Site icon Vistara News

15 ಸೋಂಕಿತರಿದ್ದರೆ ಅಪಾರ್ಟ್‌ಮೆಂಟ್‌ನ ಎಲ್ಲರಿಗೂ ಕೊರೊನಾ ಪರೀಕ್ಷೆ: ಬೆಂಗಳೂರಿಗೆ ಪ್ರತ್ಯೇಕ ಮಾರ್ಗಸೂಚಿ

covid

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ಉಲ್ಬಣವಾಗುತ್ತಿದ್ದು, ಆರೋಗ್ಯ ಇಲಾಖೆ ಅಲರ್ಟ್‌ ಆಗಿದೆ. ತಾಂತ್ರಿಕ ಸಲಹಾ ಸಮಿತಿಯ ತಜ್ಞರ ಸಲಹೆ ಮೇರೆಗೆ ಬೆಂಗಳೂರಿಗೆ ಸೀಮಿತವಾಗುವಂತೆ ಪ್ರತ್ಯೇಕ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ | ಕೋವಿಡ್‌ ನಿಯಮ ಉಲ್ಲಂಘನೆ: ಕಾಂಗ್ರೆಸ್‌ ನಾಯಕರ ವಿರುದ್ಧ ಚಾರ್ಜ್‌ ಶೀಟ್‌ಗೆ ಕೋರ್ಟ್‌ ತಡೆ

ಕೊರೊನಾ ಸೋಂಕು ಹೆಚ್ಚು ಹರಡುವ ಕಚೇರಿಗಳು, ವಿದ್ಯಾಸಂಸ್ಥೆ, ಕಾಲೇಜುಗಳು ಹಾಗೂ ಅಪಾರ್ಟ್‌ಮೆಂಟ್‌ಗಳಿಗೆ ಅನ್ವಯವಾಗುವಂತೆ ಹೊಸ ನಿಯಮ ಜಾರಿ ಮಾಡಲಾಗಿದೆ. ವಸತಿ ಸಮುಚ್ಛಯ/ ಅಪಾರ್ಟ್ ಮೆಂಟ್‌ಗಳಿಗೆ ಪ್ರತ್ಯೇಕ ರೂಲ್ಸ್‌ ಇದ್ದರೆ ಶಾಲಾ-ಕಾಲೇಜು ಮತ್ತು ಕಛೇರಿಗಳಿಗೆ ಬೇರೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

ಪರಿಷ್ಕೃತ ಮಾರ್ಗಸೂಚಿಯಲ್ಲಿ ಏನಿದೆ?

ವಸತಿ ಸಮುಚ್ಛಯ/ಅಪಾರ್ಟ್ ಮೆಂಟ್‌ಗಳಲ್ಲಿ 5ಕ್ಕಿಂತ ಕಡಿಮೆ ಕೋವಿಡ್ ಪ್ರಕರಣಗಳು ವರದಿಯಾದಲ್ಲಿ ಸಣ್ಣ ಕ್ಲಸ್ಟರ್ ಎಂದು ಪರಿಗಣಿಸಬೇಕು. 15ಕ್ಕೂ ಹೆಚ್ಚು ಸೋಂಕಿನ ಪ್ರಕರಣಗಳು ಕಂಡು ಬಂದರೆ ಇಡೀ ಅಪಾರ್ಟ್‌ಮೆಂಟ್‌ನ ಎಲ್ಲರಿಗೂ ಕೋವಿಡ್ ಪರೀಕ್ಷೆ ಮಾಡಿಸಬೇಕು. ಸೋಂಕಿತ ವ್ಯಕ್ತಿಯ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಹೋಂ ಐಸೋಲೇಷನ್, ಸಿಸಿಸಿ(covid care center) ಆಸ್ಪತ್ರೆಗೆ ದಾಖಲಿಸಬೇಕು. ಜತೆಗೆ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಹೆಚ್ಚಿನ ಒತ್ತು ನೀಡಬೇಕು. ಪಾಸಿಟಿವ್ ಬಂದ ಪ್ರಕರಣಗಳ ಶೇಕಡಾ 25% ರಷ್ಟನ್ನು ಜಿನೋಮ್ ಸೀಕ್ವೆನ್ಸಿಂಗ್‌ ಟೆಸ್ಟ್‌ಗೆ ಕಳುಹಿಸಬೇಕು.

ಮನೆ ಕೆಲಸದವರಿಗೂ ಕಂಡಿಷನ್ಸ್‌

ಸೋಂಕಿತ ವ್ಯಕ್ತಿಯು ಹೋಂ ಐಸೋಲೇಷನ್‌ನಲ್ಲಿ ಇದ್ದಾಗ ಅಪಾರ್ಟ್‌ಮೆಂಟ್‌ಗಳಲ್ಲಿ ಮನೆ ಕೆಲಸ ಮಾಡಲು ಬರುವವರು ಕೋವಿಡ್‌ ರೂಲ್ಸ್‌ ಪಾಲಿಸಬೇಕು. ಮನೆ ಕೆಲಸದ ಸಹಾಯಕರು/ಮನೆ ಕೆಲಸದವರು 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು.ರೋಗ ಲಕ್ಷಣಗಳಿಂದ ಅಂದರೆ ಜ್ವರ, ಕೆಮ್ಮು, ನೆಗಡಿ, ಉಸಿರಾಟದ ತೊಂದರೆ ಇತ್ಯಾದಿಯಿಂದ ಮುಕ್ತರಾಗಿರಬೇಕು. N-95 ಮಾಸ್ಕ್‌ಅನ್ನು ಕಡ್ಡಾಯಾವಾಗಿ ಬಳಸಬೇಕು, ಜತೆಗೆ ಕೋವಿಡ್‌ ಲಸಿಕೆ ಪಡೆದಿರಬೇಕು

ಸೋಂಕು ಕಂಡು ಬಂದರೆ ಶಾಲೆ ಮುಚ್ಚುವಂತಿಲ್ಲ

ಶಾಲೆಗಳಲ್ಲಿ ಮಕ್ಕಳಿಗೆ ಸೋಂಕು ಕಂಡು ಬಂದರೆ ಇಡೀ ಶಾಲೆಯನ್ನೇ ಮುಚ್ಚುವ ಅಗತ್ಯವಿಲ್ಲವೆಂದು ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ. ಈ ಹಿಂದೆ ಶಾಲೆಯಲ್ಲಿ ಯಾವುದೇ ವಿದ್ಯಾರ್ಥಿಗೆ ಸೋಂಕು ಬಂದರೂ ಶಾಲೆಗೆ ಕೆಲವು ದಿನಗಳ ರಜೆ ನೀಡಿ ಬಾಗಿಲು ಮುಚ್ಚಬೇಕಿತ್ತು. ಆದರೆ ಈ ಬಾರಿ ಪರಿಷ್ಕೃತ ಆದೇಶದ ಪ್ರಕಾರ, ಕೋವಿಡ್-19ರ ಲಕ್ಷಣಗಳನ್ನು ಹೊಂದಿರುವವರು ಶಾಲೆಗೆ ಹಾಜರಾಗದಂತೆ ಸೂಚಿಸಬೇಕು. ಆ ವಿದ್ಯಾರ್ಥಿಯನ್ನು ರ‍್ಯಾಪಿಡ್‌ ಆಂಟಿಜೆನ್ ಪರೀಕ್ಷೆಗೆ ಒಳಪಡಿಸಬೇಕು. ಸೋಂಕು ದೃಢಪಟ್ಟರೆ ನಿಯಮದ ಪ್ರಕಾರ ಐಸೋಲೇಷನ್‌ನಲ್ಲಿ ಇರಿಸಬೇಕು. ರ‍್ಯಾಪಿಡ್‌ ಆಂಟಿಜೆನ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದರೆ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಶಿಫಾರಸ್ಸು ಮಾಡಬೇಕು.

ಶಾಲೆಯಲ್ಲಿ ಮಕ್ಕಳಿಗೆ ಪಾಸಿಟಿವ್ ಪ್ರಕರಣ ಕಂಡು ಬಂದರೆ ಕೊಠಡಿಯನ್ನ ಶೇ.1ರಷ್ಟು ಸೋಡಿಯಂ ಹೈಪೋಕ್ಲೋರೈಡ್‌ ದ್ರಾವಣದಿಂದ ಸ್ವಚ್ಚಗೊಳಿಸಬೇಕು. ಮರುದಿನದಿಂದ ಕೊಠಡಿಯನ್ನು ಪುನಃ ಬಳಕೆ ಮಾಡಬಹುದು. ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಹಾಗೂ ದೈಹಿಕ ಅಂತರ ಪಾಲಿಸಬೇಕು. ಕೈಗಳ ಸ್ವಚ್ಚತೆಗೆ ಹೆಚ್ಚು ಆದ್ಯತೆ ಕೊಟ್ಟು ಹ್ಯಾಂಡ್ ಸ್ಯಾನಿಟೈಸರ್‌ಗಳನ್ನು ಬಳಸುವಂತೆ ಪ್ರೇರೆಪಿಸಬೇಕು. ಜ್ವರ, ನೆಗಡಿ, ಕೆಮ್ಮು ಹಾಗೂ ಉಸಿರಾಟದ ತೊಂದರೆ ಇದ್ದವರು ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಲು ಶಿಫಾರಸ್ಸು ಮಾಡುವಂತೆ ತಿಳಿಸಲಾಗಿದೆ.

ಇದನ್ನೂ ಓದಿ | ದೇಶದಲ್ಲಿ ಕೋವಿಡ್‌ ಇಳಿಕೆ: ನಿನ್ನೆ 17,093, ಇಂದು 11,793, ಸಾವಿನ ಸಂಖ್ಯೆ 27

Exit mobile version