Site icon Vistara News

ನಿನ್ನಪ್ಪನನ್ನು ಕಳಿಸು ಎಂದು ಬೈದ, ಕೊಲೆಯಾದ!

knife attack

ಬೆಂಗಳೂರು: ಕೆಲವೊಮ್ಮೆ ದೊಡ್ಡವರ ಜಗಳಗಳು ನಡೆದಾಗ ಸಣ್ಣವರು ಎಂಟ್ರಿ ಕೊಟ್ಟರೆ ಏನಾಗುತ್ತದೆ ಅನ್ನುವುದಕ್ಕೆ ಈ ಕೇಸ್ ಸಾಕ್ಷಿ. ನಮ್ಮಪ್ಪನಿಗೆ ಯಾಕೆ ಬೈದೆ ಅಂತಾ ಕೇಳಲು ಹೋಗಿದ್ದ ಆ ಯುವಕನಿಗೆ ಆತ ತಲೆ ಮೇಲೆ ಹೊಡೆದು ʼಹೋಗೋ ನಿಮ್ಮಪ್ಪನ್ನ ಕಳ್ಸುʼ ಎಂದ. ಅಷ್ಟೇ, ಬಿಸಿರಕ್ತದ ಯುವಕ ಆತನ ಎದೆಗೆ ಚಾಕು ಇರಿದು ಕೊಲೆ‌ ಮಾಡಿ ಎಸ್ಕೇಪ್‌ ಆಗಿದ್ದಾನೆ.

ಈ ಘಟನೆ ರಾಜಗೋಪಾಲ ನಗರ ಠಾಣೆ ವ್ಯಾಪ್ತಿಯ ಮಾರುತಿ ಬಡಾವಣೆಯಲ್ಲಿ ನಡೆದಿದೆ. 42 ವರ್ಷದ ಅಜೀಂ ಎಂಬಾತನನ್ನು ಅನೀಸ್‌ ಎಂಬಾತ ರಾತ್ರಿ 8.30ರ ಸುಮಾರಿಗೆ ಕೊಲೆ‌ ಮಾಡಿ ಪರಾರಿಯಾಗಿದ್ದಾನೆ.

ಕಳೆದ ಎರಡು ದಿನಗಳ‌ ಹಿಂದೆ ಮೃತ ಅಜೀಂ ಮತ್ತು ಆರೋಪಿ ಅನೀಸ್ ತಂದೆ ನಡುವೆ ಮಾತುಕತೆಯಾಗಿ ಜಗಳವಾಗಿತ್ತು. ಅಜೀಂ ಆರೋಪಿಯ ತಂದೆಗೆ ಬೈದಿದ್ದ. ಈ ಬಗ್ಗೆ ಕೇಳುವುದಕ್ಕೆಂದು ಅನೀಸ್ ಹೋಗಿದ್ದ. ನನ್ನ ತಂದೆಗೆ ಯಾಕೆ ಹೊಡೆದೆ ಎಂದು ಕೇಳಿದ್ದಾನೆ. ಈ ವೇಳೆ ʼನೀನು ಚಿಕ್ಕವನು, ನಿನ್ನ ತಂದೆಯನ್ನು ಕಳಿಸುʼ ಎಂದು ಅನೀಸ್ ತಲೆ ಮೇಲೆ‌ ಅಜೀಂ ಒಂದು ಹೊಡೆದಿದ್ದಾನೆ. ಕೂಡಲೇ ಅನೀಸ್‌ ತನ್ನ ಜಾಕೆಟ್‌ನಲ್ಲಿದ್ದ ಚಾಕು ತೆಗೆದುಕೊಂಡು ಅಜೀಂ ಎದೆಗೆ ನಾಲ್ಕೈದು ಬಾರಿ ಇರಿದು ಓಡಿಹೋಗಿದ್ದಾನೆ. ಕೂಡಲೇ ಅಜೀಂನನ್ನು ಆಸ್ಪತ್ರೆಗೆ ದಾಖಲಿಸಲು ಹೋದರೂ ದಾರಿ ಮಧ್ಯದಲ್ಲೇ ಅಜೀಂ ಮೃತಪಟ್ಟಿದ್ದಾನೆ..

ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿರುವ ರಾಜಗೋಪಾಲ ನಗರ ಪೊಲೀಸರು ಆರೋಪಿ ಅನೀಸ್ ಪತ್ತೆಗೆ ಮುಂದಾಗಿದ್ದಾರೆ. ಈ ಹಿಂದೆ ಅನೀಸ್ ಕೊಲೆ‌ ಪ್ರಕರಣವೊಂದರಲ್ಲಿ ಭಾಗಿಯಾಗಿರುವ ಮಾಹಿತಿ ಕೂಡ ಇದೆ.

ಇದನ್ನೂ ಓದಿ: ಮಗನಿಂದಲೇ ತಂದೆಯ ಕೊಲೆ: ಮಲಗಿದ್ದಲ್ಲಿಗೆ ಹೋಗಿ ಕೊಡಲಿಯಿಂದ ಕೊಚ್ಚಿದ!

Exit mobile version