Site icon Vistara News

Girls Orphanage : ಮುಸ್ಲಿಂ ಅನಾಥಾಶ್ರಮಕ್ಕೆ ಮಕ್ಕಳ ಹಕ್ಕುಗಳ ಆಯೋಗ ದಾಳಿ; ಕುವೈಟ್‌ಗೆ ಹುಡುಗಿಯರ ಕಳ್ಳಸಾಗಣೆ?

Girls Orphanage Human Trafficking

ಬೆಂಗಳೂರು: ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗದ (National Commission for Protection of Child Rights-NCPCR) ಅಧ್ಯಕ್ಷರಾಗಿರುವ ಪ್ರಿಯಾಂಕ್‌ ಕನೂಂಗೋ (Priyank Kanoongo) ಅವರು ಬೆಂಗಳೂರಿನ (Bangalore News) ಅಶ್ವತ್ಥ ನಗರದ ಅಮರಜ್ಯೋತಿ ಲೇಔಟ್‌ನಲ್ಲಿರುವ ಯತೀಂ ಖಾನಾ ನಡೆಸುತ್ತಿರುವ ಹೆಣ್ಮಕ್ಕಳ ಅನಾಥಾಶ್ರಮವೊಂದಕ್ಕೆ (Girls Orphanage) ದಾಳಿ ನಡೆಸಿದ್ದಾರೆ. ಈ ವೇಳೆ ಅವರು ಅಲ್ಲಿರುವ 20 ಹೆಣ್ಮಕ್ಕಳ ಪೈಕಿ ಕೆಲವರನ್ನು ಅಕ್ರಮವಾಗಿ ಕುವೈಟ್‌ಗೆ ಕಳ್ಳಸಾಗಣೆ (Human Trafficking) ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಈ ನಡುವೆ ಪೊಲೀಸರು ಮಧ್ಯ ಪ್ರವೇಶ ಮಾಡಿ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮದರಸದಲ್ಲಿ ಸುಮಾರು 10-20 ಮಕ್ಕಳು ಇದ್ದಾರೆ. ಮಕ್ಕಳಿಗೆ ಸರಿಯಾಗಿ ಶಿಕ್ಷಣವನ್ನು ನೀಡುತ್ತಿಲ್ಲ. ಜೊತೆಗೆ ಧಾರ್ಮಿಕ‌ ಶಿಕ್ಷಣವನ್ನು ನೀಡುತ್ತಿದ್ದಾರೆ. ಅನಾಥಾಶ್ರಮ ನಡೆಸಲು ಇವರಿಗೆ ಯಾವುದೇ ಲೈಸೆನ್ಸ್‌ ಇಲ್ಲ ಎಂದು ಕನೂಂಗೋ ಆರೋಪಿಸಿದ್ದಾರೆ.

Girls Orphanageನಲ್ಲಿ 20ಕ್ಕೂ ಅಧಿಕ ಹೆಣ್ಮಕ್ಕಳು ವಾಸ

ಅಶ್ವತ್ಥ ನಗರದಲ್ಲಿರುವ ಈ ಅನಾಥಾಶ್ರಮ ಅಕ್ರಮವಾಗಿದ್ದು, ಇಲ್ಲಿ ಸುಮಾರು 20 ಹೆಣ್ಮಕ್ಕಳನ್ನು ಕೂಡಿ ಹಾಕಲಾಗಿದೆ. ಅವರಲ್ಲಿ ಕೆಲವರು ತಂದೆ-ತಾಯಿ ಇಲ್ಲದ ಅನಾಥರಾಗಿದ್ದರೆ, ಕೆಲವರು ಯಾರೂ ರಕ್ಷಕರಿಲ್ಲದೆ ಇಲ್ಲಿಗೆ ಬಂದಿದ್ದಾರೆ. ನಾವು ಅಲ್ಲಿಗೆ ಭೇಟಿ ನೀಡಿದಾಗ ನಮಗೆ ಪೂರ್ಣ ಪ್ರಮಾಣದಲ್ಲಿ ತನಿಖೆ ಮಾಡಲು ಅವಕಾಶ ಕೊಟ್ಟಿಲ್ಲ. ನಮ್ಮ ಮಹಿಳಾ ಕೌನ್ಸೆಲರ್‌ಗಳು ಅಲ್ಲಿನ ಹೆಣ್ಮಕ್ಕಳ ಜತೆ ಮಾತನಾಡಿದ್ದಾರೆ. ಆಗ ಅವರಲ್ಲಿ ಒಬ್ಬ ಬಾಲಕಿ ʻನಮಗೆ ಕುವೈಟ್‌ಗೆ ಮದುವೆ ಮಾಡಿಕೊಡುತ್ತಾರೆʼʼ ಎಂದು ಹೇಳಿದ್ದಾಳೆ. ಇದರ ಆಧಾರದಲ್ಲಿ ಗಮನಿಸುವುದಾದರೆ ಇಲ್ಲಿ ಮಕ್ಕಳನ್ನು ಬೆಳೆಸಿ ಅಕ್ರಮವಾಗಿ ಕುವೈಟ್‌ಗೆ ಕಳ್ಳಸಾಗಣೆ ಮಾಡುವ ದಂಧೆಯೊಂದು ನಡೆಯುತ್ತಿರುವುದು ಕಂಡುಬಂದಿದೆ. ಮದುವೆಯ ಹೆಸರಿನಲ್ಲಿ ಅವರನ್ನು ಕುವೈಟ್‌ಗೆ ಸಾಗಿಸಲಾಗುತ್ತಿರುವ ಸಂಶಯವಿದೆ ಎಂದು ಕನೂಂಗೊ ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ತನಿಖೆಯ ವೇಳೆ ಬಾಲಕಿಯರನ್ನು ಸಿಡಬ್ಲ್ಯುಸಿ ಮುಂದೆ ಹಾಜರುಪಡಿಸಲು ಮುಂದಾದಾಗ ಸಲ್ಮಾ ಎಂಬು ಮಹಿಳೆ ಮತ್ತು ಆಕೆಯ ಬಾಸ್ ಶಮೀರ್ ಗೂಂಡಾಗಳನ್ನು ಕರೆಸಿ ಜಗಳಕ್ಕೆ ಯತ್ನಿಸಿದ್ದಾರೆ. ಪೊಲೀಸರ ಮಧ್ಯಸ್ಥಿಕೆಯಲ್ಲಿ ಗೂಂಡಾಗಳನ್ನು ನಿಯಂತ್ರಿಸಲಾಗಿದೆ. ಪೊಲೀಸರ ಸಲಹೆ ಮೇರೆಗೆ ಮಹಿಳಾ ಅಧಿಕಾರಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಠಾಣೆಗೆ ಬರಲಾಗಿದೆ ಎಂದು ಕನೂಂಗೋ ಹೇಳಿದ್ದಾರೆ. ಸಲ್ಮಾ ಎಂಬ ಮಹಿಳೆ ಮದುವೆ ವ್ಯವಹಾರ ಕುದುರಿಸುತ್ತಾಳೆ ಎಂಬ ಆರೋಪವಿದೆ ಎಂದಿದ್ದಾರೆ ಕನೂಂಗೋ.

ಈ ಮಧ್ಯೆ ಹೆಣ್ಮಕ್ಕಳ ಅನಾಥಾಶ್ರಮಕ್ಕೆ ಯಾವುದೇ ಪೂರ್ವ ಸೂಚನೆ ಇಲ್ಲದೆ ದಾಳಿ ಮಾಡಿ ಭಯ ಉಂಟು ಮಾಡಲಾಗಿದೆ ಎಂದು ಕೂಡಾ ಅಲ್ಲಿಗೆ ಬಂದವರು ದೂರಿದರು.

ಕಳೆದ ವರ್ಷ ಬಾಲಕರ ಅನಾಥಾಶ್ರಮಕ್ಕೆ ದಾಳಿ

2023ರ ನವೆಂಬರ್‌ 19ರಂದು ಕನೂಂಗೋ ಮತ್ತು ತಂಡ ಬೆಂಗಳೂರಿನ ʻದಾರುಲ್‌ ಉಲೂಂ ಸಯ್ಯದಿಯಾ ಯತೀಂ ಖಾನಾ ಎಂಬ ಬಾಲಕರ ಅನಾಥಾಶ್ರಮಕ್ಕೆ ದಾಳಿ ನಡೆಸಿತ್ತು. ಆಗ ಅಲ್ಲಿನ ಪರಿಸ್ಥಿತಿಯ ವಿಡಿಯೊ ಮಾಡಿ ಪ್ರಸರಣ ಮಾಡಿದ್ದ ಕನೂಂಗೋ ಅವರು ಇಲ್ಲಿನ ಪರಿಸ್ಥಿತಿ ತಾಲಿಬಾನ್‌ ಮಾದರಿಯಲ್ಲಿದೆ. ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಲಾಗುತ್ತಿಲ್ಲ. ಅವರನ್ನು ಕೂಡಿ ಹಾಕಲಾಗಿದೆ. ಅಲ್ಲಿ ಸರಿಯಾದ ವ್ಯವಸ್ಥೆಗಳಿಲ್ಲ ಎಂದು ಆರೋಪಿಸಿದ್ದರು. ಕೊನೆಗೆ ಪೊಲೀಸರು ಕನೂಂಗೋ ವಿರುದ್ಧವೇ ಅಕ್ರಮ ಪ್ರವೇಶದ ದೂರು ದಾಖಲಿಸಿಕೊಂಡಿದ್ದರು.

ಇದನ್ನೂ ಓದಿ : Taliban Training? : ಬೆಂಗಳೂರಿನ ಯತೀಮ್‌ ಖಾನಾದಲ್ಲಿ 200 ಮಕ್ಕಳಿಗೆ ತಾಲಿಬಾನ್‌ ಶಿಕ್ಷಣ?

Exit mobile version