Site icon Vistara News

ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್‌ ಆರಂಭ ಎಂದ ನೂತನ ಆಯುಕ್ತ ಪ್ರತಾಪ್‌ ರೆಡ್ಡಿ

Pratap Reddy

ಬೆಂಗಳೂರು: ರಾಜಧಾನಿ ನಾಗರಿಕರನ್ನು ಹೈರಾಣಾಗಿಸಿದ್ದ ಟೋಯಿಂಗ್‌ ಮತ್ತೆ ಬರಲಿದೆ. ಬೆಂಗಳೂರು ನಗರ ನೂತನ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಪ್ರತಾಪ್‌ ರೆಡ್ಡಿ ಈ ಕುರಿತು ಸ್ಪಷ್ಟವಾಗಿ ಹೇಳಿದ್ದಾರೆ. ಕಮಲ್‌ ಪಂತ್‌ ಅವರಿಂದ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ರೆಡ್ಡಿ, ಸಿಟಿಯಲ್ಲಿ ಸಂಚಾರ ದಟ್ಟಣೆ  ಇದೆ. ಬಹಳಷ್ಟು ಟೇಕ್ನಾಲಜಿ ಈಗಾಗಲೇ ಚಾಲ್ತಿಯಲ್ಲಿದೆ. ಈ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮ ಮಟ್ಟಕ್ಕೆ ಏರಿಸಲಾಗುವುದು. ಟೋಯಿಂಗ್ ಅವಶ್ಯಕತೆ ಖಂಡಿತವಾಗಿದೆ. ಸರ್ಕಾರದ ಜತೆ ಮಾತನಾಡಿ ಹೊಸ ಗೈಡ್‌ಲೈನ್ಸ್‌ ಮಾಡಿ ಜಾರಿಗೆ ತರುತ್ತೇವೆ ಎಂದು ಹೇಳಿದರು.

ಈ ಹಿಂದೆ ಬೆಂಗಳೂರಿನಲ್ಲಿ ಟೋಯಿಂಗ್‌ ಜಾರಿಯಲ್ಲಿತ್ತು. ಟೋಯಿಂಗ್‌ ಸಿಬ್ಬಂದಿಯ ಗೂಂಡಾ ವರ್ತನೆಯಿಂದಾಗಿ ಅನೇಕ ವಾಹನಗಳು ಜಖಂ ಆಗಿದ್ದವು. ಪಾರ್ಕಿಂಗ್‌ ಅವಕಾಶ ತರುವಲ್ಲಿ ವಾಹನ ನಿಲ್ಲಿಸಿದರೂ ಎತ್ತಿಕೊಂಡು ಹೋಗುವುದು, ಮೈಕ್‌ನಲ್ಲಿ ಅನೌನ್ಸ್‌ ಮಾಡದೆ ವಾಹನ ತೆಗೆದುಕೊಂಡುಹೋಗುವುದು ನಡೆದಿತ್ತು. ಇದರ ವಿರುದ್ಧ ಜನರು ಭಾರಿ ಆಕ್ರೋಶ ಕೂಡ ವ್ಯಕ್ತ ಪಡಿಸಿದ್ದರು. ಇದೀಗ ಮತ್ತೆ ಸರ್ಕಾರ ಟೋಯಿಂಗ್‌ ತರುವ ಸಿದ್ಧತೆಯಲ್ಲಿದ್ದು, ಹೊಸ ಗೈಡ್‌ ಲೈನ್ಸ್‌ ತರುವ ಪ್ರಯತ್ನದಲ್ಲಿದೆ.

ಇದನ್ನೂ ಓದಿ |ಪ್ರತಾಪ್‌ ರೆಡ್ಡಿ ಬೆಂಗಳೂರು ಕಮಿಷನರ್‌: ದಯಾನಂದ್‌, ಅಲೋಕ್‌ ಕುಮಾರ್‌ ಕೈತಪ್ಪಿದ ಅವಕಾಶ

ರೌಡಿಸಂ ಕುರಿತು ಮಾತನಾಡಿದ ಪ್ರತಾಪ್‌ ರೆಡ್ಡಿ, ಬೆಂಗಳೂರು ಗ್ಲೋಬಲ್‌ ಸಿಟಿಯಾಗಿದ್ದು, ಉತ್ತಮವಾದ ಪೊಲೀಸ್‌ ವ್ಯವಸ್ಥೆ ಇದೆ. ನಮ್ಮ ಡಿಸಿಪಿಗಳ ಜತೆ ಚರ್ಚೆ ಮಾಡಿ ರೌಡಿಸಂ, ಅಕ್ರಮ ಚಟುವಟಿಕೆ, ಓವರ್ ಸ್ಟೇ, ಡ್ರಗ್ ಮೇಲೆ ಮತ್ತಷ್ಟು ನಿಗಾ ವಹಿಸುತ್ತೇವೆ ಎಂದು ಹೇಳಿದರು.

‌ಕಾಮಾಕ್ಷಿಪಾಳ್ಯದ ಯುವತಿ ಮೇಲೆ ಆ್ಯಸಿಡ್ ದಾಳಿ ಮಾಡಿದ ನಾಗೇಶ್‌ನನ್ನು ಬಂಧಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ ನೂತನ ಆಯುಕ್ತ,  ಮೇಜರ್‌ ಕ್ರೈಂ ಸಂಬಂಧಿತ ಕೇಸ್‌ಗಳನ್ನು ಮಾನಿಟರಿಂಗ್‌ ಮಾಡುತ್ತೇವೆ. ಒಂದು ವೇಳೆ ಅಧಿಕಾರಿಗಳು ಅಪರಾಧಿಗಳ ಪರ ನಿಂತಲ್ಲಿ ಅವರ ಮೇಲೆ ನಿರ್ಧಾಕ್ಷಣ್ಯ ಕ್ರಮ ಕೈಗೊಳ್ಳುತ್ತೇವೆ. ಜೈಲಿನ ಮೇಲೂ ಸೂಕ್ತ ನಿಗಾ ವಹಿಸುತ್ತೇವೆ. ಇಷ್ಟು ದಿನ ಕೋವಿಡ್‌ ಇತ್ತು , ಬೆಂಗಳೂರು ಇನ್ನು ಮೊದಲಿನಂತೆ ಆಗಲಿದೆ ಎಂದು ಹೇಳಿದರು.

ಸೈಬರ್‌ ಕ್ರೈಂ ಬಗ್ಗೆ ಮಾತನಾಡಿದ ಅವರು, ದೇಶದಲ್ಲೆ ಮೊದಲು ನಾವು ಸಿಐಆರ್ ಆರಂಭ ಮಾಡಿದ್ದೇವೆ. ನಮ್ಮನ್ನು ನೋಡಿ ದೇಶದೆಲ್ಲೆಡೆ ಇದನ್ನು ಆರಂಭ ಮಾಡಿದ್ದಾರೆ. ಮತ್ತಷ್ಟು ಮಾರ್ಡನ್ ಟಚ್ ಕೊಟ್ಟು ನಿಗಾ ವಹಿಸುತ್ತೇವೆ. ಒಂದು ವೇಳೆ ನಮ್ಮ ಅಧಿಕಾರಿಗಳು ಕೆಲಸ ಮಾಡದಿದ್ದರೆ ಕ್ರಮ ಕೈಗೊಳ್ಳುತ್ತೇವೆ. ಪ್ರಕರಣದ ತನಿಖೆ ಪಾರದರ್ಶಕವಾಗಿ ನಡೆಯುತ್ತದೆ. ಮತ್ತು ಯಾವುದೇ ಕ್ಲಬ್ ಪಬ್ ಅಕ್ರಮವಾಗಿ ನಡೆಯಲು ಬಿಡುವುದಿಲ್ಲ. ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ಮಾಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ |ಜ್ಞಾನವಾಪಿ ಮಸೀದಿ: ಶಿವಲಿಂಗ ಸಿಕ್ಕಿದ ಸ್ಥಳ ಸೀಲ್‌ ಮಾಡಿ ಎಂದ ಕೋರ್ಟ್‌

Exit mobile version