ಬೆಂಗಳೂರು: ರಾಜಧಾನಿಯಲ್ಲಿ ಪತ್ನಿಯೇ ತನ್ನ ಗಂಡನನ್ನು ಎದೆಗೆ ಚೂರಿ ಹಾಕಿ ಕೊಂದ (Woman kills her husband) ಭಯಾನಕ ಘಟನೆ (Murder Case) ನಡೆದಿದೆ. ಅನೈತಿಕ ಸಂಬಂಧದ (Illicit Relationship) ಬಗ್ಗೆ ಸಂಶಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಜಗಳ ಆರಂಭವಾಗಿ ಈ ಕೊಲೆ ನಡೆದಿದೆ. ಹುಳಿಮಾವು ಸಮೀಪದ ಪುಲ್ಲಿಂಗ್ ಪಾಸ್ ಕಾಲೇಜಿನ ಬಳಿ ಈ ಘಟನೆ ನಡೆದಿದೆ. ಉಮೇಶ್ ದಾಮಿ (27) ಎಂಬಾತನನ್ನು ಆತನ ಪತ್ನಿ ಮನಿಷಾ ದಾಮಿ ಕೊಲೆ ಮಾಡಿದ್ದಾಳೆ.
ಉಮೇಶ್ ದಾಮಿ ಮತ್ತು ಮನೀಷಾ ಹೊರರಾಜ್ಯದವರು. ಇಲ್ಲಿನ ಕಾಲೇಜಿನಲ್ಲಿ ಸೆಕ್ಯುರಿಟಿ ಹಾಗು ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು. ಕಾಲೇಜು ಆವರಣದಲ್ಲೇ ಅವರ ವಾಸವಿತ್ತು.
ಬುಧವಾರ ರಾತ್ರಿ ಉಮೇಶ್ ಗೆಳೆಯನೊಂದಿಗೆ ಎಣ್ಣೆ ಪಾರ್ಟಿಗೆ ಹೋಗಿದ್ದ. ಕುಡಿತ ಎಲ್ಲ ಮುಗಿಸಿ ರಾತ್ರಿ 12 ಗಂಟೆ ಸುಮಾರಿಗೆ ಮನೆಗೆ ವಾಪಸ್ಸಾಗಿದ್ದ. ಈ ವೇಳೆ ಮನಿಷಾ ಯಾರೊಂದಿಗೋ ಫೋನ್ ನಲ್ಲಿ ಮಾತನಾಡುತ್ತಿದ್ದಳು. ಇದನ್ನು ಕಂಡು ಮೊದಲೇ ಮತ್ತಿನಲ್ಲಿದ್ದ ಉಮೇಶನಿಗೆ ಸಿಟ್ಟು ನೆತ್ತಿಗೇರಿದೆ.
ನಿನಗೆ ಯಾರೊಂದಿಗೋ ಅನೈತಿಕ ಸಂಬಂಧವಿದೆ. ಹೀಗಾಗಿ ನೀನು ಅವರ ಜತೆ ಈ ಮಧ್ಯರಾತ್ರಿಯಲ್ಲಿ ಮಾತನಾಡುತ್ತಿದ್ದೀಯಾ, ಯಾರದು ಹೇಳು ಎಂದು ಆತ ಆಕೆಯ ಕೈಯಲ್ಲಿದ್ದ ಮೊಬೈಲ್ ಕಿತ್ತುಕೊಳ್ಳಲು ಯತ್ನಿಸಿದ್ದಾನೆ. ಆಗ ಅವರಿಬ್ಬರ ನಡುವೆ ಜಗಳ ವಿಕೋಪಕ್ಕೆ ಹೋಗಿದೆ.
ತನ್ನ ಮೇಲೆ ಸಂಶಯ ವ್ಯಕ್ತಪಡಿಸಿದ್ದರಿಂದ ಕೆರಳಿದ ಮನೀಷಾ ಚಾಕು ತೆಗೆದುಕೊಂಡು ಬಂದು ಉಮೇಶ್ ದಾಮಿಗೆ ಇರಿದಿದ್ದಾಳೆ. ನೇರವಾಗಿ ಎದೆಗೇ ಚೂರಿಯಿಂದ ಇರಿದಿದ್ದರಿಂದ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಉಮೇಶ್ ದಾಮಿ.
ಬಳಿಕ ಈ ವಿಷಯ ಹೊರಗಡೆ ತಿಳಿದು ಕೂಡಲೇ ಪೊಲೀಸರು ಆಗಮಿಸಿದರು. ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಹುಳಿಮಾವು ಪೊಲೀಸರು ಆರೋಪಿ ಮನಿಷಾಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Self Harming: ರಿಪ್ಪನ್‌ಪೇಟೆಯಲ್ಲಿ ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ
ಜಿಮ್ ಟ್ರೇನರ್ ಆತ್ಮಹತ್ಯೆ; ಸಾವಿಗೆ ಯಾರೂ ಕಾರಣರಲ್ಲ ಎಂದ ಪತ್ನಿ
ಮೈಸೂರು: ಮೈಸೂರಿನ ಜಿಮ್ ಟ್ರೇನರ್ (Gym Trainer) ಒಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ಸಾವಿಗೆ ಶರಣಾಗಿದ್ದಾರೆ (Self Harming). ಮೈಸೂರು ಜಿಲ್ಲೆಯ (Mysore News) ನಂಜನಗೂಡಿನ ವಜ್ರದೇಹಿ ಜಿಮ್‌ನಲ್ಲಿ ಟ್ರೇನರ್ ಆಗಿರುವ ಶಬರೀಶ್ (35) ಅವರೇ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡವರು.
ನಂಜನಗೂಡಿನ ಸಿದ್ದೇಗೌಡ ಲೇಔಟ್‌ನಲ್ಲಿ ವಾಸವಾಗಿರುವ ಶಬರೀಶ್ (35) ಬುಧವಾರ ಸಂಜೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಕೃತ್ಯ ಎಸಗಿದ್ದಾರೆ. ತಾನು ಜೀವನದಲ್ಲಿ ಬಹಳಷ್ಟು ನೊಂದಿರುವುದಾಗಿ ಅವರು ಡೆತ್ ನೋಟ್‌ನಲ್ಲಿ ತಿಳಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ, ಯಾವ ಕಾರಣಕ್ಕಾಗಿ ನೊಂದಿದ್ದಾರೆ ಎನ್ನುವುದು ಸ್ಪಷ್ಟವಾಗಿಲ್ಲ.
ಈ ನಡುವೆ, ಅವರ ಪತ್ನಿ ಮೇಘಾ ಅವರು ನಂಜನಗೂಡು ಪೊಲೀಸ್ ಠಾಣೆಗೆ ಗಂಡನ ಸಾವಿನ ಬಗ್ಗೆ ದೂರು ನೀಡಿದ್ದಾರೆ. ಆದರೆ, ಶಬರೀಶ್ ಸಾವಿಗೆ ಯಾರೂ ಕಾರಣರಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಬಹುಶಃ ಶಬರೀಶ್ ಅವರೇ ನೊಂದಿದ್ದರು, ಇದಕ್ಕೆ ಬೇರೆ ಯಾರೂ ಕಾರಣರಲ್ಲ ಎಂದು ಅವರು ಹೇಳಿರಬಹುದು ಎನ್ನಲಾಗಿದೆ.
ಸ್ಥಳಕ್ಕೆ ನಂಜನಗೂಡು ಪಟ್ಟಣ ಪೊಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.