Site icon Vistara News

ಮೈಸೂರು ಅತ್ಯಂತ ಸುಂದರ ನಗರವಾಗಲು ಮಿರ್ಜಾ ಇಸ್ಮಾಯಿಲ್ ಕಾರಣ: ನಾಡೋಜ ಡಾ.ಮಹೇಶ ಜೋಶಿ

ಮಿರ್ಜಾ ಇಸ್ಮಾಯಿಲ್

ಬೆಂಗಳೂರು: “ಕೃಷ್ಣರಾಜ ಒಡೆಯರಂತಹ ದೊರೆಯಿಲ್ಲ, ಮಿರ್ಜಾ ಇಸ್ಮಾಯಿಲ್‌ರಂತಹ ಮಂತ್ರಿ ಇಲ್ಲ” ಎನ್ನುವ ಗಾದೆ ಮಾತು ದಿವಾನ್ ಮಿರ್ಜಾ ಇಸ್ಮಾಯಿಲ್ ಅವರ ಕಾಲದಲ್ಲಿ ಜನಜನಿತವಾಗಿತ್ತು. ಮಿರ್ಜಾ ಇಸ್ಮಾಯಿಲ್ ಅವರ ಅತ್ಯಂತ ಆದರ್ಶವಾದ ಗುಣವೆಂದರೆ ಅವರ ಸೌಜನ್ಯ, ವಿನಯ ಹಾಗೂ ಕಾರ್ಯತತ್ಪರತೆ. ಇದೇ ಕಾರಣಕ್ಕೆ ಅವರು ಎಲ್ಲ ಜನರ ಮನಸ್ಸನ್ನು ಗೆದ್ದುಕೊಂಡಿದ್ದರು. ಮೈಸೂರು ಅತ್ಯಂತ ಸುಂದರ ನಗರವಾಗುವುದಕ್ಕೆ ಮಿರ್ಜಾ ಇಸ್ಮಾಯಿಲ್ ಅವರೇ ಕಾರಣ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅಭಿಪ್ರಾಯ ಪಟ್ಟರು.

ನಗರದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್‌ನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಆಯೋಜಿಸಿದ್ದ ಪರಿಷತ್‌ನ ಆಧಾರ ಸ್ಥಂಭಗಳಲ್ಲಿ ಪ್ರಮುಖರಾದ ದಿವಾನ್ ಸರ್ ಮಿರ್ಜಾ ಇಸ್ಮಾಯಿಲ್ ಅವರ ೧೩೭ನೇ ಜನ್ಮದಿನಾಚರಣೆಯಲ್ಲಿ ಮಾತನಾಡಿದರು.

ಇದನ್ನೂ ಓದಿ | SCST ಮೀಸಲಾತಿ | ಕಾಕಾ ಕಾಲೇಲ್ಕರ್‌ ಸಮಿತಿಯಿಂದ ಮಂಡಲ್‌ವರೆಗೆ BJP ವಿರುದ್ಧ ಸಿದ್ದರಾಮಯ್ಯ ಕೆಂಡಾಮಂಡಲ

ಸರ್ ಮಿರ್ಜಾ ಇಸ್ಮಾಯಿಲ್ ಅವರು ಪರ್ಷಿಯಾ ಮೂಲದವರಾದರೂ ಕನ್ನಡದ ಮೇಲೆ ಅಪಾರ ಗೌರವ ಹೊಂದಿದ್ದರು. ಕನ್ನಡ ಸಾಹಿತ್ಯ ಪರಿಷತ್‌ ಬೆಳೆಯುವಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು. ಕನ್ನಡ ಸಾಹಿತ್ಯ ಪರಿಷತ್‌ಗೆ ಸ್ಥಳದ ಅವಶ್ಯಕತೆ ಇದೆ ಎಂದಾಗ ಪರಿಷತ್‌ ಇರುವ ಈಗಿನ ಜಾಗವನ್ನು ಉಚಿತವಾಗಿ ನೀಡಿ, ʻʻಕನ್ನಡ ತಾಯಿಯ ದೇಗುಲ ಇಲ್ಲಿ ಸಿದ್ಧವಾಗಲಿʼʼ ಎಂಬ ಮಾತನ್ನು ಹೇಳಿದ್ದರು. ಕನ್ನಡ ಸಾಹಿತ್ಯ ಪರಿಷತ್‌ ಮತ್ತು ಕನ್ನಡ ಸಂಘಗಳು ʻʻಕನ್ನಡದ ಅರಿವನ್ನು ಬೆಳಗುವ ನಂದಾ ದೀಪಗಳು” ಎಂದು ಬಣ್ಣಿಸಿದ್ದರು. ಮಿರ್ಜಾ ಅವರು ಸೋಮಾರಿತನ ಮತ್ತು ಲಂಚಗುಳಿತನ ವಿರೋಧಿಸಿ ದಕ್ಷತೆಗೆ ಸದಾ ಪ್ರೋತ್ಸಾಹಿಸುತ್ತಿದ್ದರು ಎಂದು ನೆನಪಿಸಿಕೊಂಡರು.

ಜೆ.ಎಸ್.ಎಸ್. ಮಹಾವಿದ್ಯಾಲಯ ನಿವೃತ್ತ ಪ್ರಾಂಶುಪಾಲ ಪ್ರೊ. ಚಂದ್ರಶೇಖರ ಉಷಾಲ ಮಾತನಾಡಿ, ಮಿರ್ಜಾ ಇಸ್ಮಾಯಿಲ್ ಅವರು ತಮ್ಮೊಂದಿಗೆ ಎಲ್ಲರೂ ಬೆಳೆಯಬೇಕು ಎನ್ನುವ ಭಾವನೆ ಹೊಂದಿದ್ದರು. ಅವರ ದೂರದೃಷ್ಟಿಯ ಪ್ರತೀಕವಾಗಿ ಮೈಸೂರು ಸಂಸ್ಥಾನ ಜಗತ್ತಿನ ಮಾದರಿ ಸಂಸ್ಥಾನ ಎಂದು ಹೆಸರಾಗಿತ್ತು. ೧೯೩೮ರಲ್ಲಿ ಮಹಾತ್ಮಾ ಗಾಂಧಿ ಅವರಿಂದ ರಾಜರ್ಷಿ ಎಂದು ಕರೆಸಿಕೊಂಡಿದ್ದ ನಾಲ್ವಡಿಯವರಿಗೆ ಬೆನ್ನೆಲುಬಾಗಿ ನಿಂತವರು ಮಿರ್ಜಾ ಇಸ್ಮಾಯಿಲ್. ಮೈಸೂರು ಸಂಸ್ಥಾನದ ಏಳಿಗೆಯ ಸಂಪೂರ್ಣ ಜವಾಬ್ದಾರಿಯನ್ನು ಅವರು ವಹಿಸಿಕೊಂಡಿದ್ದರು. ಸರ್.ಎಂ. ವಿಶ್ವೇಶ್ವರಯ್ಯ ಅವರು ಕಂಡ ಎಲ್ಲಾ ಕನಸುಗಳನ್ನು ನನಸು ಮಾಡುವ ಜವಾಬ್ದಾರಿ ವಹಿಸಿಕೊಂಡವರೇ ದಿವಾನ್ ಸರ್.ಎಂ. ಮಿರ್ಜಾ ಇಸ್ಮಾಯಿಲ್ ಹೇಳಿದರು.

ಹಿರಿಯ ಸಾಹಿತಿ ಅಬ್ದುಲ್ ಬಷೀರ್ ಮಾತನಾಡಿ ಮಿರ್ಜಾ ಇಸ್ಮಾಯಿಲ್ ಅವರಿಗೆ ಕಾಶ್ಮಿರದ ಮುಖ್ಯಮಂತ್ರಿಯಾಗುವ ಅವಕಾಶ ಬಂದಾಗ ಅವರು ಅದನ್ನು ಗೌರವ ಪೂರ್ವಕವಾಗಿ ತಿರಸ್ಕರಿಸಿದ್ದರು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಭೂಗರ್ಭ ಶಾಸ್ತ್ರ ವಿಷಯದಲ್ಲಿ ಪದವಿ ಅಧ್ಯಯನ ಮಾಡಿದ ಅವರು, ಆಗಿನ ಮೈಸೂರು ಸಂಸ್ಥಾನದಲ್ಲಿ ಆರಂಭಿಸಲಾಗುವ ಎಲ್ಲಾ ಕೈಗಾರಿಕೆಗಳು ಒಂದೇ ಕಡೆ ಇರಬಾರದು ಎನ್ನುವ ಮೂಲ ಉದ್ದೇಶದಿಂದ ನಾಡಿನ ಮೂಲೆ ಮೂಲೆಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಕ್ರಮ ವಹಿಸಿದ್ದರು ಎಂದರು.

ಕನ್ನಡ ಸಾಹಿತ್ಯ ಪರಿಷತ್‌ ಗೌರವ ಕಾರ್ಯದರ್ಶಿಗಳಾದ ನೇ.ಭ. ರಾಮಲಿಂಗಶೆಟ್ಟಿ ಅವರು ಸ್ವಾಗತಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀ ಕೆ. ಮಹಾಲಿಂಗಯ್ಯ ವಂದಿಸಿದರು. ಗೌರವ ಕೋಶಾಧ್ಯಕ್ಷರಾದ ಶ್ರೀ ಬಿ.ಎಂ. ಪಟೇಲ್ಪಾಂಡು ಕಾರ್ಯಕ್ರಮ ನಿರ್ವಹಿಸಿದರು.

ಇದನ್ನೂ ಓದಿ | Solar Eclipse 2022 | ಗ್ರಹಣ ವೇಳೆ ದೇಗುಲಗಳಲ್ಲಿ ನಡೆದವು ಹೋಮ-ಹವನ; ಮೋಕ್ಷ ಬಳಿಕ ನೆರವೇರಿದ ಪೂಜೆ

Exit mobile version