ಬೆಂಗಳೂರು: ರಾಜ್ಯ ಬಿಜೆಪಿ ಪ್ರಭಾರಿ ಅರುಣ್ ಸಿಂಗ್ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬದಲಾವಣೆ ಕುರಿತು ಸ್ಪಷ್ಟನೆ ನೀಡಿರುವ ಬಿಜೆಪಿ (BJP Karnataka), ಸಂಘಟನಾತ್ಮಕವಾಗಿ ಮುಂದಿನ ವ್ಯವಸ್ಥೆ ಆಗುವವರೆಗೂ ಮುಂದುವರಿಯುತ್ತಾರೆ ಎಂದು ಸ್ಪಷ್ಟಪಡಿಸಿದೆ.
ಈ ಕುರಿತು ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಮುಖ್ಯ ವಕ್ತಾರ ಎಂ. ಜಿ. ಮಹೇಶ್, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಮುಂದಿನ ಲೋಕಸಭೆ ಚುನಾವಣೆವರೆಗೆ ಮುಂದುವರಿಸಲು ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಘೋಷಣೆ ಮಾಡಲಾಯಿತು.
ಇದೇ ವೇಳೆ, ಕರ್ನಾಟಕದ ಪ್ರಭಾರಿ ಅರುಣ್ ಸಿಂಗ್ ಹಾಗೂ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಬಗ್ಗೆ ಅನೇಕ ಸುದ್ದಿಗಳು ಹರಿದಾಡುತ್ತಿವೆ. ಇವು ಸತ್ಯಕ್ಕೆ ದೂರವಾದವು.
ಮುಂದಿನ ಸಂಘಟನಾತ್ಮಕ ವ್ಯವಸ್ಥೆ ಆಗುವವರೆಗೂ ಅರುಣ್ ಸಿಂಗ್ ಅವರು ಕರ್ನಾಟಕದ ಪ್ರಭಾರಿ ಆಗುವವರೆಗೂ ಮುಂದುವರಿಯುತ್ತಾರೆ. ಅದೇ ರೀತಿ ಕರ್ನಾಟಕದ ಎಲ್ಲ ಮಂಡಲಗಳಿಗೂ ಐದು ಬಾರಿ ಪ್ರವಾಸ ಮಾಡಿ ಯಶಸ್ವಿ ಸಂಘಟನಾತ್ಮಕ ಕೆಲಸ ಮಾಡುತ್ತಿರುವ ನಳಿನ್ ಕುಮಾರ್ ಕಟೀಲ್ ಅವರೂ ಮುಂದುವರಿಯುತ್ತಾರೆ.
ಕರ್ನಾಟಕದ ಬೂತ್ ವಿಜಯ್ ಅಭಿಯಾನವು ದೇಶದಲ್ಲೆ ಅತಿ ದೊಡ್ಡ ಸಾಧನೆಯಾಗಿದೆ. 57 ಸಾವಿರ ಬೂತ್‌ಗಳಲ್ಲಿ 47 ಸಾವಿರ ಬೂತ್ ತಲುಪಿದ್ದೇವೆ. ಈಗಾಗಲೆ 36 ಲಕ್ಷ ಬಿಜೆಪಿ ಧ್ವಜಗಳನ್ನು ಹಾರಿಸಲಾಗಿದೆ. ಪೇಜ್ ಪ್ರಮುಖರನ್ನು ಈಗಾಗಲೆ ನೇಮಕ ಮಾಡಲಾಗಿದೆ. ಎರಡೂ ಸರ್ಕಾರಗಳ ಸಾಧನೆ ಹಾಗೂ ಸರ್ಕಾರದ ಸವಲತ್ತುಗಳನ್ನು ನೀಡುವ ಕೆಲಸವನ್ನು ಕಟೀಲ್ ಅವರ ಅಧ್ಯಕ್ಷತೆಯಲ್ಲಿ ಮಾಡಲಾಗುತ್ತಿದೆ. ಸಂಘಟನೆಯಲ್ಲಿ ಬದಲಾವಣೆ ಕುರಿತ ಸುದ್ದಿಗಳು ಊಹಾಪೋಹ ಎಂದರು.
ಇದನ್ನೂ ಓದಿ | ವಿಸ್ತಾರ ವಿಶ್ಲೇಷಣೆ | ʼಕಥನʼವೇ ಇಲ್ಲದೆ ಕತ್ತಲಲ್ಲಿ ಕತ್ತಿ ಬೀಸುತ್ತಿರುವ ಬಿಜೆಪಿ; ಫೆ. 17ಕ್ಕಾದರೂ ಸಿಗಲಿದೆಯೇ ಸೂತ್ರ?