Site icon Vistara News

Murder Case : ʻನನ್ನ ಜೈಲಿಗೆ ಕಳ್ಸಿʼ ಎಂದ ಪ್ರತಿಮಾ ಕೊಲೆಗಾರ! 10 ದಿನ ಪೊಲೀಸರ ವಶಕ್ಕೆ

Kiran

ಬೆಂಗಳೂರು: ನನ್ನ ಜೈಲಿಗೆ ಕಳುಹಿಸಿ ಎಂದು ನ್ಯಾಯಾಧೀಶರ ಮುಂದೆ ಪ್ರತಿಮಾ ಕೊಲೆ (Murder Case) ಆರೋಪಿ ಕಾರು ಚಾಲಕ ಕಿರಣ್‌ ಹೇಳಿಕೆ ನೀಡಿದ್ದಾನೆ. ಕೆಲಸದಿಂದ ತೆಗೆದುಹಾಕಿದ ಸಿಟ್ಟಿಗೆ ಕಾರು ಚಾಲಕ ಕಿರಣ್‌ ಗಣಿ ಮತ್ತು ಭೂವಿಜ್ಞಾನ (Mines and Geology) ಇಲಾಖೆಯ ಹಿರಿಯ ಭೂವಿಜ್ಞಾನಿ ಪ್ರತಿಮಾರ ಕತ್ತು ಹಿಸುಕಿ ಬಳಿಕ ಚಾಕುವಿನಿಂದ ಹಿರಿದು ಕೊಲೆ ಮಾಡಿದ್ದ. ಕೃತ್ಯ ಬೆಳಕಿಗೆ ಬಂದ 24 ಗಂಟೆಯೊಳಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.

ನ.5ರಂದೇ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕಿರಣ್‌ ತಾನೇ ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದ. ನ.6 ರ ಸೋಮವಾರ ಪೊಲೀಸರು ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಆರೋಪಿಯನ್ನು ಹಾಜರು‌ ಪಡಿಸಿದರು. ಈ ವೇಳೆ ವಿಚಾರಣೆ ನಡೆಸಿದ ನ್ಯಾಯಾಧೀಶರು 10 ದಿನ ಪೊಲೀಸ್ ಕಸ್ಟಡಿ ನೀಡಿ ಆದೇಶಿಸಿದರು.

ಇದಕ್ಕೂ ಮೊದಲು ಮ್ಯಾಜಿಸ್ಟ್ರೇಟ್ ಕಿರಣ್‌ಗೆ ಹಲವು ಪ್ರಶ್ನೆಗಳನ್ನು ಕೇಳಿದರು. ನೀನು ಬಂಧನವಾಗಿರುವುದನ್ನು ಪೊಲೀಸರು ನಿನ್ನ ಕುಟುಂಬಕ್ಕೆ ಮಾಹಿತಿ ನೀಡಿದ್ದಾರಾ?ಏನಾದರೂ ತೊಂದರೆ ಕೊಟ್ಟಿದ್ದೀರಾ? ಪೊಲೀಸರು ಕಸ್ಟಡಿಗೆ ಕೇಳುತ್ತಿದ್ದಾರೆ ಏನು ಮಾಡುತ್ತೀರಾ ಎಂದಾಗ, ನನ್ನ ಜೈಲಿಗೆ ಕಳುಹಿಸಿ ಸ್ವಾಮಿ ಎಂದು ಕಿರಣ್‌ ಹೇಳಿದ್ದಾನೆ.

ಇದನ್ನೂ ಓದಿ: Murder Case : ಒಕ್ಕಲಿಗ ಸಂಪ್ರದಾಯದಂತೆ ನೆರವೇರಿದ ಪ್ರತಿಮಾ ಅಂತ್ಯಕ್ರಿಯೆ; ಮಗಳನ್ನು ಅಪ್ಪಿ ರೋದಿಸಿದ ಪೋಷಕರು

ಏನಿದು ಪ್ರಕರಣ?

ಬೆಂಗಳೂರು: ಗಣಿ ಮತ್ತು ಭೂವಿಜ್ಞಾನ (Mines and Geology) ಇಲಾಖೆಯ ಹಿರಿಯ ಭೂವಿಜ್ಞಾನಿ (Senior Scientist) ಪ್ರತಿಮಾ (45) ಅವರನ್ನು ನ. 4ರಂದು ಕುತ್ತಿಗೆಗೆ ಹಗ್ಗ ಬಿಗಿದು ಕತ್ತು ಕೊಯ್ದು ಕೊಲೆ (Murder Case) ಮಾಡಲಾಗಿತ್ತು. ಅವರದೇ ಕಾರಿನ ಚಾಲಕ ಕಿರಣ್‌ (30) ಕೊಲೆ ಆರೋಪಿ ಆಗಿದ್ದ. ಕೊಲೆಯಾದ ನವೆಂಬರ್‌ ನಾಲ್ಕರಿಂದಲೇ ತಲೆಮರೆಸಿಕೊಂಡಿದ್ದ ಆತನನ್ನು ಮಲೆ ಮಹದೇಶ್ವರ ಬೆಟ್ಟದ ಸಮೀಪ (Driver Kiran Arrested) ಬಂಧಿಸಲಾಗಿತ್ತು. ಪ್ರತಿಮಾ ಕೊಲೆ ಬಳಿಕ ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದ ಮೂಲಕ ತಮಿಳುನಾಡಿನ ಕಡೆಗೆ ಹೊರಟಿದ್ದಾನೆ ಎನ್ನುವ ಮಾಹಿತಿಯನ್ನು ಪಡೆದ ಪೊಲೀಸರು ಎಲ್ಲೆಡೆ ಅಲರ್ಟ್‌ ಮಾಡಿದ್ದರು. ನ.5ರಂದೇ ಆತನನ್ನು ಬಂಧಿಸಿ ತಲ್ಲಘಟ್ಟಪುರ ಪೊಲೀಸ್ ಠಾಣೆಗೆ ತರಲಾಗಿತ್ತು.

ನ.4ರಂದು ರಾತ್ರಿ ದೊಡ್ಡಕಲ್ಲಸಂದ್ರದ ಗೋಕುಲ್ ಅಪಾರ್ಟ್‌ಮೆಂಟ್‌ನಲ್ಲಿ ಭೂ ವಿಜ್ಞಾನಿ ಪ್ರತಿಮಾ (45) ಅವರ ಕೊಲೆಯಾಗಿತ್ತು. ರಾತ್ರಿ ಕರೆಗೆ ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ಅವರ ಸಹೋದರ ಪಕ್ಕದ ಮನೆಯವರ ಬಳಿ ಪರಿಶೀಲಿಸುವಂತೆ ತಿಳಿಸಿದ್ದರು. ಆಗ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು. ಈ ಕೊಲೆಯ ಹಿಂದೆ ಹಲವು ಅನುಮಾನಗಳು ಎದ್ದು ಬಂದಿದ್ದವು. ಬಳಿಕ ಅವರ ಕಾರು ಚಾಲಕನೇ ಕೊಲೆಗಾರ ಎಂದು ತಿಳಿದುಬಂದಿತ್ತು.

ಕೊಲೆಯನ್ನು ಒಪ್ಪಿಕೊಂಡಿರುವ ಕಿರಣ್‌

ಕೊಲೆಯಾದ ದಿನ ಕಪ್ಪು ಬಣ್ಣದ ಟೀ ಶರ್ಟ್‌ ಮತ್ತು ಕಪ್ಪು ಬಣ್ಣದ ನೈಟ್‌ ಪ್ಯಾಂಟ್‌ ಧರಿಸಿದ್ದ ಆರೋಪಿ ಕಿರಣ್‌, ಬಂಧನದ ಹೊತ್ತಿನಲ್ಲೂ ಅದೇ ದಿರಿಸಿನಲ್ಲಿದ್ದ. ಕೊಲೆ ನಡೆದ ದಿನವೇ ಆತನ ಮೇಲೆ ಒಂದು ಕಣ್ಣಿತ್ತು. ಅದರ ಜತೆಗೆ ಅವನು ನಾಪತ್ತೆ ಕೂಡಾ ಆಗಿದ್ದ. ಇದಾದ ಬಳಿಕ ಆತನ ಮೊಬೈಲ್‌ ಕೂಡಾ ಸ್ವಿಚ್‌ ಆಫ್‌ ಆಗಿತ್ತು. ಆತನ ಮೊಬೈಲ್‌ನ್ನು ಪೊಲೀಸರು ಟ್ರ್ಯಾಕ್‌ನಲ್ಲಿ ಇಟ್ಟಿದ್ದರು. ಹೀಗಾಗಿ ಅದು ಮಲೆಮಹದೇಶ್ವರ ಬೆಟ್ಟದ ಪರಿಸರದಲ್ಲಿ ಆಫ್‌ ಆಗಿದ್ದು ಸ್ಪಷ್ಟವಾಗಿತ್ತು. ಭಾನುವಾರ ಸಂಜೆಯೇ ಆತನನ್ನು ಬಂಧಿಸಲಾಗಿತ್ತು.

ಕೊಲೆಗೆ ಏನು ಕಾರಣ?

ಪ್ರತಿಮಾ ಅವರಿಗೆ ಕಿರಣ್‌ ಕಾರು ಚಾಲಕನಾಗಿದ್ದ. ಆದರೆ ಆತನ ವರ್ತನೆಗಳು ಪ್ರತಿಮಾ ಅವರಿಗೆ ಸರಿ ಹೋಗುತ್ತಿರಲಿಲ್ಲ . ಕೆಲವು ತಿಂಗಳ ಹಿಂದೆ ಆತ ಪ್ರತಿಮಾ ಅವರು ಬಳಸುತ್ತಿದ್ದ ಕಾರನ್ನು ಅಪಘಾತ ಮಾಡಿದ್ದ. ಇದರಿಂದ ಆತ ಯಾವ ಕಾರಣಕ್ಕೂ ತನಗೆ ಚಾಲಕನಾಗಿ ಬೇಡ ಎಂದು ಪ್ರತಿಮಾ ಹೇಳಿದ್ದರು ಎನ್ನಲಾಗಿದೆ. ಆತ ಹಲವು ಬಾರಿ ಮರಳಿ ಸೇರಿಸಿಕೊಳ್ಳಿ ಎಂದು ಕೇಳಿಕೊಂಡಿದ್ದರೂ ಪ್ರತಿಮಾ ಒಪ್ಪಿರಲಿಲ್ಲ. ಆದರೆ, ಶನಿವಾರ ರಾತ್ರಿ ಅನಿವಾರ್ಯವಾಗಿ ಅವನ ಕಾರಿನಲ್ಲೇ ಪ್ರತಿಮಾ ಅವರು ಮನೆಗೆ ಬಂದಿದ್ದಾರೆ ಎನ್ನಲಾಗಿದೆ. ಈ ವೇಳೆ ಕಿರಣ್‌ನ ಆಕ್ರೋಶ ಭುಗಿಲೆದ್ದು ಕೊಲೆ ನಡೆದಿದೆ.

ಹಾಗಿದ್ದರೆ ಕೊಲೆ ನಡೆದಿದ್ದು ಹೇಗೆ?

ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಕಿರಣ್‌ ಪ್ರತಿಮಾ ಅವರನ್ನು ಮನೆಗೆ ಡ್ರಾಪ್‌ ಮಾಡಿದ್ದಾನೆ. ಪ್ರತಿಮಾ ಅವರು ಕಾರಿನಿಂದ ಇಳಿದು ಮೆಟ್ಟಿಲು ಹತ್ತಿ ತಮ್ಮ ಮನೆಗೆ ಹೋಗಿದ್ದಾರೆ. ಮಳೆ ಬರುತ್ತಿದ್ದ ಹಿನ್ನೆಲೆಯಲ್ಲಿ ʻಇಷ್ಟು ಜೋರು ಮಳೆ ಬರುತ್ತಿದೆಯಲ್ಲ.. ಹೇಗೆ ಹೋಗುತ್ತೀರಿʼ ಎಂದು ಕೇಳಿದ್ದಾರೆ. ಆಗ ಕಿರಣ್‌ ಬೈಕ್‌ನಲ್ಲಿ ಹೋಗುತ್ತೇನೆ ಎಂದಿದ್ದಾನೆ.

ಈ ನಡುವೆ, ಕಿರಣ್‌ನೊಳಗಿನ ಹಿಂಸ್ರಪಶು ಎದ್ದುನಿಂತಿದ್ದಾನೆ. ಆತ ಮನೆಗೆಂದು ಹೊರಟವನು ಮಳೆಯ ನೆಪ ಮಾಡಿ ಮರಳಿ ಬಂದಿದ್ದಾನೆ. ಮೇಲಿನ ಮಹಡಿಗೆ ಹೋದ ಪ್ರತಿಮಾ ಅವರು ತಮ್ಮ ಕೈಲಿದ್ದ ಲಂಚ್‌ ಬಾಕ್ಸ್‌ನ್ನು ಕೆಳಗಿಟ್ಟು ಮೊದಲು ಕಬ್ಬಿಣದ ಗ್ರಿಲ್‌ ಡೋರ್‌ ಓಪನ್‌ ಮಾಡಿದ್ದಾರೆ, ಬಳಿಕ ಮರದ ಬಾಗಿಲು ತೆಗೆದಿದ್ದಾರೆ.

ಈ ಹಂತದಲ್ಲೇ ಕಿರಣ್‌ ಮೆಟ್ಟಿಲು ಹತ್ತಿಕೊಂಡು ಮೇಲೆ ಬಂದಿದ್ದಾನೆ. ಹಿಂದಿನಿಂದ ಪ್ರತಿಮಾ ಅವರ ಕುತ್ತಿಗೆಗೆ ಹಗ್ಗವನ್ನು ಬಿಗಿದು ನೇರವಾಗಿ ಒಳಗೆ ಎಳೆದುಕೊಂಡು ಹೋಗಿದ್ದಾನೆ. ಅಲ್ಲಿ ಕುತ್ತಿಗೆಯನ್ನು ಇಷ್ಟು ಗಟ್ಟಿಯಾಗಿ ಬಿಗಿದುದಲ್ಲದೆ, ಕುತ್ತಿಗೆಯನ್ನು ಚಾಕುವಿನಿಂದ ಸೀಳಿದ್ದಾನೆ. ಮತ್ತು ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ.

ಮೊದಲೇ ದಾಳಿಯ ಸುಳಿವು ನೀಡುತ್ತಿದ್ದ ಕಿರಣ್‌

ಪ್ರತಿಮಾ ಅವರು ಖಡಕ್‌ ಅಧಿಕಾರಿಯಾಗಿದ್ದು, ಸಾಕಷ್ಟು ಕಡೆ ಅಕ್ರಮ ಗಣಿಗಳಿಗೆ ದಾಳಿ ನಡೆಸಿದ್ದರು. ಆದರೆ, ಕೆಲವೊಂದು ದಾಳಿಗಳ ಮಾಹಿತಿ ಮೊದಲೇ ಅಪರಾಧಿಗಳಿಗೆ ತಿಳಿದು ಅವರೆಲ್ಲ ತಪ್ಪಿಸಿಕೊಳ್ಳುತ್ತಿದ್ದರು. ಇದರ ಹಿಂದೆ ಕಿರಣ್‌ನ ಕೈವಾಡ ಇರುವುದನ್ನು ತಿಳಿದು ಪ್ರತಿಮಾ ಅವರು ತಮ್ಮ ಕಾರಿನ ಚಾಲಕನ ಸ್ಥಾನದಿಂದ ಕಿತ್ತು ಹಾಕುವಂತೆ ಸೂಚಿಸಿದ್ದರು. ಆದರೆ, ಈ ಕನೆಕ್ಷನ್‌ ತಪ್ಪಿದ್ದರಿಂದ ಹತಾಶನಾಗಿದ್ದ ಆತ ತನ್ನನ್ನು ಮರಳಿ ಸೇರಿಸಿಕೊಳ್ಳುವಂತೆ ಕಾಲಿಗೆ ಬಿದ್ದೆಲ್ಲ ವಿನಂತಿಸಿದ್ದ! ಆದರೆ, ಪ್ರತಿಮಾ ಅವರು ಒಪ್ಪದೆ ಇದ್ದುದರಿಂದ ಈ ರೀತಿ ಸೇಡು ತೀರಿಸಿಕೊಂಡಿದ್ದಾನೆ ಎನ್ನಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version