ಬೆಂಗಳೂರು: ಕರ್ನಾಟಕ ರಾಜ್ಯ ಸರಕಾರವು ಅಧಿಕಾರಿಗಳ ಸರಕಾರವಾಗಿದೆ (Officers Government) ಎಂದು ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ (Dr CN Ashwathnarayan) ಅವರು ಹೇಳಿದ್ದಾರೆ. ರಾಜ್ಯ ಸರ್ಕಾರ ನಾಡಗೀತೆಯೂ (Nadageethe Row) ಸೇರಿದಂತೆ ಸಾಲು ಸಾಲು ಎಡವಟ್ಟುಗಳನ್ನು ಮಾಡಿಕೊಳ್ಳುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಇಲ್ಲಿ ಶಾಸಕಾಂಗ ನಿಷ್ಕ್ರಿಯವಾಗಿದೆ, ಕಾರ್ಯಾಂಗದ ಅಧಿಕಾರಿಗಳೇ ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ ಎಂದು ಹೇಳಿದರು.
ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಅಧಿಕಾರಿಗಳು ತಮ್ಮ ಮನ ಬಂದಂತೆ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ರಾಜ್ಯ ಸರಕಾರವು ನಿಷ್ಕ್ರಿಯವಾಗಿದ್ದು, ಕಾರ್ಯಾಂಗವನ್ನು ಅಧಿಕಾರಿಗಳೇ ಮುನ್ನಡೆಸುತ್ತಿದ್ದಾರೆ ಎಂದು ಹೇಳಿದರು.
ಖಾಸಗಿ ಶಾಲೆಗಳಲ್ಲಿ ನಾಡಗೀತೆ ಹಾಡುವುದು ಕಡ್ಡಾಯವಲ್ಲ ಎಂಬ ಸರ್ಕಾರದ ಸುತ್ತೋಲೆಯನ್ನು ಖಂಡಿಸಿದ ಅವರು, ಕನ್ನಡದ ಅಸ್ಮಿತೆ ಎನಿಸಿದ ನಾಡಗೀತೆ ಹಾಡುವಂತಿಲ್ಲ ಎಂದು ಅಧಿಕಾರಿಗಳು ಸೂಚಿಸಿದ್ದು ಆಕ್ಷೇಪಾರ್ಹ ಎಂದರು.
ಇದನ್ನೂ ಓದಿ : Nadageethe Row : ಮಿಷನರಿಗಳಿಗೆ ಮಣಿದ ಸರ್ಕಾರ, ಡೋಂಗಿ ಕನ್ನಡ ಪ್ರೇಮಿ ಸಿದ್ದರಾಮಯ್ಯ; ಬಿಜೆಪಿ ಆಕ್ರೋಶ
ಸಿದ್ದರಾಮಯ್ಯ ಮಾತಿಗೂ ಕೃತಿಗೂ ಸಂಬಂಧವಿಲ್ಲ
ಸಿಎಂ ಸಿದ್ದರಾಮಯ್ಯನವರ (CM Siddaramaiah) ಮಾತು ಮತ್ತು ಕೃತಿಗೆ ಸಂಬಂಧವಿಲ್ಲ ಎಂದು ಬಹಳ ಸ್ಪಷ್ಟವಾಗಿದೆ. ನಾಡಗೀತೆ, ರಾಷ್ಟ್ರಕವಿ ಕುವೆಂಪು (Rashtrakavi Kuvempu) ಅವರಿಗೆ ಅವಮಾನ ಮಾಡಲಾಗುತ್ತಿದೆ. ಜ್ಞಾನದೇಗುಲ ವಿಚಾರದಲ್ಲೂ ಇಂಥದ್ದೇ ಆದೇಶ ಮಾಡಲಾಗಿತ್ತು. ಮಣಿವಣ್ಣನ್ ಆತ್ಮಸಾಕ್ಷಿ ಇಲ್ಲದ ಅಧಿಕಾರಿ; ವಿಷಯ ತಿಳಿದೂ ಇಂಥ ಆಜ್ಞೆ ಮಾಡಿದ್ದಾರೆ ಎಂದು ಅಶ್ವತ್ಥನಾರಾಯಣ ಟೀಕಿಸಿದರು. ಸರಕಾರಕ್ಕೆ ಬದ್ಧತೆ ಇದ್ದರೆ, ಸದೃಢ ಸರಕಾರವಾಗಿದ್ದರೆ ಮಣಿವಣ್ಣನ್ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಅವರು ಆಗ್ರಹಿಸಿದರು.
ಮಣಿವಣ್ಣನ್ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯವಾದರೂ ಮಾಡಿ
ಪರಿಣಾಮಕಾರಿ, ಜನಪರ ಸರಕಾರ ಇದಾಗಿದ್ದರೆ ಮಣಿವಣ್ಣನ್ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದ ಅವರು, ಸರಕಾರ ಬದುಕಿದೆ ಎಂದು ಗೊತ್ತಾಗಬೇಕಿದ್ದರೆ ಸಿದ್ದರಾಮಯ್ಯನವರು ಈ ಅಧಿಕಾರಿ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.
ಮತ್ತೆ ಮತ್ತೆ ಎಡವುತ್ತಿರುವ ಎಡವಟ್ಟು ಗಿರಾಕಿ ಸರ್ಕಾರ
ಇದು ಯಡವಟ್ಟು ಗಿರಾಕಿ ಸರಕಾರ. ಯಡವಟ್ಟನ್ನು ಮಾಡುತ್ತಲೇ ಇದ್ದಾರೆ. ಇವತ್ತು ಮತ್ತೊಮ್ಮೆ ನಾಡಗೀತೆ ವಿಚಾರದಲ್ಲಿ ಎರಡನೇ ತಪ್ಪು ಮಾಡಿದ್ದಾರೆ. ಈ ತಪ್ಪಿನಿಂದ ಹೊರಕ್ಕೆ ಬರಲಿ ಎಂದು ಅವರು ಆಶಿಸಿದರು.
ಮೂರನೆಯದು ಕೇರಳ. ಯಾರದೋ ದುಡ್ಡು. ನೀವಂತೂ ನಿಮ್ಮ ಜೀವಮಾನದಲ್ಲಿ ಯಾವತ್ತೂ ತೆರಿಗೆ ಕಟ್ಟಿಲ್ಲ. ತೆರಿಗೆದಾರರ ದುಡ್ಡಿನಲ್ಲಿ ನಿಮಗೆ ಅನುಕೂಲಗಳು ಸಿಕ್ಕಿವೆ. ನಮ್ಮ ರಾಜ್ಯದಲ್ಲಿ ಕೊಡಬೇಕಾದ ಪರಿಹಾರವನ್ನು ಪಕ್ಕದ ರಾಜ್ಯದ ವಯನಾಡಿನಲ್ಲಿ ಕೊಡಲು ಏನಿದೆ? ಇದಕ್ಕೆ ಯಾವ ಕಾನೂನಿನಲ್ಲಿ ಅವಕಾಶ ಇದೆಯೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.
"ಕನ್ನಡಿಗರ ತೆರಿಗೆ ರಾಹುಲ್ ಗಾಂಧಿ ಹಕ್ಕು"@INCKarnataka ದ ಗುಲಾಮಿ ಮನಸ್ಥಿತಿಯ ಸದಸ್ಯರೇ, "ಧೈರ್ಯವಾಗಿ ನಕಲಿ ಗಾಂಧಿಗಳನ್ನು ಪ್ರಶ್ನಿಸಿ" ಕನ್ನಡಿಗರೇಕೆ ಕೊಡಬೇಕು ಕಪ್ಪ?
— BJP Karnataka (@BJP4Karnataka) February 20, 2024
ಕಣ್ಣಿಗೆ ಕಂಡಿದ್ದು ಕೇರಳದ ವಯನಾಡಿಗೆ ಕೊಟ್ಟ ₹15 ಲಕ್ಷ!
ಕಣ್ಣಿಗೆ ಕಾಣದ ಕನ್ನಡಿಗರ ಮೂಟೆ ಮೂಟೆ ಹಣ ಹೋಗುತ್ತಿರುವುದು ದೆಹಲಿಯ 10 ಜನಪಥ್ ಮನೆಗೆ!
ಮಜವಾದಿ… pic.twitter.com/3uFMMwxzOD
ವಯನಾಡಿನಲ್ಲಿ ಆನೆ ತುಳಿತಕ್ಕೆ ಒಳಗಾಗಿ ಮೃತರಿಗೆ ಇಲ್ಲಿಂದ ಪರಿಹಾರ ಕೊಡಬೇಕಿದ್ದರೆ ಕಾಂಗ್ರೆಸ್ ಪಕ್ಷ ಬಡವಾಗಿದೆಯೇ? ಕಾಂಗ್ರೆಸ್ ಪಕ್ಷದಲ್ಲಿರುವ ನೀವು, ನಿಮ್ಮ ಅಭಿಮಾನಿಗಳು, ಹಿತೈಷಿಗಳು ಹಾಕಿದ ಹಣ ಬಳಸಿ ಕೊಟ್ಟಿದ್ದರೆ ಮೆಚ್ಚಬಹುದಿತ್ತು ಎಂದು ವ್ಯಂಗ್ಯವಾಗಿ ತಿಳಿಸಿದರು.
ಸುತ್ತೋಲೆಯಲ್ಲಿ ಏನು ಹೇಳಲಾಗಿದೆ?
ಕುವೆಂಪು ಅವರ ‘ಜಯ ಭಾರತ ಜನನಿಯ ತನುಜಾತೆ’ (Jaya Bharatha Jananiya Thanujathe) ಕವನವನ್ನು ‘ನಾಡಗೀತೆ’ಯಾಗಿ ಘೋಷಿಸಿ ಈ ಹಿಂದೆ ಸರಕಾರ ಹೊರಡಿಸಿದ್ದ ಆದೇಶದಲ್ಲಿ ಒಂದು ತಿದ್ದುಪಡಿಯನ್ನು ಪ್ರಕಟಿಸಿ ಫೆ. 16ರಂದು ಹೊಸ ಆದೇಶವನ್ನು ಹೊರಟಿಸಲಾಗಿದೆ. ‘ಎಲ್ಲಾ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಸರ್ಕಾರದ ಇಲಾಖೆಗಳು ಹಾಗೂ ನಿಗಮ, ಮಂಡಳಿ, ಪ್ರಾಧಿಕಾರ ಮುಂತಾದ ಅರೆ ಸರ್ಕಾರಿ ಸಂಸ್ಥೆಗಳ ಅಧಿಕೃತ ಕಾರ್ಯಕ್ರಮಗಳನ್ನು ಏರ್ಪಡಿಸುವ ಪ್ರಾರಂಭದಲ್ಲಿ ಹಾಡುವುದು’ ಎಂಬುದು ಮೂಲ ಆದೇಶ. ಅದನ್ನು ‘ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಸರ್ಕಾರದ ಇಲಾಖೆಗಳು ಹಾಗೂ ನಿಗಮ, ಮಂಡಳಿ, ಪ್ರಾಧಿಕಾರ ಮುಂತಾದ ಅರೆ ಸರ್ಕಾರಿ ಸಂಸ್ಥೆಗಳ ಅಧಿಕೃತ ಕಾರ್ಯಕ್ರಮಗಳನ್ನು ಏರ್ಪಡಿಸುವ ಪ್ರಾರಂಭದಲ್ಲಿ ಹಾಡುವುದು’ ಎಂದು ತಿದ್ದಿ ಓದಿಕೊಳ್ಳತಕ್ಕದ್ದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.