Site icon Vistara News

ಸಿದ್ದರಾಮಯ್ಯ ಮಗನೂ ಬಿಜೆಪಿ ಸೇರಲಿದ್ದಾರೆ: ಕಾಂಗ್ರೆಸ್-ಜೆಡಿಎಸ್‌ ನಾಯಕರು ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ನಳಿನ್‍ಕುಮಾರ್ ಕಟೀಲ್ ಮಾತು

Nalin kumar kateel

ಬೆಂಗಳೂರು: ಕಾಂಗ್ರೆಸ್ ಬಸ್ ಹೊರಟಿದೆ. ಹೋಗ್ತ ಹೋಗ್ತ ಬ್ರೇಕ್‍ಫೈಲ್ ಆಗುತ್ತಿದೆ. ಇನ್ನೊಂದು ಪಂಚರತ್ನ ಯಾತ್ರೆ ಆರಂಭವಾಗಿದೆ. ವಿಜಯಪುರ ತಲುಪುವಾಗ ಹಾಸನದಲ್ಲಿ ಪಂಕ್ಚರ್ ಹಾಕುವ ಪ್ರಯತ್ನಗಳು ಪ್ರಾರಂಭವಾಗಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್ ವ್ಯಂಗ್ಯವಾಡಿದರು.

ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಕಾಂಗ್ರೆಸ್- ಜೆಡಿಎಸ್ ಮುಖಂಡರ ಮತ್ತು ಬೆಂಬಲಿಗರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಎರಡೂ ಯಾತ್ರೆಗಳು ಮುಂದಿನ ಚುನಾವಣೆವರೆಗೆ ಪೂರ್ತಿ ಆಗುವುದಿಲ್ಲ. ಆದರೆ, ಬಿಜೆಪಿ ಸಂಕಲ್ಪ ಯಾತ್ರೆ ವಿಜಯಿ ಯಾತ್ರೆಯಾಗಿ ಪರಿವರ್ತನೆ ಹೊಂದುತ್ತಿದೆ ಎಂದು ನುಡಿದರು. ಬಿಜೆಪಿ ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆದ್ದೇಗೆಲ್ಲಲಿದೆ. ಒಬ್ಬ ಕಾಂಗ್ರೆಸ್ ಶಾಸಕನ ಮನೆಯಲ್ಲಿ ಅವರ ಮಗ ಬಿಜೆಪಿ ಸೇರಿದಂತೆಯೇ, ಮುಂದಿನ ದಿನದಲ್ಲಿ ಸಿದ್ರಾಮಣ್ಣನ ಮಗನೂ, ಡಿಕೆಶಿ ಮನೆಯಿಂದಲೂ ಬಿಜೆಪಿಗೆ ಬರುತ್ತಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಮತ್ತೆ ಡಬಲ್ ಎಂಜಿನ್ ಸರ್ಕಾರ ಅಭಿವೃದ್ಧಿಯ ಕೆಲಸ ಮಾಡಲಿದೆ ಎಂದು ತಿಳಿಸಿದರು.

ಬಿಜೆಪಿ ಕೆಲಸವನ್ನು ನೋಡುತ್ತದೆ. ಮನೆತನದ, ಕುಟುಂಬದ ಹಿನ್ನೆಲೆ ನೋಡುವುದಿಲ್ಲ. ಬಿಜೆಪಿ ಸಮಾಜದ ಜೊತೆಗಿನ ಒಡನಾಟ, ಸಿದ್ಧಾಂತದ ಮೇಲಿನ ನಂಬಿಕೆ, ಕೆಲಸಗಳನ್ನು ಗುರುತಿಸಿ ಅವಕಾಶ ಕೊಡುತ್ತದೆ. ಇದಕ್ಕೆ ಚಹಾ ಮಾರಾಟ ಮಾಡುತ್ತಿದ್ದ ಹುಡುಗ ಪ್ರಧಾನಿ ಆದುದು, ಭಿತ್ತಿಪತ್ರ ಹಚ್ಚುವ ಹುಡುಗ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದುದು ಉದಾಹರಣೆ ಎಂದರು.

ಕೋವಿಡ್ ಲಸಿಕೆ ಸಂಶೋಧನೆ ಆದ ಬಳಿಕ ಪ್ರಧಾನಿಯವರು ತಾವು ಮತ್ತು ಪಕ್ಷದವರಿಗೆ ಮೊದಲ ಆದ್ಯತೆ ಕೊಡಲಿಲ್ಲ. ಬದಲಾಗಿ ಆರೋಗ್ಯ ಕ್ಷೇತ್ರ, ಪೂರಕವಾಗಿ ಕೆಲಸ ಮಾಡುವವರಿಗೆ ಆದ್ಯತೆ ನೀಡಿದರು. ಕಾಂಗ್ರೆಸ್ ಆಡಳಿತದಲ್ಲಿ ಇದ್ದರೆ ಸೋನಿಯಾ, ರಾಹುಲ್, ಪ್ರಿಯಾಂಕ ಅವರಿಗೆ ಮೊದಲು ಲಸಿಕೆ ಕೊಡುತ್ತಿದ್ದರು ಎಂದು ತಿಳಿಸಿದರು.
ಪ್ರಧಾನಿಯವರು ತಮ್ಮ ತಾಯಿ ನಿಧನರಾದಾಗ ದೆಹಲಿಯಿಂದ ಸಾಮಾನ್ಯ ಕಾರ್ಯಕರ್ತರಂತೆ ಬಂದು ಕೇವಲ ಮೂರು ಗಂಟೆಗಳಲ್ಲೇ ತಮ್ಮ ಕರ್ತವ್ಯಕ್ಕೆ ಹಿಂತಿರುಗಿದರು. ನರೇಂದ್ರ ಮೋದಿಯವರ ಈ ಆದರ್ಶವನ್ನು ಬಿಜೆಪಿ ಸದಾ ಪಾಲಿಸುತ್ತಿದೆ ಎಂದು ತಿಳಿಸಿದರು.

ಇಡೀ ದೇಶ ಮತ್ತು ರಾಜ್ಯದಲ್ಲಿ ಇಂದು ರಾಜಕೀಯ ಪರಿವರ್ತನೆ ಆಗುತ್ತಿದೆ. ಚುನಾವಣೆ ಹತ್ತಿರ ಬರುತ್ತಿದ್ದು, ರಾಜ್ಯದ ರಾಜಕೀಯ ತಿರುವನ್ನು ಪಡೆದಿದೆ. 5 ವರ್ಷಗಳ ಹಿಂದೆ ರಾಜ್ಯದ ಜನರು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷವನ್ನು ತಿರಸ್ಕರಿಸಿದ್ದರು. ಜನರು ಮತದಾನದ ಮೂಲಕ ಬಿಜೆಪಿಗೆ ಅತಿ ಹೆಚ್ಚಿನ ಗೌರವ ಕೊಟ್ಟಿದ್ದರು. ಆದರೆ, ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂಬ ಉದ್ದೇಶದಿಂದ ಕುಟುಂಬವಾದ ಮತ್ತು ಪರಿವಾರವಾದ ಒಂದಾಗಿ ಅನೈತಿಕವಾಗಿ ಸರಕಾರ ರಚಿಸಿದ್ದರು ಎಂದು ಆಕ್ಷೇಪಿಸಿದರು.

ಸರಕಾರ ರಚಿಸಿ ಒಂದು ವರ್ಷ ಕಾಲ ಆ ರಥ ಹೊರಡಲೇ ಇಲ್ಲ; ಇದರಿಂದ ಬೇಸತ್ತು ರಾಜ್ಯದಲ್ಲಿ ಮೊದಲ ಬಾರಿಗೆ 17 ಶಾಸಕರು ರಾಜೀನಾಮೆ ಕೊಟ್ಟು ವಿರೋಧ ಪಕ್ಷಕ್ಕೆ ಬೆಂಬಲ ಕೊಟ್ಟರು. ಬಳಿಕ ರಾಜಕೀಯ ಪರಿವರ್ತನೆ ಆಗಿದೆ. ಇವತ್ತು ಯಡಿಯೂರಪ್ಪ ಅವರ ಮಾರ್ಗದರ್ಶನ ಮತ್ತು ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳಾಗಿವೆ. ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿ, ಬಿಜೆಪಿಗೆ ಭವಿಷ್ಯತ್ತಿದೆ ಎಂದು ನಿರ್ಧರಿಸಿ ಹತ್ತಾರು ಜನರು ಬಿಜೆಪಿ ಸೇರಿದ್ದಾರೆ ಎಂದು ನುಡಿದರು. ಅವರನ್ನು ಹೃದಯಪೂರ್ವಕವಾಗಿ ಸ್ವಾಗತಿಸುವುದಾಗಿ ತಿಳಿಸಿದರು.
ಇಂದು ಹಳೆ ಮೈಸೂರು ಭಾಗದ ಇತರ ಪಕ್ಷಗಳ ಹತ್ತಾರು ಪ್ರಮುಖರು ಬಿಜೆಪಿ ಸೇರಿದ್ದಾರೆ. ಪರಿವಾರ ವಾದ, ಕುಟುಂಬ ವಾದದಿಂದ ರಾಷ್ಟ್ರೀಯ ವಾದಕ್ಕೆ ಬಂದ ನಿಮಗೆಲ್ಲರಿಗೂ ಸ್ವಾಗತ ಎಂದು ತಿಳಿಸಿದರು. ದೇಶವನ್ನು ಸರ್ವತೋಮುಖ ಅಭಿವೃದ್ಧಿಯತ್ತ ಮುನ್ನಡೆಸುವ ನರೇಂದ್ರ ಮೋದಿಯವರ ಚಿಂತನೆಗೆ ಅನುಗುಣವಾಗಿ ಕ್ಷೇತ್ರ, ಮತಗಟ್ಟೆಗಳಲ್ಲಿ ನೀವು ಕೆಲಸ ಮಾಡುತ್ತೀರೆಂದು ಆಶಿಸುವುದಾಗಿ ಹೇಳಿದರು.

ಇದನ್ನೂ ಓದಿ : Karnataka Election | ಬಿಜೆಪಿಯವರೇ ನಳಿನ್‌ ಅವರನ್ನು ಚಪ್ಪಲಿ ಬಿಡುವ ಜಾಗದಲ್ಲಿ ಬಿಟ್ಟಿದ್ದಾರೆ ಎಂದ ಬಿ.ಕೆ. ಹರಿಪ್ರಸಾದ್‌

ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾಣ, ರಾಜ್ಯದ ಅಬಕಾರಿ ಸಚಿವ ಕೆ. ಗೋಪಾಲಯ್ಯ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಮೈಸೂರು ಜಿಲ್ಲೆ ಅಧ್ಯಕ್ಷ ಶ್ರೀವತ್ಸ, ಹಾಸನ ಜಿಲ್ಲೆ ಅಧ್ಯಕ್ಷ ಹೆಚ್.ಕೆ. ಸುರೇಶ್, ಮೈಸೂರು ಮಹಾಪೌರ ಶಿವಕುಮಾರ್, ಮಾಜಿ ಶಾಸಕ ಹೆಚ್. ವಿಶ್ವನಾಥ್ ಅವರು ಭಾಗವಹಿಸಿದ್ದರು.

ಪಕ್ಷ ಸೇರ್ಪಡೆ:
ಕಾಂಗ್ರೆಸ್ ಯುವ ಮುಖಂಡ ಕವೀಶ್‍ಗೌಡ ವಾಸು, ಜೆಡಿಎಸ್ ತಾಲೂಕು ಘಟಕದ ಮಾಜಿ ಅಧ್ಯಕ್ಷ ಸೋಮಶೇಖರ್, ಕಾಂಗ್ರೆಸ್ ಮಾಜಿ ಪದಾಧಿಕಾರಿ ವೆಂಕಟೇಶ್, ರೈತ ಸಂಘಟನೆ ಜಿಲ್ಲಾ ಅಧ್ಯಕ್ಷ ದಿವಾಕರ್ ಗೌಡ, ಕಾಂಗ್ರೆಸ್ ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ವಿ. ರಾಜಪ್ಪ, ಜೆಡಿಎಸ್ ಪರಾಜಿತ ಅಭ್ಯರ್ಥಿ ಗಿರೀಶ್ ನಾಶಿ, ಪುಣ್ಯ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕಿ ಡಾ. ಪುಣ್ಯವತಿ ನಾಗರಾಜ್ ಅವರು ಬಿಜೆಪಿ ಸೇರಿದರು.

Exit mobile version