ಬೆಂಗಳೂರು: ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೆ ಆಗ್ರಹಿಸಿ ಸರ್ಕಾರಿ ನೌಕರರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ಕಾಂಗ್ರೆಸ್ ಬೆಂಬಲ ಸೂಚಿಸಿದೆ.
ಹೋರಾಟದ ಸ್ಥಳಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತ್ಯೇಕವಾಗಿ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ನಾವು ಆತ್ಮಸಾಕ್ಷಿಗೆ ಅನುಗುಣವಾಗಿ ನಡೆಯಬೇಕು. ಇಂದಿನ ಹೋರಾಟದ ಸಂದರ್ಭದಲ್ಲಿ ಒಪ್ಪಿಕೊಂಡು ಹೋಗಿ ಮುಂದೆ ನಿಮ್ಮ ಬೇಡಿಕೆ ಈಡೇರಿಸಲು ಆಗುವುದಿಲ್ಲ ಎಂದು ಹೇಳಬಾರದು. ಈ ಕಾರಣಕ್ಕಾಗಿ ನಿಮ್ಮ ಬೇಡಿಕೆಗಳನ್ನು ಕಾಂಗ್ರೆಸ್ ಹೈಕಮಾಂಡ್‌ನ ಮುಂದಿಟ್ಟು ಅವರ ಸಲಹೆ ಪಡೆಯುತ್ತೇನೆ. ಇಂದು ನಿಮ್ಮೆಲ್ಲರಿಗೂ ಸುಳ್ಳು ಭರವಸೆಗಳನ್ನು ನೀಡಿ ಹೋಗುವುದಿಲ್ಲ.
ನಾನು ಆಡಿದ ಮಾತಿನಂತೆ ನಡೆದುಕೊಳ್ಳಬೇಕಾಗುತ್ತದೆ. ನಿಮ್ಮ ಬೇಡಿಕೆಗಳ ಕುರಿತು ರಾಜ್ಯದ ಆರ್ಥಿಕ ಇಲಾಖೆ ಬಳಿ ಮಾತನಾಡಿದ್ದೇನೆ. ಹೊಸ ಪಿಂಚಣಿ ನಿಯಮ ಜಾರಿಯಾದದ್ದು 2006ರಲ್ಲಿ, ಆ ನಂತರ ನೇಮಕಾತಿ ಆದ ನೌಕಕರು ನಿವೃತ್ತರಾಗುವುದು 35 ರಿಂದ 40 ವರ್ಷಗಳ ನಂತರ. ಹಾಗಾಗಿ ಈಗಲೇ ಏನೂ ಹೇಳಲು ಆಗುವುದಿಲ್ಲ ಎಂದು ಅವರು ನನಗೆ ಹೇಳಿದ್ದಾರೆ. ಸರ್ಕಾರಿ ನೌಕಕರ ಹಕ್ಕುಗಳನ್ನು ರಕ್ಷಣೆ ಮಾಡಬೇಕಿರುವುದು ಸರ್ಕಾರದ ಜವಾಬ್ದಾರಿ. ಹಾಗಾಗಿ ನಿಮ್ಮ ಹಕ್ಕುಗಳ ರಕ್ಷಣೆ ವಿಚಾರದಲ್ಲಿ ನಾವು ಹಿಂದೇಟು ಹಾಕುವುದಿಲ್ಲ. ನಿಮ್ಮ ಬೇಡಿಕೆಗಳು ನ್ಯಾಯಯುತವಾಗಿದ್ದರೆ ನೂರಕ್ಕೆ ನೂರು ಅವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಹಾಗಾಗಿ ನಾನು ನಿಮ್ಮ ಬೇಡಿಕೆಗಳ ಬಗ್ಗೆ ಹೈಕಮಾಂಡ್ ಜತೆ ಚರ್ಚೆ ಮಾಡಿ ನಮ್ಮ ನಿಲುವನ್ನು ಪ್ರಕಟ ಮಾಡುತ್ತೇನೆ.
ನಾನು ಮುಖ್ಯಮಂತ್ರಿಯಾಗಿರುವಾಗ ವಿಧಾನಸಭೆಯಲ್ಲಿ ಅನೇಕ ಬಾರಿ ಈ ಬಗ್ಗೆ ಪ್ರಶ್ನೆಯನ್ನು ಕೇಳಿದ್ದಾರೆ. ಸರ್ಕಾರಿ ನೌಕರರ ಸಂಘದವರು ನನ್ನನ್ನು ಭೇಟಿ ಮಾಡಿದ್ದಾರೆ. “ಅಂದಿನ ಸಮಯದಲ್ಲಿ ನಾನು ಹಳೆಯ ವೇತನ ಪದ್ದತಿ ಮಾಡಲು ಆಗುವುದಿಲ್ಲ” ಎಂದು ಉತ್ತರ ನೀಡಿದ್ದೆ. ಈಗ ಕಾಲ ಬದಲಾಗಿದೆ. ನಮ್ಮ ಪಕ್ಷ ಹಿಮಾಚಲ ಪ್ರದೇಶದ ಚುನಾವಣಾ ಸಂದರ್ಭದಲ್ಲಿ ಹಳೆಯ ಪಿಂಚಣಿ ಪದ್ದತಿಯನ್ನು ಜಾರಿ ಮಾಡುತ್ತೇವೆ ಎಂದಿದ್ದಾರೆ.
ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಹಳೆಯ ಪಿಂಚಣಿ ಪದ್ದತಿಯನ್ನು ಜಾರಿಗೆ ತಂದಿದ್ದಾರೆ. ಪಂಜಾಬ್‌ನಲ್ಲಿ ಮತ್ತು ಛತ್ತೀಸ್‌ಗಢದಲ್ಲಿ ಜಾರಿ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ಇರುವ ಕಡೆಗಳಲ್ಲಿ ಹಳೆಯ ಪಿಂಚಣಿ ಪದ್ದತಿಯನ್ನು ಮರುಜಾರಿ ಮಾಡಿದ್ದಾರೆ. ಹಾಗಾಗಿ ನಿಮ್ಮ ಬೇಡಿಕೆಗಳ ಬಗ್ಗೆ ಕೂಲಂಕಶವಾಗಿ ನಮ್ಮ ಹೈಕಮಾಂಡ್ ಜತೆ ಮಾತನಾಡುತ್ತೇನೆ. ಹೈಕಮಾಂಡ್ ಕೂಡ ಮುಕ್ತ ಮನಸಿನಿಂದ ಇದೆ, ಅವರ ಜತೆ ಚರ್ಚೆ ಮಾಡಿ ಕರ್ನಾಟಕ ಕಾಂಗ್ರೆಸ್ ಪಕ್ಷ ಒಂದು ಸರಿಯಾದ ನಿರ್ಧಾರಕ್ಕೆ ಬರಲಿದೆ.
ಈ ಹಿಂದೆಯೂ ಸರ್ಕಾರಿ ನೌಕರರು ಹೋರಾಟ ಮಾಡಿದ್ದರು, ಆದರೆ ಹೋರಾಟದಲ್ಲಿ ಇಷ್ಟೊಂದು ತೀವ್ರತೆ ಇರಲಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ 6ನೇ ವೇತನ ಆಯೋಗವನ್ನು ರಚನೆ ಮಾಡಿ, ಆಯೋಗವು ನೀಡಿದ್ದ ವರದಿಯನ್ನು ಒಪ್ಪಿಕೊಂಡು ಜಾರಿಗೆ ನೀಡಿದ್ದೆ. ಇದರಿಂದ ಸುಮಾರು 10,600 ಕೋಟಿ ರೂ. ಹೊರೆಯಾಯಿತು. ಆದರೂ ಸರ್ಕಾರಿ ನೌಕರರ ಹಿತಾಸಕ್ತಿಯನ್ನು ಪರಿಗಣಿಸಿ ಜಾರಿ ಮಾಡಿದ್ದೆ. ಸರ್ಕಾರಿ ನೌಕರರು ಸರ್ಕಾರದ ರೀತಿಗಳನ್ನು, ನಿರ್ಧಾರಗಳನ್ನು ಜಾರಿ ಮಾಡುವವರು. ಚುನಾಯಿತ ಪ್ರತಿನಿಧಿಗಳು ಮತ್ತು ಸರ್ಕಾರಿ ನೌಕರರು ಜನರ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಪ್ರಯತ್ನ ಮಾಡಿದಾಗ ಮಾತ್ರ ಅವುಗಳನ್ನು ಬಗೆಹರಿಸಲು ಸಾಧ್ಯವಾಗುತ್ತದೆ. ಹೀಗಾಗಿ ಸರ್ಕಾರಿ ನೌಕರರ ಹಿತರಕ್ಷಣೆ ಕೂಡ ಮುಖ್ಯವಾಗುತ್ತದೆ ಎಂದರು.
ಡಿ.ಕೆ. ಶಿವಕುಮಾರ್ ಮಾತು
ನಿಮ್ಮ ಅನೇಕ ಸ್ನೇಹಿತರು 2004 ರಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ಹೋರಾಟ ನಿಮ್ಮ ಮೂಲ ಹಕ್ಕು. ಸರ್ಕಾರ ವ್ಯಾಪಾರಿಯ ದೃಷ್ಟಿಕೋನದಿಂದ ಪಿಂಚಣಿ ಯೋಜನೆಯನ್ನು ನೋಡುತ್ತಿದೆ. ಈ ಹಿಂದೆ ಸರ್ಕಾರ ಅನೇಕ ದೊಡ್ಡ ಕಂಪನಿಗಳನ್ನು ಆರಂಭಿಸಿತ್ತು. ಉದ್ಯೋಗ ಸೃಷ್ಟಿ, ವ್ಯಾಪಾರ ವಹಿವಾಟಿಗೆ ಅನುಕೂಲ ಮಾಡಿಕೊಟ್ಟು, ಎಲ್ಲಾ ವಲಯಗಳಲ್ಲಿ ಸೋಪು, ಬಲ್ಬ್, ಕಾಗದ, ವಿಮೆ ಸೇರಿದಂತೆ ಕೈಗಾರಿಕೆ ಆರಂಭಿಸಿತು. ಈ ಸಮಯದಲ್ಲಿ ಖಾಸಗಿಯವರಿಗೆ ಅವಕಾಶ ಮಾಡಿಕೊಡಲಾಯಿತು.
ವ್ಯವಸ್ಥೆಯಲ್ಲಿ ನಿಮ್ಮ ನೋವು ಕೇಳುವ ಕಿವಿ, ನಿಮ್ಮ ಕಷ್ಟವನ್ನು ನೋಡುವ ಕಣ್ಣು, ಭಾವನೆ ಅರಿಯುವ ಹೃದಯ ಇಲ್ಲವಾದರೆ ಯಾರೂ ಬದುಕಲು ಸಾಧ್ಯವಿಲ್ಲ. ನಿಮ್ಮ ಸಮಸ್ಯೆ ಬಗ್ಗೆ ನಾನು ಅಧ್ಯಯನ ಮಾಡಿದ್ದು, ಇತ್ತೀಚೆಗೆ ಖರ್ಗೆ ಅವರು ನನ್ನನ್ನು, ಸಿದ್ದರಾಮಯ್ಯ, ಪರಮೇಶ್ವರ್ ಹಾಗೂ ಇತರ ಹಿರಿಯ ನಾಯಕರನ್ನು ಕರೆಸಿ ಚರ್ಚೆ ಮಾಡಿದ್ದರು. ಆಗ ನಿಮ್ಮ ವಿಚಾರ, ನಿಮ್ಮ ಹೋರಾಟ, ರಾಜಸ್ಥಾನ ಹಾಗೂ ಹಿಮಾಚಲ ಪ್ರದೇಶದಲ್ಲಿನ ತೀರ್ಮಾನದ ಬಗ್ಗೆ ಚರ್ಚೆ ಮಾಡಲಾಯಿತು. ಸಿದ್ದರಾಮಯ್ಯ ಅವರು ಸದನದಲ್ಲಿ ಈ ಹಿಂದೆ ಮಾಡಿದ್ದ ಹೇಳಿಕೆಯೂ ಚರ್ಚೆ ಆಗಿತ್ತು. ಖರ್ಗೆ ಅವರು ಸಿದ್ದರಾಮಯ್ಯ ಅವರಿಗೆ ಈ ವಿಚಾರವಾಗಿ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಳ್ಳಿ ಎಂದು ಸೂಚನೆ ನೀಡಿದರು.
ಪರಮೇಶ್ವರ್ ಅವರು ಪಕ್ಷದ ಪ್ರಣಾಳಿಕೆ ಸಮಿತಿಯ ಅಧ್ಯಕ್ಷರಾಗಿದ್ದು, ಅವರು ಎಲ್ಲಾ ವರ್ಗದ ಜನರ ಜತೆ ಚರ್ಚೆ ಮಾಡಿ ಪ್ರಣಾಳಿಕೆ ತಯಾರು ಮಾಡುತ್ತಿದ್ದಾರೆ. ನಾನು ಇಲ್ಲಿ ಯಾವುದೇ ಘೋಷಣೆ ಮಾಡುವುದಿಲ್ಲ. ನಮ್ಮ ಪಕ್ಷ ಈಗಾಗಲೇ ಈ ವಿಚಾರವಾಗಿ ಕೆಲವು ರಾಜ್ಯಗಳಲ್ಲಿ ತೀರ್ಮಾನ ಮಾಡಿದೆ. ಬಸವಣ್ಣನವರು ಹೇಳಿದಂತೆ ನುಡಿದಂತೆ ನಡೆಯಬೇಕು ಎಂಬುದು ನಮ್ಮ ಪಕ್ಷದ ಮೂಲ ಉದ್ದೇಶ. ರಾಜಸ್ಥಾನದಲ್ಲಿ ನಮ್ಮ ನಾಯಕರು ಈಗಾಗಲೇ ಈ ವಿಚಾರವಾಗಿ ಘೋಷಣೆ ಮಾಡಿದ್ದಾರೆ. ನಾವು ಅವರ ಜತೆ ಚರ್ಚೆ ಮಾಡಬೇಕಿದ್ದು, ಅಧಿವೇಶನದ ಹಿನ್ನೆಲೆಯಲ್ಲಿ ಭೇಟಿ ಆಗಿಲ್ಲ. ಈ ವಿಚಾರದಲ್ಲಿ ತೀರ್ಮಾನ ಕೈಗೊಂಡರೆ ಆಗುವ ಆರ್ಥಿಕ ಹೊರೆ ಸರಿದೂಗಿಸುವುದು ಹೇಗೆ ಎಂದು ರೂಪುರೇಷೆ ಮಾಡಲಾಗುತ್ತಿದೆ. ಅಧಿಕಾರಿಗಳ ಜತೆ ಮಾತನಾಡುತ್ತಿದ್ದೇನೆ.
ನೀವು ಆಶಾಭಾವದಿಂದ ಇರಬೇಕು. ನಾನು ನಾಳೆ ಅಧಿವೇಶನಕ್ಕೆ ಹೋಗುತ್ತಿದ್ದು, ಕೇವಲ ನಾನು ಸಿದ್ದರಾಮಯ್ಯ ಮಾತ್ರ ತೀರ್ಮಾನ ಮಾಡಲು ಆಗುವುದಿಲ್ಲ. ಪಕ್ಷದ ಎಲ್ಲ ನಾಯಕರ ಜತೆ ಚರ್ಚೆ ಮಾಡುತ್ತೇವೆ. ದೆಹಲಿ ನಾಯಕರು ನಮಗೆ ಅಗತ್ಯ ಸೂಚನೆ ನೀಡಿದ್ದಾರೆ. ನಮ್ಮದು ಸಾಮೂಹಿಕ ನಾಯಕತ್ವ. ನಾವೆಲ್ಲರೂ ಚರ್ಚೆ ಮಾಡಿ ಮುಂದಿನ ದಿನಗಳಲ್ಲಿ ಅಗತ್ಯ ಘೋಷಣೆ ನೀಡುತ್ತೇವೆ. ನಿಮ್ಮ ಜತೆ ನಿಲ್ಲುತ್ತೇವೆ ಎಂದರು.
ಇದನ್ನೂ ಓದಿ | NPS News | ಎನ್‌ಪಿಎಸ್ ನಿರ್ಣಾಯಕ ಹೋರಾಟಕ್ಕೆ ಬದ್ಧ ಎಂದ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ