Site icon Vistara News

New Year Celebration : ಡಿ. 31ರ ರಾತ್ರಿ ರಿವಾಲ್ವರ್‌ ಹಿಡ್ಕೊಂಡೇ ತಿರುಗಿ; ಪೊಲೀಸರಿಗೆ ಆರ್ಡರ್‌

P

ಬೆಂಗಳೂರು: ಡಿಸೆಂಬರ್‌ 31ರ ರಾತ್ರಿ ಹೊಸ ವರ್ಷಾಚರಣೆಯ ಸಂಭ್ರಮ (New year Celebration) ಬೆಂಗಳೂರಿನಲ್ಲಿ ಮುಗಿಲು (Celebration in Bangalore) ಮುಟ್ಟಲಿದೆ. ಈ ಸಂದರ್ಭದಲ್ಲಿ ಬಿಗಿ ಬಂದೋಬಸ್ತ್‌ ಮತ್ತು ಕಟ್ಟೆಚ್ಚರ ವಹಿಸಲು ಎಲ್ಲಾ ಪೊಲೀಸ್‌ ಸಿಬ್ಬಂದಿಗೆ (Police Staff) ಸೂಚನೆ ನೀಡಲಾಗಿದೆ. ಅದರಲ್ಲೂ ಮುಖ್ಯವಾಗಿ ನಿಗದಿತ ಹಿರಿಯ ಅಧಿಕಾರಿಗಳು ಅಂದು ಸರ್ವಿಸ್‌ ರಿವಾಲ್ವರ್‌ (Service Revolver) ಹಿಡಿದುಕೊಂಡೇ ಇರಬೇಕು, ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧರಾಗಿಗಬೇಕು ಎಂದು ಸೂಚಿಸಲಾಗಿದೆ.

ಬೆಂಗಳೂರು ನಗರ ಪೊಲೀಸ್‌ (Bangalore City Police) ಇಲಾಖೆ ತಮ್ಮ ಸಿಬ್ಬಂದಿಯ ರಕ್ಷಣಾ ವ್ಯವಸ್ಥೆ ಹೇಗಿರಬೇಕು ಎಂಬ ಬಗ್ಗೆ 20 ಅಂಶಗಳ ಸೂಚನೆಯನ್ನು ನೀಡಿದೆ. ಅದರಲ್ಲಿ ವರ್ಷಾಚರಣೆ ನಡೆಯುವ ಮಾಲ್‌ಗಳು, ರಸ್ತೆಗಳಲ್ಲಿ ಹೇಗೆ ವ್ಯವಸ್ಥೆ ಇರಬೇಕು, ಹೆಣ್ಮಕ್ಕಳ ಮೇಲೆ ಹೇಗೆ ನಿಗಾ ಇಡಬೇಕು ಎಂಬ ಬಗ್ಗೆ ಸೂಚನೆಗಳನ್ನು ನೀಡಲಾಗಿದೆ.

ದ್ವಿಚಕ್ರ ವಾಹನಗಳಲ್ಲೇ ಮೊಬೈಲ್‌ ಪೆಟ್ರೋಲಿಂಗ್‌

1. ಉಪ ಪೊಲೀಸ್ ಆಯುಕ್ತರುಗಳು ತಮ್ಮ ಅಧೀನದ ಎಲ್ಲಾ ಪೊಲೀಸ್ ಠಾಣೆಗಳಿಗೆ ಇಲಾಖಾ ವತಿಯಿಂದ ಹಂಚಿಕೆಯಾಗಿರುವ ಎಲ್ಲಾ ದ್ವಿ-ಚಕ್ರ ವಾಹನಗಳನ್ನು ಮೊಬೈಲ್ ಪೆಟ್ರೋಲಿಂಗ್ ವಾಹನಗಳನ್ನಾಗಿ ಉಪಯೋಗಿಸಿ ಸೂಕ್ತ ಗಸ್ತು ನಿರ್ವಹಿಸುವ ಬಗ್ಗೆ ಕ್ರಮ ಕೈಗೊಳ್ಳುವುದು.

2.ಉಪ ಪೊಲೀಸ್ ಆಯುಕ್ತರುಗಳು ಹೊಸ ವರ್ಷಾಚರಣೆ ಬಂದೋಬಸ್ತ್ ಯೋಜನೆಯಲ್ಲಿ ಸೆಕ್ಟರ್‌ವೈಸ್ ಬಂದೋಬಸ್ತ್ ಮತ್ತು ಸೆಕ್ಟರ್ ಮೊಬೈಲ್‌ಗಳನ್ನು ಕರ್ತವ್ಯಕ್ಕೆ ನಿಯೋಜಿಸಿ, ಅವುಗಳಿಗೆ ನಿಗದಿತ ಸಮಯ ಹಾಗೂ ನಿಗದಿತ ರೂಟ್ ಅನ್ನು ಕೊಟ್ಟು, ಸೆಕ್ಟರ್ ಪೆಟ್ರೋಲಿಂಗ್ ಅನ್ನು ವ್ಯವಸ್ಥಿತವಾಗಿ ಏರ್ಪಡಿಸಲು ಸೂಚಿಸಲಾಗಿದೆ.

3. ಹೊಸ ವರ್ಷಾಚರಣೆಯನ್ನು ವಿರೋಧಿಸುವ ಸಂಘ ಸಂಸ್ಥೆಗಳ ಬಗ್ಗೆ ಮುಂಗಡವಾಗಿ ಮಾಹಿತಿ ಸಂಗ್ರಹಿಸಿ ಅಂತಹ ಸಂಘ ಸಂಸ್ಥೆಗಳ ಚಲನವಲನಗಳ ಬಗ್ಗೆ ಗುಪ್ತ ಮಾಹಿತಿ ಸಂಗ್ರಹಿಸಿ, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು.

4.ಉಪ ಪೊಲೀಸ್ ಆಯುಕ್ತರುಗಳು ಎಲ್ಲಾ ಮಾಲ್‌ಗಳ ವ್ಯವಸ್ಥಾಪಕರಿಗೆ ಲಿಖಿತವಾದ ಸೂಚನೆ ನೀಡಿ, ಅವರುಗಳು ಮಾಲ್‌ಗಳಿಗೆ ಒಳಬರುವ ವ್ಯಕ್ತಿಗಳ ವೈಯಕ್ತಿಕ ಶೋಧನೆ ಹಾಗೂ ಅವರುಗಳ ಬ್ಯಾಗೇಜುಗಳ ಪರಿಶೀಲನೆಯನ್ನು ಹೆಚ್.ಹೆಚ್.ಎಂಡಿ / ಡಿ.ಎಫ್.ಎಂ.ಡಿ, ಇವುಗಳನ್ನು ಅಳವಡಿಸಿ ಪರಿಶೀಲನೆ ಮಾಡುವ ಅಗತ್ಯತೆ ಬಗ್ಗೆ ಮತ್ತೊಮ್ಮೆ ತಿಳಿಸುವುದು.

5. ಮಾಲ್‌ಗಳಲ್ಲಿ ಅಳವಡಿಸಿರುವ ಸಿ.ಸಿ.ಕ್ಯಾಮೆರಾಗಳು ಸುಸ್ಥಿತಿಯಲ್ಲಿರುವ ಬಗ್ಗೆ, ಮಾಲ್‌ಗಳಿಗೆ ಆಗಮಿಸುವ ವಾಹನಗಳನ್ನೂ ಸಹ ಸೂಕ್ತವಾಗಿ ಪರಿಶೀಲಿಸಿದ ನಂತರ ಒಳಪ್ರವೇಶಿಸಲು ಅನುಮತಿ ನೀಡುವ ಬಗ್ಗೆ ಸಂಬಂಧಪಟ್ಟ ಮಾಲ್‌ಗಳ ಮಾಲೀಕರುಗಳಿಗೆ ಸೂಕ್ತ ತಿಳುವಳಿಕೆ ನೀಡುವುದು.

ಬಂದೋಬಸ್ತ್‌ ಅಧಿಕಾರಿಗಳಿಗೆ ರಿವಾಲ್ವರ್‌ ಕಡ್ಡಾಯ

6. ಎಲ್ಲಾ ಪೊಲೀಸ್‌ ಇನ್ಸ್‌ಪೆಕ್ಟರ್‌ಗಳು ತಮ್ಮ ಠಾಣಾ ವ್ಯಾಪ್ತಿಯಲ್ಲಿ ದಿನಾಂಕ: 31-12-2023 ರಂದು ರಾತ್ರಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿಕೊಂಡು ಮೇಲುಸ್ತುವಾರಿ ವಹಿಸುವುದು.

7. ಬಂದೋಬಸ್ತ್‌ಗೆ ನೇಮಕವಾದ ಸಿಬ್ಬಂದಿಗಳು ಮೇಲಾಧಿಕಾರಿಗಳ ಆದೇಶವಿಲ್ಲದೆ ಸ್ಥಳವನ್ನು ಬಿಡಬಾರದು.

8. ಠಾಣಾ ವ್ಯಾಪ್ತಿಯಲ್ಲಿ ಪ್ರಮುಖ ಸ್ಥಳಗಳಲ್ಲಿ ವಾಹನ ತಪಾಸಣಾ ಪಾಯಿಂಟ್ / ಪಿಕೆಟಿಂಗ್ ಪಾಯಿಂಟ್ ಕರ್ತವ್ಯಕ್ಕೆ ಸಿಬ್ಬಂದಿಗಳನ್ನು ನಿಯೋಜಿಸುವುದು.

9. ಬಂದೋಬಸ್ತ್‌ಗೆ ನೇಮಕ ಮಾಡಿದ ಎಲ್ಲಾ ಅಧಿಕಾರಿಗಳು ಸರ್ವೀಸ್ ರಿವಾಲ್ವರ್ ಹೊಂದಿರತಕ್ಕದ್ದು ಹಾಗೂ ಸಿಬ್ಬಂದಿಗಳು ಹೆಡ್ ಲೈಟ್ ಮತ್ತು ಲಾಠಿಗಳನ್ನು ಹೊಂದಿರತಕ್ಕದ್ದು.

10. ಎಲ್ಲಾ ಸಿಬ್ಬಂದಿಗಳು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಜರ್ಸಿ ಹಾಗೂ ರೈನ್ ಕೋಟ್‌ ಹೊಂದಿರತಕ್ಕದ್ದು.

ಹೆಣ್ಮಕ್ಕಳನ್ನು ಚುಡಾಯಿಸುವವರ ಮೇಲೆ ಕಣ್ಣಿಡಿ

11. ರಾತ್ರಿ ಸಮಯದಲ್ಲಿ ಸಾರ್ವಜನಿಕರು ಮದ್ಯಪಾನ ಸೇವಿಸಿ ಬರುವ ಸಂಭವವಿರುವುದರಿಂದ ಅಧಿಕಾರಿ ಮತ್ತು ಸಿಬ್ಬಂದಿಗಳು ಸೌಜನ್ಯದಿಂದ ವರ್ತಿಸಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಕಟ್ಟೆಚ್ಚರ ವಹಿಸುವುದು.

12. ಪ್ರಮುಖವಾಗಿ ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್ ರಸ್ತೆ ಹಾಗೂ ಹೆಚ್ಚಿನ ಜನಸಂದಣಿ ಇರುವ ಪ್ರದೇಶಗಳಲ್ಲಿ ಕಿಸೆ ಕಳ್ಳತನ, ಸರ ಅಪಹರಣ ಇತ್ಯಾದಿಗಳು ನಡೆಯುವ ಸಾದ್ಯತೆಗಳಿರುವುದರಿಂದ ಅಧಿಕಾರಿ ಮತ್ತು ಸಿಬ್ಬಂದಿಗಳು, ಸಂಶಯಾಸ್ಪದ ವ್ಯಕ್ತಿಗಳ ಮೇಲೆ ತೀವ್ರ ನಿಗಾವಹಿಸುವುದು ಮತ್ತು ಸಾರ್ವಜನಿಕರ ಜೊತೆ ಸೌಜನ್ಯದಿಂದ ವರ್ತಿಸುವುದು.

13. ನೂತನ ವರ್ಷಾಚರಣೆ ಸಂದರ್ಭದಲ್ಲಿ ಹೆಣ್ಣು ಮಕ್ಕಳನ್ನು ಚುಡಾಯಿಸುವವರ ವಿರುದ್ಧ ಕೂಡಲೇ ಗಮನಹರಿಸಿ ಕಾನೂನಿನಡಿಯಲ್ಲಿ ಬಂಧನಕ್ಕೆ ಒಳಗಾಗಿಸುವುದು.

14. ಕುಡಿದು ರಸ್ತೆಗಳ ಮೇಲೆ ಬಾಟಲಿಗಳನ್ನು ಹೊಡೆದು / ಎಸೆದು ದಾಂದಲೆ ಮಾಡುವವರನ್ನು ಕೂಡಲೇ ವಶಕ್ಕೆ ಪಡೆದು ಅಗತ್ಯ ಕಾನೂನು ಕ್ರಮ ಜರುಗಿಸುವುದು.

15. ಮದ್ಯ ಮಾರಾಟ ಮಾಡುವ ಎಲ್ಲಾ ಸ್ಥಳಗಳ ಮಾಲೀಕರಿಗೆ ಕಲಂ.21 ಕರ್ನಾಟಕ ಅಬಕಾರಿ ಕಾಯ್ದೆ ಅಡಿಯಲ್ಲಿ ನೋಟಿಸ್ ಅನ್ನು ಜಾರಿ ಮಾಡುವುದು. ಸದರಿ ಅಂಗಡಿಗಳಲ್ಲಿ / ಅದರ ಸಮೀಪದಲ್ಲಿ ಆಗುವ ಗಲಾಟೆ, ದೊಂಬಿ, ಮಹಿಳೆಯರನ್ನು ಚುಡಾಯಿಸುವುದು, ಬಾಟಲಿಗಳನ್ನು ಎಸೆಯುವುದು ಇತ್ಯಾದಿಗಳು ನಡೆದರೆ ಅವರನ್ನೇ ಹೊಣೆಗಾರರೆಂದು ಪರಿಗಣಿಸಿ ಸದರಿ ಸ್ಥಳಗಳನ್ನು ತಾತ್ಕಾಲಿಕವಾಗಿ ಮುಚ್ಚಿಸಲಾಗುವುದೆಂದು ತಿಳಿಸತಕ್ಕದ್ದು.

ಇದನ್ನು ಓದಿ: New Year Celebration : ನ್ಯೂ ಇಯರ್‌ ಪಾರ್ಟಿಗೆ ಹೋಗ್ತೀರಾ? ನಿಮ್ಮ KYC ಕೊಡೋದು ಕಡ್ಡಾಯ

ಎಲ್ಲಾ ಬೀದಿ ದೀಪಗಳು ಉರಿಯುತ್ತಿರಬೇಕು, ಲೈಟ್‌ ಆಫ್‌ ಆಗಬಾರದು

16. ಜನರು ಸೇರುವ ರಸ್ತೆಗಳನ್ನು ಮತ್ತು ಪ್ರದೇಶಗಳನ್ನು ಗುರುತಿಸಿ ರಾತ್ರಿ ವೇಳೆಯಲ್ಲಿ ರೆಕಾರ್ಡ್ ಆಗುವಂತಹ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸುವುದು.

17. ಎಲ್ಲಾ ರಸ್ತೆಗಳಲ್ಲಿ ವಿದ್ಯುತ್ ದೀಪಗಳು ಕೆಲಸ ಮಾಡುವಂತೆ ಖಚಿತಪಡಿಸಿಕೊಳ್ಳುವುದು ಮತ್ತು ಸಂಬಂಧಪಟ್ಟ ಇಲಾಖೆ/ಅಧಿಕಾರಿಗಳನ್ನು ಸಂಪರ್ಕಿಸಿ ಅಗತ್ಯ ಕ್ರಮ ಕೈಗೊಳ್ಳುವುದು.

18. ಜನವರಿ 1ರ ಬೆಳಿಗ್ಗೆ 6-00 ಗಂಟೆವರೆಗೆ ಎಲ್ಲಿಯೂ ವಿದ್ಯುತ್ ಕಡಿತವಾಗದಂತೆ ಬೆಸ್ಕಾಂ ಅಧಿಕಾರಿಗಳೊಂದಿಗೆ ಸಮಾಲೋಚಿಸುವುದು.

19. ಜನ ಹೆಚ್ಚಿಗೆ ಸೇರುವ ರಸ್ತೆಗಳಾದ ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಎಂ.ಜಿ.ರಸ್ತೆ ಮತ್ತು ಇತರೆ ರಸ್ತೆಗಳಲ್ಲಿ ಸ್ಥಳಾವಕಾಶಕ್ಕನುಗುಣವಾಗಿ ಜನರ ಆಗಮನ ಮತ್ತು ನಿರ್ಗಮನವನ್ನು ನಿಯಂತ್ರಿಸುವುದು.

20. ಅಬಕಾರಿ ಇಲಾಖೆಯ ಅಧಿಕಾರಿಗಳೊಂದಿಗೆ ಸಂಪರ್ಕವನ್ನಿಟ್ಟುಕೊಂಡು ಪಬ್‌ಗಳು, ಬಾರ್ & ರೆಸ್ಟೋರೆಂಟ್‌ಗಳು, ವೈನ್‌ಷಾಪ್‌ ಗಳು ಇತ್ಯಾದಿ ಸ್ಥಳಗಳಲ್ಲಿ ಅನಧಿಕೃತವಾದ ಮಾರಾಟದ ಬಗ್ಗೆ ಜಂಟಿ ತಪಾಸಣೆಯನ್ನು ಕೈಗೊಳ್ಳುವುದು.

Exit mobile version