Site icon Vistara News

ಕಿಟಕಿಯಿಂದ ₹5 ಕೋಟಿ ಬಿಸಾಡಿದ್ದ ಅಧಿಕಾರಿಗೆ ಉನ್ನತ ಹುದ್ದೆ: ಸಚಿವರ ಶಿಫಾರಸು; ವಿವಾದ ಆಗುತ್ತಿದ್ದಂತೆಯೇ ವಾಪಸು

tr swamy

ಬೆಂಗಳೂರು: ಕೆಐಎಡಿಬಿ ಅಧಿಕಾರಿಯಾಗಿದ್ದಾಗ ಅಕ್ರಮ ಆಸ್ತಿ ಗಳಿಕೆ ಸಂಬಂಧ ಎಸಿಬಿ ದಾಳಿಗೆ ಒಳಗಾಗಿದ್ದ ಮಾಜಿ ಅಧಿಕಾರಿಗೆ ಉನ್ನತ ಹುದ್ದೆ ನೀಡಬೇಕೆಂದು ಕೈಗಾರಿಕಾ ಸಚಿವ ಮರುಗೇಶ್‌ ನಿರಾಣಿ ಶಿಫಾರಸು ಮಾಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.

ಕೆಐಎಡಿಬಿ ಅಧ್ಯಕ್ಷರು ಹಾಗೂ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗೆ ಟಿಪ್ಪಣಿ ಬರೆದಿರುವ ಮುರುಗೇಶ್‌ ನಿರಾಣಿ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ವಿವಿಧ ಕೈಗಾರಿಕಾ ಪ್ರದೇಶಗಳಗೆ ನೀರು ಸೌಲಭ್ಯ ಒದಗಿಸುವ ಕಾಮಗಾರಿ, ಕೆ.ಐ.ಎ.ಡಿ.ಬಿ. ಭೂಸ್ಹಾಧೀನಪಡಿಸಿರುವ ಕೈಗಾರಿಕಾ ಪ್ರದೇಶಗಳಲ್ಲಿ ಕೆಲವು ಪ್ರದೇಶಗಳು ಅರಣ್ಯ ವ್ಯಾಪ್ತಿಗೆ ಸೇರಿದ್ದು, ಇಂತಹ ಜಮೀನುಗಳನ್ನು ಎಕ್ಸ್‌ಚೇಂಜ್‌ ಮುಖಾಂತರ ಅರಣ್ಯ ಇಲಾಖೆಯಿಂದ ಪಡೆಯುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರದೊಂದಿಗೆ ಪತ್ರ ವ್ಯವಹಾರ ನಡೆಸಿ ಅನುಮೋದನೆ ಪಡೆಯಬೇಕಾಗಿದೆ.

ಯೋಜನೆಗಳ ಉಸ್ತುವಾರಿ ಮಾಡಿ ಅ೦ತಹ ಜಮೀನುಗಳನ್ನು ಮಂಡಳಿಯ ವಶಕ್ಕೆ ಪಡೆಯುವ ಹಾಗೂ ಇನ್ನಿತರೆ ತಾಂತ್ರಿಕ ವಿಷಯಗಳ ಬಗ್ಗೆ ಕೆಐಎಡಿಬಿ ಸಿಇಒ ಹಾಗೂ ಇ.ಎಂ. ಅವರಿಗೆ ಸಲಹೆ ನೀಡುವ ಸಲುವಾಗಿ, ಈಗಾಗಲೇ ಕೆಐಎಡಿಬಿಯಲ್ಲಿ 30 ವರ್ಷಗಳ ಸೇವೆಯನ್ನು ಪೂರೈಸಿ ನಿವೃತ್ತರಾಗಿರುವ ಟಿ.ಆರ್‌. ಸ್ವಾಮಿ ಅವರನ್ನು ವಿಶೇಷ ಕರ್ತವ್ಯಾಧಿಕಾರಿ ಹುದ್ದೆಗೆ ನೇಮಿಸಿ ಆದೇಶ ಹೊರಡಿಸುವಂತೆ ಸೂಚಿಸಿದೆ ಎಂದು ಹೇಳಿದ್ದಾರೆ.

ಕೆಐಎಡಿಬಿ ಅಧಿಕಾರಿಯಾಗಿದ್ದ ಸಮಯದಲ್ಲಿ ಟಿ.ಆರ್‌. ಸ್ವಾಮಿ ಕಚೇರಿ ಮೇಲೆ ಎಸಿಬಿ ದಾಳಿ ನಡೆಸಿತ್ತು. ಈ ವೇಳೆ ತಮ್ಮ ಬಳಿ ಇದ್ದ ಐದು ಕೋಟಿ ರೂ. ಹಣವನ್ನು ಕಿಟಕಿಯಿಂದ ಬಿಸಾಡಿದ್ದರು. 2020 ಜೂನ್ ತಿಂಗಳಲ್ಲಿ ಇವರು ನಿವೃತ್ತರಾಗಿದ್ದು, ಪ್ರಕರಣ ಸದ್ಯ ಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿದೆ.

ವಾಪಸ್‌ ಪಡೆದ ಸಚಿವ

ಟಿ.ಆರ್‌. ಸ್ವಾಮಿ ಅವರನ್ನು ನೇಮಿಸುವಂತೆ ಶಿಫಾರಸು ಮಾಡಿದ್ದ ಪತ್ರ ಬಹಿರಂಗವಾಗಿ ವಿವಾದಕ್ಕೀಡಾಗುತ್ತಿದಂತೆಯೇ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ಯುಟರ್ನ್‌ ಮಾಡಿದ್ದಾರೆ. ವಿಶೇಷ ಕರ್ತವ್ಯಾಧಿಕಾರಿಯಾಗಿ ನೇಮಿಸುವಂತೆ ಸೂಚಿಸಿ ಬರೆದ ಪತ್ರವನ್ನು ಹಿಂಪಡೆಯಲಾಗಿದೆ ಎಂದು ಮತ್ತೊಂದು ಪತ್ರ ಬರೆದಿದ್ದಾರೆ. ಆದರೆ ಪತ್ರವನ್ನು ಹಿಂಪಡೆದದ್ದಕ್ಕೆ ಯಾವುದೇ ಕಾರಣವನ್ನೂ ಮುರುಗೇಶ್‌ ನಿರಾಣಿ ನೀಡಿಲ್ಲ.

ಇದನ್ನೂ ಓದಿ | ಎಸಿಬಿ ದಾಳಿಗೆ ಒಳಗಾಗಿದ್ದ ಬಾಗಲಕೋಟೆ ಆರ್‌ಟಿಒ ಅಮಾನತು; ಸಾರಿಗೆ ಇಲಾಖೆ ಆದೇಶ

Exit mobile version