ಬೆಂಗಳೂರು: ಬಹು ನಿರೀಕ್ಷೆಯ ನಮ್ಮ ಮೆಟ್ರೋ (Namma Metro) ಹಳದಿ ಮಾರ್ಗ ಕಾರ್ಯಾಚರಣೆ (Namma Metro Yellow line) 2024ರ ಫೆಬ್ರವರಿ ತಿಂಗಳಲ್ಲಿ ಆರಂಭವಾಗುತ್ತದೆ ಎಂದು ಹೇಳಲಾಗಿತ್ತು. ಮಾರ್ಗ ಸಿದ್ಧವಾಗಿದೆ, ಮೆಟ್ರೋ ಸ್ಟೇಷನ್‌ಗಳು (Metro Stations) ರೆಡಿ ಇವೆ. ಆದರೆ, ರೈಲು ಓಡಾಟ ಮಾತ್ರ ವಿಳಂಬವಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಚೀನಾ ಎಂದರೆ ನಂಬುತ್ತೀರಾ!
ಬೆಂಗಳೂರಿನ ಆರ್.ವಿ ರಸ್ತೆಯಿಂದ ಬೊಮ್ಮ ಸಂದ್ರವನ್ನು ಸಂಪರ್ಕಿಸುವ ಅತ್ಯಂತ ಪ್ರಮುಖ 18.82 ಕಿ.ಮೀ. ಉದ್ದದ ಮೆಟ್ರೋ ಮಾರ್ಗದ ಕಾಮಗಾರಿ 2017ರ ನವೆಂಬರ್‌ನಲ್ಲಿ ಆರಂಭವಾಗಿತ್ತು. ಎಲ್ಲವೂ ಸರಿ ಇದ್ದರೆ 2023ರ ಜೂನ್‌ನಲ್ಲೇ ಇಲ್ಲಿ ರೈಲು ಓಡಬೇಕಾಗಿತ್ತು. ಆದರೆ, ಕೆಲವೊಂದು ಕಾಮಗಾರಿ ವಿಳಂಬದಿಂದ ಮೊದಲು 2023 ಮತ್ತು ಬಳಿಕ 2024ರ ಫೆಬ್ರವರಿಯಲ್ಲಿ ಓಡಾಟ ಶುರುವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಈಗ ಅದು 2024ರ ಜೂನ್-ಜುಲೈನಲ್ಲಿ ನಡೆಯಬಹುದು ಎಂದು ಹೇಳಲಾಗುತ್ತಿದೆ.
ಎಲ್ಲಿಂದ ಎಲ್ಲಿವರೆಗೆ ಹಳದಿ ಮಾರ್ಗ?
ಹಳದಿ ಲೈನ್ ಮೆಟ್ರೋ ಆರಂಭವಾಗುವುದು ಈಗ ಹಸಿರು ಮಾರ್ಗದಲ್ಲಿರುವ ರಾಷ್ಟ್ರೀಯ ವಿದ್ಯಾಲಯ ರಸ್ತೆ ಸ್ಟೇಷನ್‌ನಿಂದ. ರಾಷ್ಟ್ರೀಯ ವಿದ್ಯಾಲಯ ಸ್ಟೇಷನ್‌ನಿಂದ ರಾಗಿಗುಡ್ಡ, ಜಯದೇವ ಆಸ್ಪತ್ರೆ ಬಿ ಟಿ ಎಂ ಬಡಾವಣೆ, ಕೇಂದ್ರ ರೇಷ್ಮೆ ಮಂಡಳಿ, ಬೊಮ್ಮನಹಳ್ಳಿ (ರೂಪೇನ ಅಗ್ರಹಾರ), ಹೊಂಗಸಂದ್ರ (ಗಾರ್ವೇಬಾವಿ ಪಲ್ಯ), ಕೂಡ್ಲು ದ್ವಾರ, ಸಿಂಗಸಂದ್ರ, ಹೊಸ ರಸ್ತೆ, ಬೆರಟೇನ ಅಗ್ರಹಾರ, ಕೋನಪ್ಪನ ಅಗ್ರಹಾರ, ಎಲೆಕ್ಟ್ರಾನಿಕ್ ಸಿಟಿ, ಹುಸ್ಕೂರು ರಸ್ತೆ (ವೀರಸಂದ್ರ), ಹೆಬ್ಬಗೋಡಿ, ಬೊಮ್ಮಸಂದ್ರ ಹೀಗೆ 14 ಸ್ಟೇಷನ್‌ಗಳು ಈ ಮಾರ್ಗದಲ್ಲಿವೆ.
ಹಳದಿ ಮಾರ್ಗದ ಕಾಮಗಾರಿ ಕೆಲಸ ಈಗಾಗಲೇ ಸಂಪೂರ್ಣವಾಗಿದೆ. ಬಾಕಿ ಉಳಿದದ್ದು ಪ್ರಾಯೋಗಿಕ ಪರೀಕ್ಷೆ ಮತ್ತು ಚಾಲನೆ. ಆದರೆ, ಅದೀಗ ಮುಂದೆ ಹೋಗಿರುವುದಕ್ಕೆ ಮುಖ್ಯ ಕಾರಣ ಚೀನಾದಿಂದ ಮೆಟ್ರೋ ಬೋಗಿಗಳ ಪೂರೈಕೆ ಆಗದೆ ಇರುವುದು. ಅಲ್ಲಿಂದ ಬೋಗಿಗಳು ಬಂದು ಸಿಗ್ನಲ್ ತಪಾಸಣೆ, ಪ್ರಾಯೋಗಿಕ ಓಡಾಟ ನಡೆಸಿದ ಬಳಿಕವಷ್ಟೇ ಹಳದಿ ಮಾರ್ಗದಲ್ಲಿ ರೈಲು ಓಡಲಿದೆ.
ಎಲ್ಲಿಂದ ಬರಬೇಕು ಈ ರೈಲು ಬೋಗಿಗಳು?
ಹಳದಿ ಮಾರ್ಗದ ಮೆಟ್ರೋ ರೈಲು ಕೋಚ್‌ಗಳ ಪೂರೈಕೆಯ ಟೆಂಡರ್ ವಹಿಸಿಕೊಂಡಿರುವುದು ಚೀನಾದ ರೈಲ್ವೇ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್. ಹಾಗಂತ ಅದು ಚೀನಾದಲ್ಲೇ ಕೋಚ್ ತಯಾರಿಸಿ ರವಾನಿಸುವುದೇನೂ ಅಲ್ಲ. ಅದು ಉತ್ಪಾದನೆ ಮಾಡುವುದು ಕೋಲ್ಕತ್ತಾದ ಟಿಟಾಗರ್ ರೈಲ್ ಸಿಸ್ಟಮ್ಸ್ ಕಂಪನಿಯಲ್ಲಿ. ಚೀನಾದ ಈ ಕಂಪನಿ ಒಟ್ಟು 216 ಮೆಟ್ರೋ ಕೋಚ್ ಪೂರೈಕೆ ಮಾಡಬೇಕಾಗಿದೆ. ಇದರ ಪೂರೈಕೆಗೆ ಚೀನಾದಿಂದ ಇನ್ನೂ ಅಧಿಕೃತ ಅನುಮತಿ ಈ ಕಂಪನಿಗೆ ಸಿಕ್ಕಿಲ್ಲ. ಚೀನಾದ ಸಿಬ್ಬಂದಿ ಜನವರಿ ಕೊನೆಯ ವಾರದಲ್ಲಿ ಬೆಂಗಳೂರಿಗೆ ಬಂದು ಪರಿಶೀಲಿಸಿ ಬಳಿಕ ಪ್ರಕ್ರಿಯೆ ಆರಂಭವಾಗಬೇಕು.
ಇದನ್ನೂ ಓದಿ : Namma Metro : ಲೈಂಗಿಕ ಕಿರುಕುಳ ಹೆಚ್ಚಳ; ನಮ್ಮ ಮೆಟ್ರೋ ರೈಲಿನಲ್ಲಿ ಮಹಿಳೆಯರಿಗಾಗಿ ಮತ್ತೊಂದು ಬೋಗಿ ಮೀಸಲು!
ನಮ್ಮ ಮೆಟ್ರೋ ವಿಶೇಷ ಮಾದರಿಯ ಕೋಚ್ ಗಳನ್ನು ಪೂರೈಕೆ ಮಾಡುವ ಚೀನಾ ಕಂಪನಿ ಸಿಬ್ಬಂದಿ ಬೆಂಗಳೂರಿಗೆ ಬಂದ ಬಳಿಕ ಅವರು ಅನುಮತಿ ನೀಡಬೇಕು. ಕೋಲ್ಕೊತಾದ ಕಂಪನಿಯಿಂದ ಮೆಟ್ರೋ ಬೋಗಿಗಳು ಚೆನ್ನೈ ಬಂದರಿಗೆ ತಲುಪಬೇಕು, ಅಲ್ಲಿಂದ ರಸ್ತೆ ಮಾರ್ಗವಾಗಿ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ಬರಬೇಕಾಗಿದೆ.
ಚೀನಾ ರೈಲ್ವೇ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್ ತಿತಾಗಢ್ ಘಟಕದಲ್ಲಿ ತಯಾರಿಸಿದ ಈ ಕೋಚ್‌ಗಳು ಬೆಂಗಳೂರಿಗೆ ಬಂದು ಪ್ರಾಯೋಗಿಕ ಪರೀಕ್ಷೆಗಳು ಮುಗಿದ ಬಳಿಕ, ಮುಖ್ಯವಾಗಿ ನಮ್ಮ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು ಅನುಮೋದನೆ ನೀಡಬೇಕು.
ಈ ಎಲ್ಲಾ ಪ್ರಕ್ರಿಯೆಗಳು ಮುಗಿದು ಹಳದಿ ಮಾರ್ಗದಲ್ಲಿ ಮೆಟ್ರೋ ರೈಲು ಓಡಲು ಇನ್ನೂ ಆರು ತಿಂಗಳು ಬೇಕು ಎಂದು ಹೇಳಲಾಗುತ್ತಿದೆ.