ಬೆಂಗಳೂರು: ನಮ್ಮ ಮೆಟ್ರೋ ವಿಸ್ತೃತ ನೇರಳೆ ಮಾರ್ಗ (Namma Metro Purple Line) ಯಾವುದೇ ಅಧಿಕೃತ ಕಾರ್ಯಕ್ರಮವಿಲ್ಲದೆ ಇಂದು ಕಾರ್ಯಾರಂಭ ಮಾಡಿದೆ. ಚಲ್ಲಘಟ್ಟದಿಂದ ವೈಟ್‌ಫೀಲ್ಡ್‌ವರೆಗೆ ವಿಸ್ತರಿತಗೊಂಡಿರುವ ಈ ಲೈನ್‌ಗೆ ಮೊದಲ ದಿನವೇ ಪ್ರಯಾಣಿಕರ ಉತ್ತಮ ಸ್ಪಂದನ ವ್ಯಕ್ತವಾಯಿತು.
ಯಾವುದೇ ಅಧಿಕೃತ ಕಾರ್ಯಕ್ರಮದ ಹೊರತಾಗಿ ಆರಂಭವಾದ ಚಲ್ಲಘಟ್ಟ – ವೈಟ್‌ಫೀಲ್ಡ್ ನೇರಳೆ ಮಾರ್ಗದ ಆರಂಭಿಕ ನಿಲ್ದಾಣಗಳಲ್ಲಿಯೂ ಪ್ರಯಾಣಿಕರ ಉತ್ತಮ ಸ್ಪಂದನ ವ್ಯಕ್ತವಾಯಿತು. ಐಟಿ ಉದ್ಯೋಗಿಗಳಿಗೆ, ವಿದ್ಯಾರ್ಥಿಗಳಿಗೆ ಇದರಿಂದ ಹೆಚ್ಚಿನ ಸಂತಸವಾಗಿದೆ.
ವೈಟ್‌ಫೀಲ್ಡ್‌ನಲ್ಲಿರುವ ನೂರಾರು ಐಟಿ ಕಂಪನಿಗಳ ಉದ್ಯೋಗಿಗಳು ರಾಜಧಾನಿಯ ಬೇರೆಬೇರೆಡೆಯಿಂದ ಮೆಟ್ರೋ ಮೂಲಕ ಆಗಮಿಸಲು ನೇರಳೆ ಮಾರ್ಗ ಅವಕಾಶ ಕಲ್ಪಿಸಿಕೊಟ್ಟಿದೆ. ಹಾಗೆಯೇ ಚಲ್ಲಘಟ್ಟ ಸಮೀಪವೇ ಇರುವ RR ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವಿಧ್ಯಾರ್ಥಿಗಳು, ಸಿಬ್ಬಂದಿ, ರೋಗಿಗಳಿಗೂ ಇದರಿಂದ ಹೆಚ್ಚು ಪ್ರಯೋಜನವಾಗಲಿದೆ.
ನೇರಳೆ ಮಾರ್ಗದಲ್ಲಿ ಬಾಕಿ ಉಳಿದಿದ್ದ ಕೆಂಗೇರಿ- ಚಲ್ಲಘಟ್ಟ (2.10 ಕಿ.ಮೀ.) ಹಾಗೂ ಬೈಯಪ್ಪನಹಳ್ಳಿ- ಕೆ.ಆರ್.ಪುರ (2.10 ಕಿ.ಮೀ.) ಮಾರ್ಗಗಳನ್ನು ಸಂಪೂರ್ಣಗೊಳಿಸಲಾಗಿದೆ. ಈ ವಿಸ್ತರಿತ ಮಾರ್ಗ ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿಗೆ 43.5 ಕಿ.ಮೀ ಇದ್ದು, ಒಟ್ಟು ಪ್ರಯಾಣದ ಅವಧಿ 1 ಗಂಟೆ 40 ನಿಮಿಷ. ಈ ಮಾರ್ಗ ಒಟ್ಟು 37 ನಿಲ್ದಾಣಗಳನ್ನು ಒಳಗೊಂಡಿದ್ದು, ಚಲ್ಲಘಟ್ಟದಿಂದ ವೈಟ್‌ಫೀಲ್ಡ್‌ಗೆ 60 ರೂ. ಟಿಕೆಟ್ ದರ ನಿಗದಿಯಾಗಿದೆ.
ಪ್ರಸ್ತುತ ನಮ್ಮ ಮೆಟ್ರೋ 69.66 ಕಿ.ಮೀ. ಮಾರ್ಗದಲ್ಲಿ ಸಂಚರಿಸುತ್ತಿದ್ದು, ಇಂದಿನಿಂದ ಮೆಟ್ರೋ ಜಾಲ 73.81 ಕಿ.ಮೀ.ಗೆ ವಿಸ್ತರಣೆಯಾಗಿದೆ.
ನೇರಳೆ ಮಾರ್ಗದ ನಿಲ್ದಾಣಗಳ ನಡುವೆ ತೆಗೆದುಕೊಳ್ಳುವ ಪ್ರಯಾಣದ ಸಮಯ:
1) ವೈಟ್‌ಫೀಲ್ಡ್‌ನಿಂದ ಪಟಂದೂರು ಅಗ್ರಹಾರದ ನಡುವೆ 10 ನಿಮಿಷಗಳು.
2) ಮೈಸೂರು ರಸ್ತೆಯಿಂದ ಚಲ್ಲಘಟ್ಟಕ್ಕೆ 10 ನಿಮಿಷಗಳು.
3) ಪಟಂದೂರು ಅಗ್ರಹಾರದಿಂದ ಮೈಸೂರು ರಸ್ತೆಗೆ 5 ನಿಮಿಷ.
4) ನಾಡಪ್ರಭು ಕೆಂಪೇಗೌಡ ನಿಲ್ದಾಣ- ಮೆಜೆಸ್ಟಿಕ್‌ನಿಂದ ಎಂ.ಜಿ ರಸ್ತೆ- ಬೆಳಗಿನ ಪೀಕ್ ಸಮಯದಲ್ಲಿ 3 ನಿಮಿಷಕ್ಕೆ ಒಂದು ರೈಲು.
5) ಕೊನೆಯ ರೈಲು ವೈಟ್‌ಫೀಲ್ಡ್‌ನಿಂದ (ಕಾಡುಗೋಡಿ) ರಾತ್ರಿ 10.45ಕ್ಕೆ ಹೊರಡುತ್ತದೆ.
6) ಉಳಿದ ಟರ್ಮಿನಲ್ ನಿಲ್ದಾಣಗಳಿಂದ ರಾತ್ರಿ 11.05ಕ್ಕೆ ಹೊರಡುತ್ತದೆ.
7) ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ರೈಲು ಸೇವೆಗಳು ಎಂದಿನಂತೆ ಬೆಳಿಗ್ಗೆ 5 ಗಂಟೆಗೆ ಪ್ರಾರಂಭ
ಇದನ್ನೂ ಓದಿ: Namma Metro : ಮೆಟ್ರೋ ರೈಲಿನಲ್ಲಿ ಗೋಬಿ ಮಂಚೂರಿ ತಿಂದವನಿಗೆ 500 ರೂ. ದಂಡ