ಬೆಂಗಳೂರು: ಅಸಜವಾಗಿ ಬೆಳೆದಿದ್ದ ಬೆನ್ನುಮೂಳೆಯನ್ನು ಯಶಸ್ವಿಯಾಗಿ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ನೈಜೀರಿಯಾ ಮೂಲದ 14 ವರ್ಷದ ಬಾಲಕಿಗೆ ಫೋರ್ಟಿಸ್ ಆಸ್ಪತ್ರೆ (fortis Hospital) ವೈದ್ಯರು ಮರುಜೀವನ ನೀಡಿದ್ದಾರೆ. ಫೋರ್ಟಿಸ್ ಆಸ್ಪತ್ರೆಯ ನರಶಸ್ತ್ರಚಿಕಿತ್ಸಾ ವಿಭಾಗದ ನಿರ್ದೇಶಕ ಡಾ.ರಾಜಕುಮಾರ್ ದೇಶಪಾಂಡೆ ನೇತೃತ್ವದ ತಂಡವು ಈ ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಡಾ.ರಾಜಕುಮಾರ್, ನೈಜಿರಿಯಾ ಮೂಲದ 14ರ ಸಾರಾ (ಹೆಸರು ಬದಲಿಸಲಾಗಿದೆ) ಎಂಬ ಬಾಲಕಿಗೆ 6 ತಿಂಗಳ ಹಿಂದೆ ಬೆನ್ನಿನ ನೋವು ಕಾಣಿಸಿಕೊಂಡಿತ್ತು. ಅಷ್ಟೇ ಅಲ್ಲದೆ, ಬೆನ್ನಿನ ಬಲಭಾಗದಲ್ಲಿ ಗಡ್ಡೆ ಬೆಳೆದು ಇದರಿಂದ ಬಲಭಾಗದ ಭುಜ ಎತ್ತರಕ್ಕೆ ಹೋಗಿತ್ತು. ಜತೆಗೆ ಬೆನ್ನಿನ ಮೂಳೆಯು ಡೊಂಕಾಗಿರುವುದು ಕಂಡು ಬಂದಿತ್ತು.
ಸಂಪೂರ್ಣ ಎಂಆರ್‌ಐ (MRI) ಸ್ಕ್ಯಾನ್ ಮಾಡಿಸಿದ ಬಳಿಕ ಬಾಲಕಿಯ ಬೆನ್ನುಮೂಳೆಯ ವಕ್ರತೆಯು D4 (ಥೊರಾಸಿಕ್ ಬೆನ್ನುಮೂಳೆ) ಯಿಂದ L1 (ಸೊಂಟದ ಬೆನ್ನುಮೂಳೆ) ವರೆಗೆ ಮಧ್ಯಮ ಸ್ಕೋಲಿಯೋಸಿಸ್ ಅನ್ನು ಅಂದರೆ, ಬೆನ್ನಿನ ಮೂಳೆಯು ಸುಮಾರು 60 ಡಿಗ್ರಿಗೆ ಸರಿದಿತ್ತು ಎಂದು ವಿವರಿಸಿದರು.
ಈ ರೀತಿಯ ಪ್ರಕರಣಗಳು ಅತಿ ಅಪರೂಪವಾಗಿರುತ್ತದೆ. ಯಾವುದೇ ಕುಟುಂಬದ ಇತಿಹಾಸವಿಲ್ಲದೆಯೂ, ಹುಟ್ಟಿನಿಂದಲೂ ಯಾವುದೇ ಸಮಸ್ಯೆ ಇರಲಿಲ್ಲ. ನಂತರದಲ್ಲಿ ಆಕೆಯ ಬೆನ್ನು ಮೂಳೆಯು ಡೊಂಕಾಗಿತ್ತು. ಇದಕ್ಕೆ ಕಾರಣ ಆಕೆಯ ಸೊಂಟದ ಬಳಿ, ಬೆನ್ನಿನ ಮೂಳೆಯ ಸಮೀಪದಲ್ಲಿ ಬೆಳೆದಿದ್ದ ಗಡ್ಡೆಯಾಗಿತ್ತು.
ಈ ಗಡ್ಡೆಯಿಂದ ಬೆನ್ನಿನ ಮೂಳೆಯು ಸಹ ಡೊಂಕಾಗಿದ್ದಲ್ಲದೆ, ಆ ಬಾಲಕಿಯ ಬಲ ಭುಜವು ಸಹ ಎತ್ತರಕ್ಕೆ ಹೋಗುತ್ತಿತ್ತು. ಕೂಡಲೇ ಆಕೆಗೆ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇರುವುದನ್ನು ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಈ ನಡುವೆ ಬಾಲಕಿಯು ಕೇವಲ 14 ವರ್ಷದವಾದ್ದರಿಂದ ಆಕೆಯ ಋತುಚಕ್ರ ಆರಂಭದ ಸಮಯವಾಗಿತ್ತು. ಹೀಗಾಗಿ ಸ್ತ್ರೀರೋಗ ತಜ್ಞರು ಹಾಗೂ ಮಕ್ಕಳ ತಜ್ಞರ ಸಹಾಯದಿಂದ ಆಕೆಯ ಋತುಚಕ್ರವನ್ನು ಮುಂದೂಡಿ ನಂತರ ಶಸ್ತ್ರಚಿಕಿತ್ಸೆ ನಡೆಸಲಾಯಿತು.
ಬೆನ್ನುಮೂಳೆಯಲ್ಲಿ ಸಂಕೀರ್ಣ ಶಸ್ತ್ರಚಿಕಿತ್ಸೆಗಾಗಿ ಆ ಪ್ರದೇಶದ 3D ಚಿತ್ರಗಳನ್ನು ಒದಗಿಸುವ O-ಆರ್ಮ್ ಎಂಬ ಇಂಟ್ರಾಆಪರೇಟಿವ್ ಇಮೇಜಿಂಗ್ ಸಿಸ್ಟಮ್ ಅನ್ನು ಬಳಸಿ, ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈ ಶಸ್ತ್ರಚಿಕಿತ್ಸೆ ಸುಮಾರು 8 ಗಂಟೆಗಳ ಕಾಲ ನಡೆದಿತ್ತು. ಸದ್ಯ ಬಾಲಕಿಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಗುಣಮುಖವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಬೆಂಗಳೂರಿನ ಫೋರ್ಟಿಸ್ ಹಾಸ್ಪಿಟಲ್ಸ್‌ನ ಬಿಸಿನೆಸ್ ಹೆಡ್ ಅಕ್ಷಯ್ ಒಲೆಟಿ ಮಾತನಾಡಿ, ಸುಧಾರಿತ ವೈದ್ಯಕೀಯ ತಂತ್ರಜ್ಞಾನಗಳನ್ನು ಬಳಸಿಕೊಂಡು ಈ ಸಂಕೀರ್ಣ ಪ್ರಕರಣಕ್ಕೆ ಚಿಕಿತ್ಸೆ ನೀಡಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ