ್ರದಲ್ಲಿ ಘಟನೆ ನಡೆದಿದೆ.

ಜೈಪ್ರಕಾಶ್ ಅಲಿಯಾಸ್‌ ಅಪ್ಪಿ ಕೊಲೆಯಾದ ರೌಡಿಶೀಟರ್. ಈತ ಆಟೋ‌ ಚಾಲಕನಾಗಿ ಜೀವನ ನಡೆಸುತ್ತಿದ್ದ. ಜೈಪ್ರಕಾಶ್‌ 2006ರಲ್ಲಿ ಕೊಲೆ ಪ್ರಕರಣವೊಂದರಲ್ಲಿ ಜೈಲಿಗೆ ಹೋಗಿ ಬಂದಿದ್ದ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರುವ ಶಂಕೆ ಇದೆ.

ನಿನ್ನೆ ಸಂಜೆ ಏಳು ಗಂಟೆ ಸುಮಾರಿಗೆ ಘಟನೆ ನಡೆದಿದೆ. ಲಕ್ಕಸಂದ್ರ ಬಸ್ ನಿಲ್ದಾಣ ಬಳಿಯ ಆಂಜನೇಯ ದೇವಸ್ಥಾನದ ಬಳಿ ಇದ್ದ ಜೈಪ್ರಕಾಶ್ ಹನುಮಜಯಂತಿ ಹಿನ್ನೆಲೆಯಲ್ಲಿ ಅನ್ನದಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ. ಈ ವೇಳೆ ಕೆಲ ಹೊತ್ತು ಜೈಪ್ರಕಾಶ್‌ನನ್ನು ಗಮನಿಸಿದ್ದ ನಾಲ್ಕೈದು ಜನ ಆರೋಪಿಗಳು ಏಳು ಗಂಟೆ ಸುಮಾರಿಗೆ ಏಕಾಏಕಿ ಮಾರಕಾಸ್ತ್ರಗಳಿಂದ ಅಟ್ಯಾಕ್ ಮಾಡಿದ್ದಾರೆ.

ಇವರಿಂದ ತಪ್ಪಿಸಿಕೊಳ್ಳಲು ಕೆಲ ದೂರ ಓಡಿದ್ದ ಜೈಪ್ರಕಾಶ್ ವಿಜಯ ಸಾಗರ ಹೋಟೆಲ್‌ಗೆ ನುಗ್ಗಿದ್ದಾನೆ. ಆರೋಪಿಗಳೂ ಹೋಟೆಲ್‌ಗೆ ನುಗ್ಗಿ ಅಲ್ಲಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ.

ಹತ್ಯೆ ನಡೆದ ಸ್ಥಳದಲ್ಲಿ ಬಿಗುವಿನ ವಾತಾವರಣ ಇದೆ. ಸ್ಥಳದಲ್ಲಿ ಕೆ.ಎಸ್.ಆರ್.ಪಿ ತುಕಡಿ‌ ನಿಯೋಜನೆ ಮಾಡಲಾಗಿದೆ. ಸ್ಥಳಕ್ಕೆ ಎಫ್.ಎಸ್.ಎಲ್ ಹಾಗು ಡಾಗ್ ಸ್ಕ್ವಾಡ್ ಆಗಮಿಸಿದ್ದು, ಆಗ್ನೇಯ ವಿಭಾಗ ಡಿಸಿಪಿ ಸಿ.ಕೆ.ಬಾಬಾ ಆಗಮಿಸಿ ಪರಿಶೀಲಿಸಿದ್ದಾರೆ. ಆಡುಗೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. “ಜಯಪ್ರಕಾಶ್ ಹತ್ಯೆ ಆರೋಪಿಗಳ ಪತ್ತೆಗೆ ಆಡುಗೋಡಿ, ಕೋರಮಂಗಲ ಠಾಣಾಧಿಕಾರಿ ಸೇರಿ 5 ತಂಡ ರಚನೆ ಮಾಡಲಾಗಿದೆ” ಎಂದು ಡಿಸಿಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ.

ಇದನ್ನೂ ಓದಿ: Rowdy Sheeter Murder : ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿ ಶೀಟರ್‌ ಮರ್ಡರ್‌, ಬೈಕ್‌ಗೆ ಒಮ್ನಿ ಡಿಕ್ಕಿ ಹೊಡೆಸಿ ಕೃತ್ಯ

Exit mobile version