Site icon Vistara News

BY Vijayendra: ಭ್ರಷ್ಟಾಚಾರರಹಿತ 9 ವರ್ಷ; ಅಟಲ್‌ ಕನಸು ನನಸಾಯ್ತೆಂದ ವಿಜಯೇಂದ್ರ

Vajapayee Birth day Good Governence day

ಬೆಂಗಳೂರು: ʻʻಕಳೆದ 9 ವರ್ಷಗಳಲ್ಲಿ ಯಾರೂ ಕೂಡ ಭ್ರಷ್ಟಾಚಾರದ (Corruption Case) ಬಗ್ಗೆ ಮಾತನಾಡುತ್ತಿಲ್ಲ. ಯಾವುದೇ ಭ್ರಷ್ಟಾಚಾರದ ಆರೋಪ ಇಲ್ಲ. ವಾಜಪೇಯಿಯವರ (Atal Bihari Vajapayee) ಕನಸು ಇದೇ ಆಗಿತ್ತು. ಅದೀಗ ನನಸಾಗುತ್ತಿದೆʼʼ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ಹೇಳಿದ್ದಾರೆ.

ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಾಡಪ್ರಭು ಕೆಂಪೇಗೌಡ ಜನಪರ ವೇದಿಕೆಯ ಸಹಯೋಗದಲ್ಲಿ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಶಾಸಕರಾದ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಉತ್ತಮ ಆಡಳಿತ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಜನ್ಮ ದಿನವನ್ನು (ಡಿಸೆಂಬರ್‌ 25) ಸುಶಾಸನ ದಿನ (ಉತ್ತಮ ಆಡಳಿತ ದಿನ-Good Governence day) ಆಗಿ ಪ್ರತಿ ವರ್ಷ ಆಚರಿಸಲಾಗುತ್ತದೆ.

ʻʻಮೊದಲು ನಮ್ಮ ದೇಶದಲ್ಲಿ ಉತ್ತಮ ಆಡಳಿತ ದಿನ ಎನ್ನುವ ವಿಷಯದ ಬಗ್ಗೆ ಚರ್ಚೆಯನ್ನೇ ಮಾಡುತ್ತಿರಲಿಲ್ಲ. ನಮ್ಮ ದೇಶದಲ್ಲಿ ಇದೆಲ್ಲಾ ಸಾಧ್ಯವಾ? ಉತ್ತಮ ಆಡಳಿತ ಅಂದರೆ ಕೇವಲ ಅಮೆರಿಕ, ಜಪಾನ್, ಇಂಗ್ಲೆಂಡ್ ಇಂತಹ ದೇಶಗಳಲ್ಲಿ ಮಾತ್ರ ಎನ್ನುವ ಭ್ರಮೆ ಇತ್ತು. ಆದರೆ ಅದನ್ನು ಬದಲಿಸಿದ್ದು ಮಾಜಿ ಪ್ರಧಾನಿಗಳಾದ ಅಟಲ್‌ ಬಿಹಾರಿ ವಾಜಪೇಯಿ ಅವರು. ಅವರು ಅಭಿವೃದ್ಧಿ ಮೂಲಕ ಉತ್ತಮ ಆಡಳಿತಕ್ಕೆ ಅಡಿಪಾಯ ಹಾಕಿದರುʼʼ ಎಂದು ವಿಜಯೇಂದ್ರ ಹೇಳಿದರು.

ʻʻಭಾರತದ ಪರಿಸ್ಥಿತಿ ಕಳೆದ ಒಂಬತ್ತು ವರ್ಷಗಳಲ್ಲಿ ಬದಲಾಗಿದೆ‌. ಇಂದು ಇಡೀ ಜಗತ್ತು ಭಾರತದ ಕಡೆ ನೋಡುತ್ತಿದೆ. ಭ್ರಷ್ಟಾಚಾರ ರಹಿತ ಆಡಳಿತ ಕೊಡೋಕೆ ಹೇಗೆ ಸಾಧ್ಯ ಆಗ್ತಿದೆ ಎಂದು ಜಗತ್ತು ನೋಡುತ್ತಿದೆ‌. 9 ವರ್ಷಗಳಲ್ಲಿ ಯಾರು ಕೂಡ ಭ್ರಷ್ಟಾಚಾರದ ಬಗ್ಗೆ ಮಾತಾಡ್ತಾ ಇಲ್ಲ. ಯಾವುದೇ ಭ್ರಷ್ಟಾಚಾರದ ಆರೋಪ ಇಲ್ಲ.ʼʼ ಎಂದು ವಿಜಯೇಂದ್ರ ಅವರು ಹರ್ಷಿಸಿದರು.

ಉತ್ತಮ ಆಡಳಿತ, ಭ್ರಷ್ಟಾಚಾರರಹಿತ ಆಡಳಿತ ವಾಜಪೇಯಿ ಅವರ ಕನಸಾಗಿತ್ತು. ಅವರ ಕನಸನ್ನು ನನಸು ಮಾಡ್ತಾ ಇರುವುದು ನರೇಂದ್ರ ಮೋದಿ ಅವರು. ಮೋದಿ ಅವರು‌ ಇವತ್ತಿಗೆ ಏನು ಮಾಡಬೇಕು ಎಂದು ಯೋಚನೆ ಮಾಡ್ತಾ ಇಲ್ಲ‌. 2047 ಕ್ಕೆ ಭಾರತ ಹೇಗೆ ಇರಬೇಕೆಂದು ಕೆಲಸ ಮಾಡ್ತಾ ಇದ್ದಾರೆ ಎಂದು ವಿಜಯೇಂದ್ರ ಅವರು ಹೇಳಿದರು.

ದೇಶ ಕಂಡ ಅತ್ಯುತ್ತಮ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಸ್ಮರಣೆಯ ಸಂದರ್ಭದಲ್ಲಿ ಸದೃಢ ಹಾಗೂ ಸಮೃದ್ಧ ಭಾರತ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಅವರ ಶ್ರೇಷ್ಠ ವ್ಯಕ್ತಿತ್ವವನ್ನು ದೇಶ ಸ್ಮರಿಸುತ್ತಿದೆ, ಅವರ ಆದರ್ಶಯುತ ಜೀವನ ಮತ್ತು ಸಾಧನೆಗಳು ದೇಶದ ಅಭಿವೃದ್ಧಿಯ ಪಥವು ಮುನ್ನಡೆಯಲು ನಿತ್ಯ ನಿರಂತರ ಮಾರ್ಗದರ್ಶಿಯಾಗಿವೆ ಎಂದು ವಿಜಯೇಂದ್ರ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ರೈತರು, ಬಡವರು ಹಾಗೂ ಹಿಂದುಳಿದ ವರ್ಗದವರ ಪರವಾಗಿ ಕೈಗೊಂಡ ಅನೇಕ ಅಭಿವೃದ್ಧಿ ಯೋಜನೆಗಳು ಹಾಗೂ ಸಾಧನೆಗಳು ಅಟಲ್ ಜೀ ಅವರ ಕನಸುಗಳು ಸಾಕಾರಗೊಳ್ಳುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಮಾಜಿ ಉಪಮುಖ್ಯಮಂತ್ರಿಗಳಾದ ಡಾ.ಸಿ.ಎನ್.ಅಶ್ವಥ್ ನಾರಾಯಣ್, ಶಿಕ್ಷಣ ಫೌಂಡೇಶನ್‌ನ CEO ಶ್ರೀ ವಿ.ಆರ್. ಪ್ರಸನ್ನ, ಬುಲ್ ಫೋರ್ಸ್ ಮತ್ತು ವರ್ಚುವಲ್ ಟೆಕ್ ಹೆಲ್ತ್ ಕ್ಲಿನಿಕ್‌ಗಳ ಸಹ-ಸಂಸ್ಥಾಪಕರಾದ ಸುಬ್ರಹ್ಮಣ್ಯ ಬಸವನಹಳ್ಳಿ, ಇಂಡಿಗೋ ಇನ್ಫೋದಲ್ಲಿ ನಿರ್ದೇಶಕ ಮಧು ಶೆಟ್ಟಿ, ದಿ ಗ್ರೀನ್ ಪಾತ್ ಸಂಸ್ಥಾಪಕ ಎಚ್.ಆರ್ ಜಯರಾಮ್ ಅವರು, ವಿವಿಧ ಕ್ಷೇತ್ರಗಳ ಗಣ್ಯರು, ಚಿಂತಕರು ಭಾಗವಹಿಸಿದ್ದರು.

Exit mobile version