ಬೆಂಗಳೂರು: ಬೆಂಗಳೂರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಅಕ್ರಮ ಬಾಂಗ್ಲಾ ವಲಸಿಗರು (Illegal Bangla Immigrants) ನೆಲೆಯೂರಿದ್ದಾರೆ, ಅವರಿಗೆ ಇಲ್ಲಿನ ಕೆಲವರು ಬೆಂಬಲಿಸುತ್ತಿದ್ದಾರೆ, ಅವರಿಗೆ ಬೇಕಾದ ದಾಖಲೆಗಳನ್ನು ಒದಗಿಸಲು ಸಹಾಯ ಮಾಡುತ್ತಿದ್ದಾರೆ ಎಂಬ ಆರೋಪ ಇಂದು ನಿನ್ನೆಯದಲ್ಲ. ಮೂರು ವರ್ಷದ ಹಿಂದೆ ನೂರಾರು ಅಕ್ರಮ ಬಾಂಗ್ಲಾ ವಲಸಿಗರನ್ನು ಬಂಧಿಸಿ ಗಡಿಗೆ ಹೋಗಿ ಬಿಡಲಾಗಿತ್ತು. ಹಾಗಂತ ಈ ಸಮಸ್ಯೆಗೆ ಪರಿಹಾರವೇನೂ ಸಿಕ್ಕಿಲ್ಲ. ಇದೀಗ ಮಂಗಳವಾರ ಬೆಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಮೇಲೆ ಎನ್ಐಎ ದಾಳಿ (NIA Raid) ನಡೆದಿದ್ದು, ಎಂಟು ಮಂದಿಯನ್ನು (Eight immigrants detained) ವಶಕ್ಕೆ ಪಡೆಯಲಾಗಿದೆ.
ಬೆಂಗಳೂರು ನಗರದ 15ಕ್ಕೂ ಹೆಚ್ಚು ಕಡೆಗಳಲ್ಲ ರಾಷ್ಟ್ರೀಯ ತನಿಖಾ ದಳ ಮಂಗಳವಾರ ರಾತ್ರಿ ದಾಳಿ ಮಾಡಿದೆ. ಎಂಟು ಮಂದಿ ಬಾಂಗ್ಲಾ ವಲಸಿಗರನ್ನು ವಶಕ್ಕೆ ಪಡೆದು ಎನ್ಐಎ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಅಕ್ರಮ ಬಾಂಗ್ಲಾ ವಲಸಿಗರು ಮಾನವ ಕಳ್ಳಸಾಗಾಣಿಕೆ ಮತ್ತು ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಸಂಬಂಧ NIA ವಿಶೇಷ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಆಧಾರದ ಮೇಲೆ 15 ತಂಡಗಳಿಂದ ಏಕಕಾಲಕ್ಕೆ ದಾಳಿ ನಡೆದಿದೆ. ಬೆಂಗಳೂರಿನ ಸೋಲದೇವನಹಳ್ಳಿ, ಕೆಆರ್ ಪುರಂ, ಬೆಳ್ಳಂದೂರು ಸೇರಿದಂತೆ 15ಕ್ಕೂ ಅಧಿಕ ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಬಾಂಗ್ಲಾ ದೇಶದಿಂದ ನೂರಾರು ಮಂದಿಯನ್ನು ಭಾರತಕ್ಕೆ ಅಕ್ರಮವಾಗಿ ಕರೆ ತರುವುದು, ಇಲ್ಲಿ ಅವರನ್ನು ಉಗ್ರಗಾಮಿ ಚಟುವಟಿಕೆಗಳಿಗೆ ಬಳಸುವುದು ಇವರ ಮೇಲಿನ ಪ್ರಧಾನ ಆರೋಪವಾಗಿದೆ. ಉದ್ಯೋಗದ ಆಮಿಷ ಒಡ್ಡಿ ಅವರನ್ನು ಇಲ್ಲಿಗೆ ಕರೆತಂದು ಬಳಿಕ ಅವರಿಗೆ ಉಗ್ರ ತರಬೇತಿ ನೀಡಿ ದುಷ್ಕೃತ್ಯಗಳಿಗೆ ಬಳಸುವ ವಿದ್ಯಮಾನಗಳು ನಡೆಯುತ್ತಿರುವ ಬಗ್ಗೆ ದೂರುಗಳು ದಾಖಲಾಗಿದ್ದವು.
ಬೆಂಗಳೂರಿನ ನಾನಾ ಭಾಗಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಇರುವ ಬಗ್ಗೆ ಕಾಲ ಕಾಲಕ್ಕೆ ವರದಿಗಳು ಬರುತ್ತಲೇ ಇವೆ. ಆದರೆ, ರಾಜಕಾರಣಿಗಳು ಕೂಡಾ ಇವರನ್ನು ಮತ ಬ್ಯಾಂಕ್ ಆಗಿ ಬಳಸುತ್ತಿರುವುದರಿಂದ ಅದರ ಬಗ್ಗೆ ಯಾರೂ ಹೆಚ್ಚಿನ ಗಮನ ನೀಡುತ್ತಿಲ್ಲ. ಅವರಲ್ಲಿ ಕೆಲವರು ಅಪಾಯಕಾರಿ ದುಷ್ಕೃತ್ಯಗಳಲ್ಲಿ ಭಾಗಿಯಾಗುತ್ತಿರುವ ಮಾಹಿತಿ ಇದೆ. ಕೆಲವರು ಕಳ್ಳತನ, ದರೋಡೆ ಕೃತ್ಯಗಳಲ್ಲಿ ಶಾಮೀಲಾದರೆ ಇನ್ನು ಕೆಲವರು ಕೊಲೆ, ಉಗ್ರ ಕೃತ್ಯಗಳಲ್ಲೂ ಭಾಗಿಯಾಗುತ್ತಿದ್ದಾರೆ.
ರಾಮನಗರ ಮತ್ತಿತರ ಪ್ರದೇಶಗಳಲ್ಲಿ ಅವರು ತಮ್ಮದೇ ಆದ ಕಾಲೊನಿಗಳನ್ನು ಸೃಷ್ಟಿಸಿಕೊಂಡು ರಕ್ಷಣೆ ಪಡೆಯುತ್ತಿದ್ದಾರೆ ಎಂಬ ಬಗ್ಗೆ ಗಂಭೀರವಾದ ಆರೋಪಗಳು ಕೇಳಿಬಂದಿದ್ದವು. ಆದರೆ, ಎಲ್ಲವೂ ಒಂದು ಹಂತದಲ್ಲಿ ದೊಡ್ಡ ಸುದ್ದಿಯಾಗಿ ಬಳಿಕ ತಣ್ಣಗಾಗುವುದರಿಂದ ಅವರು ಮತ್ತೆ ಮತ್ತೆ ಚಿಗುರುತ್ತಿದ್ದಾರೆ.