Site icon Vistara News

ಅಪಾಯಕಾರಿ ಕಟ್ಟಡಗಳ ಮಾಹಿತಿ ಕೊಡಿ: ಬಿಬಿಎಂಪಿ ನೂತನ ಆಯುಕ್ತ ಗಿರಿನಾಥ್

ಬೆಂಗಳೂರು: ಮಳೆಗಾಲ ಆರಂಭವಾಗಲಿದ್ದು, ಅಪಾಯಕಾರಿ ಕಟ್ಟಡಗಳ ಮಾಹಿತಿಯನ್ನು ನೀಡಿದರೆ ಅವುಗಳನ್ನು ತೆರವು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ನೂತನ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದ್ದಾರೆ.

ಹಿಂದಿನ ಆಯುಕ್ತ ಗೌರವ್ ಗುಪ್ತಾ ಅವರಿಂದ ಅಧಿಕಾರ ವಹಿಸಿಕೊಂಡ ನಂತರ, ಅವರು ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಇದನ್ನು ತಿಳಿಸಿದರು.

ನಗರದಲ್ಲಿ ಅಪಾಯದಂಚಿನ ಕಟ್ಟಡಗಳ ತೆರವು ಮಾಡಲು ಸರ್ವೆ ಮಾರ್ಕಿಂಗ್ ಮಾಡಲಾಗಿದೆ. ಪ್ರತಿ ಶನಿವಾರ ತೆರವು ಕಾರ್ಯ ನಡೆಯುತ್ತಿದೆ. ಬಹಳ ಹಳೆಯ ಕಟ್ಟಡಗಳು ಇವೆ. ಕೆಲವೊಂದು ಲೋ ಲೆವೆಲ್, ಮತ್ತಷ್ಟು ಎತ್ತರದ ಕಟ್ಟಡಗಳು ಇವೆ. ಇವುಗಳ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತದೆ. ಮಳೆಗಾಲದ ಮುನ್ನಚ್ಚರಿಕೆಗಾಗಿ ಸಂಬಂಧಿತ ಅಧಿಕಾರಿಗಳ ಜೊತೆ ಚರ್ಚೆ ಆಗಿದೆ. ಅಪಾಯಕಾರಿ ಕಟ್ಟಡಗಳ ಪಟ್ಟಿ ಸಿದ್ಧ ಮಾಡಲಾಗುತ್ತದೆ. ನಾಗರಿಕರು ಮಾಹಿತಿ ನೀಡಬೇಕು. ಅಪಾಯಕಾರಿ ಮರಗಳ ಮಾಹಿತಿಯನ್ನೂ ಕೊಡಿ ಎಂದು ಆಯುಕ್ತರು ಹೇಳಿದರು. ಪಾಲಿಕೆ ಸಂಬಂಧಿತ ಎಲ್ಲ ವಿಚಾರಗಳಿಗಾಗಿ ಬಿಬಿಎಂಪಿ ಸಹಾಯ ಆ್ಯಪನ್ನೇ ಬಳಸಿಕೊಳ್ಳಿ ಎಂದು ತುಷಾರ್ ಗಿರಿನಾಥ್ ತಿಳಿಸಿದರು.

ನಗರದಲ್ಲಿನ ಗುಂಡಿಗಳು ಗುಂಡಿಗಳಲ್ಲ, ಹೊಂಡಗಳಾಗಿದ್ದು, ನಗರದ ರಸ್ತೆಗಳು ಗುಂಡಿಗಳಿಂದ ಮುಕ್ತವಾಗಲು ಹೆಚ್ಚಿನ ಗಮನ ಮತ್ತು ಸಮಯ ಬೇಕಾಗುತ್ತದೆ ಎಂದವರು ಬಣ್ಣಿಸಿದರು. ಗುಂಡಿಗಳಿಂದ ರಸ್ತೆಗಳನ್ನು ಮುಕ್ತಗೊಳಿಸಿ ನಾಗರಿಕರ ಸುರಕ್ಷತೆ ಬಲಪಡಿಸುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಆದ್ಯತೆಯಾಗಿದೆ. ಇದಕ್ಕೆ ಪಾಲಿಕೆ ಕಾರಣ ಎಂದು ಹೇಳಲು ಆಗಲ್ಲ. ಗುತ್ತಿಗೆದಾರರೇ ಅದನ್ನ ಮಾಡಬೇಕಿದೆ ಎಂದರು.

ಯಾವುದೇ ಕುಂದುಕೊರತೆ ಇರಬಾರದು ಮತ್ತು ಇದ್ದರೆ, ಅದು ಏಕೆ ಇದೆ ಮತ್ತು ಅದನ್ನು ಇನ್ನೂ ಏಕೆ ಪರಿಹರಿಸಲಾಗಿಲ್ಲ ಎಂಬುದನ್ನು ಪರಿಹರಿಸಿಕೊಳ್ಳಬೇಕು. ಅಲ್ಲದೆ, ನಾಗರಿಕನಾಗಿ ನಗರದ ಕಸ ನಿರ್ವಹಣೆಯ ಜೊತೆಗೆ ನೀರು ನಿಲ್ಲುವುದು ಮತ್ತು ಒಳಚರಂಡಿ ಸಮಸ್ಯೆಗಳನ್ನು ಪರಿಹರಿಸುವುದನ್ನು ಖಚಿತಪಡಿಸಿಕೊಳ್ಳುವುದು ನನ್ನ ಮೊದಲ ಆದ್ಯತೆಯಾಗಿದೆ ಎಂದು ಅವರು ಹೇಳಿದರು.

ನಗರದಲ್ಲಿ ಮಳೆಯಿಂದ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುವುದು ತಮ್ಮ ಮೊದಲ ಆದ್ಯತೆಯಾಗಿದ್ದು, ಈ ಸಮಸ್ಯೆಗಳಿಗೆ ಅಲ್ಪಾವಧಿಯ ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ನೌಕರರು ತಮ್ಮ ನೇಮಕಾತಿ ಆಗಿರುವ ವಲಯಗಳ ಆಗು ಹೋಗು – ಕುಂದು ಕೊರತೆ ನಿತ್ಯ ವಿಸಿಟ್ ಮಾಡಬೇಕು.
ಬೆಳಿಗ್ಗೆ 8ರಿಂದಲೇ ರೌಂಡ್ಸ್ ಮಾಡಬೇಕು. 10 ಗಂಟೆಯಿಂದ 5 ಗಂಟೆವರೆಗೂ ವಲಯ ಕಚೇರಿ ಹಾಗೂ ಕೇಂದ್ರ ಕಚೇರಿಗಳಲ್ಲಿ ಲಭ್ಯ ಇರಬೇಕು. 10 ಗಂಟೆಗೆ ಎಲ್ರೂ ಟೇಬಲ್ ಮೇಲೆ ಇರಬೇಕು. ಬಿಬಿಎಂಪಿ ಮುಖ್ಯ ಆಯುಕ್ತರು, ವಿಶೇಷ ಆಯುಕ್ತರೊಂದಿಗೆ ಚರ್ಚೆ ಮಾಡಬೇಕು. ವಿಶೇಷ ಆಯುಕ್ತರು ನೀಡಿದ್ದ ಆದೇಶ ಸೂಚನೆ, ಜಂಟಿ ಆಯುಕ್ತರು ಮುಖ್ಯ ಅಭಿಯಂತರರಿಗೆ ಮಾಹಿತಿ ಕೊಡಬೇಕು. ಎಲ್ಲ ಕಮೀಷನರ್ ವಾರದ ಪ್ರತಿ ದಿನ ಒಬ್ಬರಂತೆ ಮಾಧ್ಯಮದ ಜತೆ ಮಾತನಾಡಬೇಕು. ಕೆಲಸ ಜಾಸ್ತಿ, ಮಾತು ಕಡಿಮೆ ಮಾಡಬೇಕು ಎಂದು ತುಷಾರ್ ಗಿರಿನಾಥ್ ಹೇಳಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್‌ ತ್ಯಜಿಸುವ ಅನೇಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ –

Exit mobile version