ಬೆಂಗಳೂರು: ಮನೆ ಆಡಳಿತ ತನ್ನ ಕೈಗೇ ಸಿಗಬೇಕು ಎಂಬ ದುರಾಸೆಯಿಂದ ಅತ್ತೆಯನ್ನು ಪ್ರಿಯಕರನ ಜತೆ ಸೇರಿ ಕೊಂದುಹಾಕಿದ (Murder Case) ಸೊಸೆ ಹಾಗೂ ಇನ್ನಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬ್ಯಾಡರಹಳ್ಳಿಯಲ್ಲಿ ಈ ಕೊಲೆ (Byadarahalli murder) ನಡೆದಿದ್ದು, ಪೊಲೀಸರಿಂದ ಮೂವರು ಆರೋಪಿಗಳ ಬಂಧನವಾಗಿದೆ. ರಶ್ಮಿ, ಪುರುಷೋತ್ತಮ್, ಅಕ್ಷಯ್ ಬಂಧಿತ ಆರೋಪಿಗಳು. ಪ್ರಿಯಕರ ಹಾಗೂ ಆತನ ಸ್ನೇಹಿತನ ಜೊತೆ ಸೇರಿ ಅತ್ತೆ ಲಕ್ಷ್ಮಮ್ಮ ಅವರನ್ನು ಆರೋಪಿತೆ ರಶ್ಮಿ ಕೊಂದಿದ್ದಳು.
ಮಂಜುನಾಥ್ ಎಂಬವರನ್ನು ಮದುವೆಯಾಗಿದ್ದ ರಶ್ಮಿ, ಕದ್ದು ಮುಚ್ಚಿ ತಮ್ಮ ಮನೆಯ ಮೇಲಿನ ಭಾಗದಲ್ಲಿ ಬಾಡಿಗೆಗೆ ಇದ್ದ ಅಕ್ಷಯ್ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಮನೆಯ ಹಣದ ವ್ಯವಹಾರಕ್ಕೆ ಲಕ್ಷ್ಮಮ್ಮ ಹಾಗೂ ರಶ್ಮಿ ಮಧ್ಯೆ ಆಗಾಗ ಜಗಳ ಆಗುತ್ತಿತ್ತು.
ತಾನೇ ಮನೆ ವ್ಯವಹಾರ ನೋಡಿಕೊಳ್ಳಬೇಕು ಎಂದು ರಶ್ಮಿ ಸ್ಕೆಚ್ ಹಾಕಿದ್ದಳು. ಅದಕ್ಕೆ ಪ್ರಿಯಕರನ ಜೊತೆ ಸೇರಿ ಅತ್ತೆಯನ್ನೇ ಕೊಲೆ ಮಾಡುವ ಪ್ಲಾನ್ ಮಾಡಿದ್ದಳು. ಕಳೆದ 10ನೇ ತಾರೀಕು ಪ್ರಿಯಕರ ಅಕ್ಷಯ್ ಹಾಗೂ ಆತನ ಸ್ನೇಹಿತ ಪುರುಷೋತ್ತಮ್ ಜೊತೆ ಸೇರಿ ಕೊಲೆ ಮಾಡಿದ್ದಳು. ಮೊದಲು ನಿದ್ರೆ ಮಾತ್ರೆ ಕೊಟ್ಟಿದ್ದ ರಶ್ಮಿ, ನಂತರ ಪ್ರಿಯಕರ ಅಕ್ಷಯ್ ಮತ್ತು ಪುರುಷೋತ್ತಮ್ ಜೊತೆ ಸೇರಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಳು.
ನಂತರ ಅತ್ತೆಗೆ ಹಾರ್ಟ್ ಅಟ್ಯಾಕ್ ಆಗಿದೆ ಎಂದು ಎಲ್ಲರನ್ನೂ ನಂಬಿಸಿದ್ದಳು. ಆದರೆ ಈಕೆಯ ದುಷ್ಕೃತ್ಯ ಒಂದು ಮೊಬೈಲ್ ಚಾಟಿಂಗ್‌ನಿಂದ ಬಯಲಾಗಿದೆ. ಅದೇ ಬಿಲ್ಡಿಂಗ್‌ನ 1ನೇ ಮಹಡಿಯಲ್ಲಿ ವಾಸವಿದ್ದ ರಾಘವೇಂದ್ರ ಎಂಬವರಿಂದ ಈ ವಿಚಾರ ಬೆಳಕಿಗೆ ಬಂದಿದೆ.
ಅಕ್ಷಯ್ ಮೊಬೈಲ್ ಪರಿಶೀಲನೆ ನಡೆಸಿದ್ದ ರಾಘವೇಂದ್ರ ಅವರಿಗೆ, ಅಕ್ಷಯ್ ಮತ್ತು ರಶ್ಮಿ ನಡುವೆ ನಡೆದ ಚಾಟಿಂಗ್ ವಿಚಾರ ಗೊತ್ತಾಗಿತ್ತು. ಅದನ್ನು ರಶ್ಮಿಯ ಪತಿ ಮಂಜುನಾಥ್‌ಗೆ ತಿಳಿಸಿದ್ದರು. ಅಲ್ಲದೇ ಚಾಟಿಂಗ್ ಮಾಡಿರುವ ಸಾಕ್ಷ್ಯ ಕೂಡ ಕಲೆ ಹಾಕಿದ್ದರು. ನಂತರ ಸಾಕ್ಷಿ ಸಮೇತ ಬ್ಯಾಡರಹಳ್ಳಿ ಠಾಣೆಗೆ ದೂರು ರಶ್ಮಿ ಪತಿ ಮಂಜುನಾಥ್ ದೂರು ನೀಡಿದ್ದರು. ಸದ್ಯ ಮೂವರು ಆರೋಪಿಗಳನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: murder | ಒಂದು ಗುಂಟೆ ಜಾಗಕ್ಕಾಗಿ ಅಪ್ಪನನ್ನೇ ಕಟ್ಟಿಗೆಯಿಂದ ತಲೆಗೆ ಬಡಿದು ಕೊಂದ ಮಗ