ಬೆಂಗಳೂರು: ಮೊದಲ ಪತ್ನಿಯನ್ನು ಕೊಂದು ಜೈಲು ಸೇರಿದವನು ಆಸ್ತಿ ವಿಚಾರದಲ್ಲಿ ತಂದೆಯನ್ನು ಮುಗಿಸಲು ಸುಪಾರಿ ನೀಡಿ ಕೊಲೆ ಮಾಡಿಸಿರುವುದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಮಾರತ್ತಹಳಿ ಪೊಲೀಸ್ ಠಾಣೆ ವ್ಯಾಪ್ತಿಯ ಪಣತ್ತೂರಿನ ಕಾವೇರಪ್ಪ ಲೇಔಟ್‌ನಲ್ಲಿ ಘಟನೆ ನಡೆದಿದೆ. ನಾರಾಯಣಸ್ವಾಮಿ (70) ಕೊಲೆಯಾದ ದುರ್ದೈವಿ ತಂದೆ. ಪುತ್ರ ಮಣಿಕಂಠ (37) ಎಂಬಾತ ಸುಪಾರಿ ನೀಡಿರುವ ಬಲವಾದ ಶಂಕೆಯಿದೆ. ಫೆಬ್ರವರಿ 13ರ ಬೆಳಗ್ಗೆ 10 ಗಂಟೆಗೆ ನಾರಾಯಣಸ್ವಾಮಿಯವರನ್ನು ಕೊಚ್ಚಿ ಕೊಲ್ಲಲಾಗಿದೆ. ಕೊಲೆ ಬಳಿಕ ಏನೂ ಗೊತ್ತಿಲ್ಲದಂತೆ ತಂದೆಯ ಅಂತ್ಯಕ್ರಿಯೆಯನ್ನು ಕಪಟ ಪುತ್ರ ಮಾಡಿದ್ದಾನೆ.
ಮಣಿಕಂಠ ತನ್ನ ಮೊದಲ ಪತ್ನಿಯನ್ನು ಕೊಲೆ ಮಾಡಿ ಜೈಲು ಸೇರಿದ್ದ. ಜೈಲಿನಿಂದ ಹೊರಬಂದ ಬಳಿಕ ಎರಡನೇ ವಿವಾಹವಾಗಿದ್ದ. ಎರಡನೇ ಮದುವೆ ಬಳಿಕವೂ ಬೇರೊಬ್ಬ ಮಹಿಳೆ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ. ಈ ವಿಚಾರ ಗೊತ್ತಾಗಿ ಪತ್ನಿಯು ಪತಿಯಿಂದ ದೂರವಿದ್ದಳು. ಡೈವೋರ್ಸ್ ವಿಚಾರವಾಗಿಯೂ ಮಾತುಕತೆ ನಡೆಯುತ್ತಿತ್ತು. ಎರಡನೇ ಪತ್ನಿಗೆ ಒಬ್ಬಳು ಹೆಣ್ಣು ಮಗಳಿದ್ದಳು.
ಆದರೆ ಡೈವೋರ್ಸ್ ಕೊಡೋದು ಬೇಡ, ಡೈವೋರ್ಸ್ ಬಳಿಕ ಸೊಸೆ ಹಾಗೂ ಮೊಮ್ಮಗಳಿಗೆ ಕಷ್ಟವಾಗಬಹುದು. ಅವರ ಜೀವನ ನಿರ್ವಹಣೆ ಕಷ್ಟವಾಗುತ್ತದೆ ಎಂದು ಒಂದು ಸೈಟ್ ಅನ್ನು ಅವರ ಹೆಸರಿಗೆ ಮಾಡಲು ನಾರಾಯಣಸ್ವಾಮಿ ಮುಂದಾಗಿದ್ದರು. ಸೊಸೆ ಹಾಗು ಮೊಮ್ಮಗಳ ಹೆಸರಿಗೆ ನಿನ್ನೆ ಸೈಟ್ ರಿಜಿಸ್ಟ್ರೇಷನ್ ಮಾಡಲು ಮುಂದಾಗಿದ್ದರು. ಇದು ಮಣಿಕಂಠನಿಗೆ ಇಷ್ಟವಿರಲಿಲ್ಲ. ಹಾಗಾಗಿ ತಂದೆ ಕೊಲೆಗೆ ಸುಪಾರಿ ನೀಡಿದ್ದ ಎನ್ನಲಾಗಿದೆ.
ಇದನ್ನೂ ಓದಿ: Murder Case : ಕುಡಿಯಲು ಹಣ ಕೊಡಲಿಲ್ಲ ಎಂದು ತಾತನನ್ನೇ ಕೊಲೆಗೈದ ಮೊಮ್ಮಗ
ಸುಪಾರಿ ಪಡೆದು ಬಂದವರು ನಾರಾಯಣಸ್ವಾಮಿಯನ್ನು ಕೊಂದು ಎಸ್ಕೇಪ್ ಆಗಿದ್ದಾರೆ. ಸದ್ಯ ಮಣಿಕಂಠನನ್ನು ವಶಕ್ಕೆ ಪಡೆದು ಮಾರತ್ತಹಳ್ಳಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಸುಪಾರಿ ಬಗ್ಗೆ ಬಾಯಿಬಿಟ್ಟಿದ್ದಾನೆ. ಕೊಲೆ ಆರೋಪಿಗಳಿಗಾಗಿ ಮಾರತ್ತಹಳ್ಳಿ ಪೊಲೀಸರಿಂದ ಹುಡುಕಾಟ ನಡೆದಿದೆ.
ಈ ಕಿರಾತಕ ಮೂರ್ನಾಲ್ಕು ತಿಂಗಳ ಹಿಂದೆ ಎರಡನೇ ಪತ್ನಿಗೂ ಚಾಕು ಇರಿದು ಕೊಲೆಯತ್ನ ಮಾಡಿದ್ದ. ಆದರೆ ಕೇಸ್ ದಾಖಲಿಸುವುದು ಬಿಟ್ಟು ಪೊಲೀಸರು ಸಂಧಾನ ಮಾಡಿ ಕಳುಹಿಸಿದ್ದರು. ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಿದ್ದರೆ ಅಮಾಯಕ ತಂದೆಯ ಜೀವ ಉಳಿಯುತ್ತಿತ್ತು ಎಂದು ಬಂಧುಗಳು ಹೇಳಿದ್ದಾರೆ.
ಇದನ್ನೂ ಓದಿ: Anekal Shootout | ಆನೇಕಲ್‌ನಲ್ಲಿ ಇಬ್ಬರು ಕಿರಾತಕರಿಗೆ ಗುಂಡೇಟು; ಕ್ರೈಂ ಲೋಕದ ಪಾತಕಿಗಳಿಗೆ ಪೊಲೀಸರ ಖಡಕ್ ವಾರ್ನಿಂಗ್