ಬೆಂಗಳೂರು: ಡಿಸೆಂಬರ್ 31ರಂದು ರಾತ್ರಿ ಹೊಸ ವರ್ಷಾಚರಣೆಗೆ (New Year Celebration) ಸಂಬಂಧಿಸಿ ಪಾರ್ಟಿ ಮಾಡುವುದಕ್ಕೆ ಪೊಲೀಸ್ ಇಲಾಖೆಯಿಂದ ಯಾವುದೇ ಅಭ್ಯಂತರವಿಲ್ಲ. ಕೋವಿಡ್‌ನ ಕಠಿಣ ನಿಯಮಗಳು (Covid guidelines) ಜಾರಿಯಲ್ಲಿಲ್ಲ. ಹಾಗಂತ, ನೀವು ಈ ಬಾರಿ ಕದ್ದು ಮುಚ್ಚಿ ಹೋಗಿ (Conditions to Party) ಪಾರ್ಟಿ ಮಾಡಿಕೊಂಡು ಬರುವಂತಿಲ್ಲ. ಯಾಕೆಂದರೆ, ಈ ಬಾರಿ ಪಾರ್ಟಿ ಮಾಡಬೇಕು ಅಂತಿದ್ದರೆ ನೀವು ಯಾರು? ಏನ್ಮಾಡ್ತಾ ಇದ್ದೀರಾ ಎಂಬೆಲ್ಲ ಮಾಹಿತಿಗಳನ್ನು ಬೇಡುವ ಕೆವೈಸಿ (Know your Customer-KYC) ಮಾಡಬೇಕಾಗುತ್ತದೆ.
ಹೌದು, ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ ಅವರು ನಗರದ ಎಲ್ಲಾ ರೆಸ್ಟೋರೆಂಟ್‌ಗಳು, ಕ್ಲಬ್‌ಗಳು ಮತ್ತು ಇತರ ಪಾರ್ಟಿ ಸ್ಥಳಗಳ ಮಾಲೀಕರಿಗೆ ಗ್ರಾಹಕರನ್ನು ತಿಳಿದುಕೊಳ್ಳಿ (ಕೆವೈಸಿ) ಮಾಹಿತಿಯನ್ನು ಸಂಗ್ರಹಿಸಲು ಸೂಚಿಸಿದ್ದಾರೆ.
ಹೊಸ ವರ್ಷಾಚರಣೆಯ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುವ ವೇಳೆ ಈ ವಿಷಯ ತಿಳಿಸಿದ ಅವರು, ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಹೊಸ ವರ್ಷದ ಸಂಭ್ರಮದಲ್ಲಿ ಭಾಗವಹಿಸಲು ಇತರ ರಾಜ್ಯಗಳಿಂದ ದೊಡ್ಡ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಹೀಗಾಗಿ ಗ್ರಾಹಕರ ಹಿನ್ನೆಲೆಯನ್ನು ಗುರುತಿಸಿ ಇಟ್ಟುಕೊಳ್ಳುವುದು ತುಂಬ ಅಗತ್ಯ ಎಂಬ ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಕೆವೈಸಿ ಪಡೆಯಲು ಪ್ರಮುಖ ಕಾರಣಗಳು
- ಬೆಂಗಳೂರು ಬ್ರಿಗೇಡ್ ರಸ್ತೆ, ಎಂಜಿ ರಸ್ತೆ, ಚರ್ಚ್ ಸ್ಟ್ರೀಟ್, ಕೋರಮಂಗಲ, ಇಂದಿರಾನಗರ ಮತ್ತು ಇತರ ಜನಪ್ರಿಯ ಸ್ಥಳಗಳಲ್ಲಿ ಹಲವಾರು ಹೊಸ ವರ್ಷದ ಪಾರ್ಟಿಗಳು ನಡೆಯಲಿದೆ.
- ಪಾರ್ಟಿಗಳ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಲ್ಲಿ ಕೆವೈಸಿ ಮಾಹಿತಿಯು ಪೊಲೀಸರು ಮತ್ತು ಸಂಸ್ಥೆಗಳಿಗೆ ಸಹಾಯಕವಾಗುತ್ತದೆ.
- ಬೆಂಗಳೂರು ಪೊಲೀಸರ ಈ ಕ್ರಮವು ಆಚರಣೆಯ ಸಮಯದಲ್ಲಿ ಯಾವುದೇ ಅನಾಹುತವನ್ನು ತಡೆಗಟ್ಟುವ ಗುರಿಯನ್ನು ಹೊಂದಿದೆ. ಅನಾಹುತಕಾತಿ ವ್ಯಕ್ತಿಗಳು ಮದ್ಯ ಸೇವಿಸುವ ಪಾರ್ಟಿಗಳಿಗೆ ಹಾಜರಾಗುವುದನ್ನು ತಡೆಯುತ್ತದೆ.
ಬೆಂಗಳೂರಿನಲ್ಲಿ ಜಾರಿಯಾಗಲಿರುವ ಪಾರ್ಟಿ ನಿಯಮಗಳು
- ನಗರದ ಎಲ್ಲಾ ಹೋಟೆಲ್‌ಗಳು, ಕ್ಲಬ್‌ಗಳು ಮತ್ತು ಪಬ್‌ಗಳು ಬರುವವರ ಹೆಸರುಗಳು, ವಯಸ್ಸು ಮತ್ತು ಫೋನ್ ಸಂಖ್ಯೆಗಳು ಸೇರಿದಂತೆ ಗ್ರಾಹಕರ ವಿವರಗಳ ವಿವರವಾದ ದಾಖಲೆಯನ್ನು ಸಂಗ್ರಹಿಸಲು ತಿಳಿಸಲಾಗಿದೆ.
- ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ನಗರ ಪೊಲೀಸರು ಎಲ್ಲಾ ಆತಿಥ್ಯ ಸಂಸ್ಥೆಗಳಿಗೆ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ನೀಡಿದ್ದಾರೆ.
- ಸಂದರ್ಶಕರ ಸಂಪರ್ಕ ಸಂಖ್ಯೆಗಳಂತಹ ವಿವರಗಳನ್ನು ಕೇಳಬೇಕು ಮತ್ತು ಮಿಸ್ಡ್ ಕಾಲ್ ಮೂಲಕ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು.
- ಇದರ ಜೊತೆಗೆ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಉತ್ತಮ ಗುಣಮಟ್ಟದ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಮತ್ತು ಬೌನ್ಸರ್ ಅಥವಾ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು.
ಇದನ್ನೂ ಓದಿ: New Year Mens Fashion: ಹೀಗಿರಲಿ ಹೊಸ ವರ್ಷ ಸೆಲೆಬ್ರೇಷನ್‌ನ ಮೆನ್ಸ್ ಫ್ಯಾಷನ್ ಲುಕ್
ಕ್ಲಬ್, ಪಬ್‌ಗಳು ರಾತ್ರಿ 1 ಗಂಟೆವರೆಗೆ ಮಾತ್ರ ಓಪನ್
- ಪೊಲೀಸ್ ಮಾರ್ಗಸೂಚಿಗಳ ಪ್ರಕಾರ, ಹೊಸ ವರ್ಷದ ಆಚರಣೆಗಾಗಿ ನಗರದ ಹೋಟೆಲ್‌ಗಳು, ಕ್ಲಬ್‌ಗಳು ಮತ್ತು ಪಬ್‌ಗಳಂತಹ ಪಾರ್ಟಿ ಸ್ಥಳಗಳು ಬೆಳಗಿನ ಜಾವ 1 ಗಂಟೆಯವರೆಗೆ ಕಾರ್ಯನಿರ್ವಹಿಸಬಹುದು.
- ಮದ್ಯದಂಗಡಿಗಳು ರಾತ್ರಿ 11 ಗಂಟೆಯವರೆಗೆ ತೆರೆದಿರಲು ಅನುಮತಿ ನೀಡಲಾಗಿದೆ.
- ಪಾರ್ಟಿ ಸ್ಥಳಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪ್ರಮುಖ ಜನಸಂದಣಿಯನ್ನು ಗಮನದಲ್ಲಿಟ್ಟುಕೊಂಡು, ಬೆಂಗಳೂರು ಪೊಲೀಸರು ಕುಡಿದು ವಾಹನ ಚಲಾಯಿಸುವವರ ಮೇಲೆ ತಪಾಸಣೆಯನ್ನು ತೀವ್ರಗೊಳಿಸಿದ್ದಾರೆ.
- ನಗರದ ಪ್ರಮುಖ ಪ್ರದೇಶಗಳಲ್ಲಿ ಕಟ್ಟುನಿಟ್ಟಾದ ಸಂಚಾರ ನಿರ್ಬಂಧಗಳನ್ನು ವಿಧಿಸಿದ್ದಾರೆ. ಇದಲ್ಲದೆ, ‘ಡ್ರಿಂಕ್ ಅಂಡ್ ಡ್ರೈವ್’ ವಿರುದ್ಧ ನಗರದಾದ್ಯಂತ ಅಭಿಯಾನವನ್ನು ಸಹ ಪ್ರಾರಂಭಿಸಲಾಗಿದೆ.