ಬೆಂಗಳೂರು: ಸಿಲಿಕಾನ್ ಸಿಟಿಯ ಯುವಜನರ ರಾತ್ರಿಗಳಿಗೆ ಇನ್ನಷ್ಟು ರಂಗು ತುಂಬಲೋ ಎನ್ನುವಂತೆ, ಏಷ್ಯಾದ ಅತಿ ದೊಡ್ಡ ಪಬ್ (Oia Pub) ಬೆಂಗಳೂರಿನಲ್ಲಿ ತೆರೆದಿದೆ.
ಓಯಾ (Oia) ಹೆಸರಿನ ಈ ಪಬ್ ದೇಶದ ಮಾತ್ರವಲ್ಲ, ಏಷ್ಯಾದ ಅತಿ ದೊಡ್ಡ ಪಬ್ ಎನಿಸಿಕೊಳ್ಳಲಿದೆಯಂತೆ. ಇದರ ಹೊರನೋಟ ಹಾಗೂ ಒಳಾಂಗಣ ಗ್ರೀಕ್ ವಾಸ್ತುಶಿಲ್ಪವನ್ನು ಹೊಂದಿದೆ. ರಾಜಧಾನಿಯ ಶ್ರೀಮಂತರು, ಮೇಲ್ಮಧ್ಯಮ ವರ್ಗದ ಜನತೆಯ ಪಾರ್ಟಿ ಕ್ರೇಜ್‌ಗೆ ಇದು ಹೊಸ ಹುಮ್ಮಸ್ಸು ತುಂಬಲಿದೆ.
ಗ್ರೀಸ್‌ನ ಸ್ಯಾಂಟೋರಿನಿ ಎಂಬ ನಗರದ ವಾಸ್ತುಶಿಲ್ಪವನ್ನು ಇದು ಬಹುತೇಕ ಹೋಲುತ್ತದೆ. ಅಲ್ಲಿನ ಸ್ತಂಭಗಳು, ಬಿಳಿಯ ಬಣ್ಣದ ಆವರಣ, ಕಮಾನುಗಳು, ತೆರೆದ ಬಾಗಿಲುಗಳು ಹಾಗೂ ಆಸನ ವ್ಯವಸ್ಥೆ ಇತ್ಯಾದಿಗಳು ಪಬ್‌ಪ್ರಿಯರಿಗೆ ಹೊಸ ಅನುಭವ ನೀಡಲಿವೆ.
ಇದರ ಒಳಗೆ ಸುಮಾರು 1800 ಅತಿಥಿಗಳು ಕುಳಿತುಕೊಳ್ಳಬಹುದು. ಮಿತ್ರರೊಂದಿಗೆ ಡೇಔಟ್, ಪಾರ್ಟಿ ಅಥವಾ ಇವೆಂಟ್ ಕೂಡ ಆಯೋಜಿಸಬಹುದು. ಇಲ್ಲಿನ ಪ್ರತಿಯೊಂದು ಮೂಲೆಯೂ ಫೋಟೋಜೆನಿಕ್ ಆಗಿದೆ. ಸ್ವಾದಿಷ್ಟವಾದ ದೇಸಿ ಮತ್ತು ಕಾಂಟಿನೆಂಟಲ್ ಮಾದರಿಯ ವೆಜ್ ಮತ್ತು ನಾನ್‌ವೆಜ್ ಆಹಾರಗಳು ಇಲ್ಲಿ ಲಭ್ಯ. ಜತೆಗೆ ಸಂಗೀತದ ರಸದೌತಣವೂ ಪ್ರತಿದಿನ ಇರುತ್ತದೆ ಎಂದು ಓಯಾ ಪಬ್ ತಿಳಿಸಿದೆ.
ಈ ಪಬ್‌ನ ಮಾಲಿಕರು ಖ್ಯಾತ ಹೋಟೆಲಿಗರಾದ ಲೋಕೇಶ್ ಸುಖಿಜಾ. ಮಿಸೊ ಸೆಕ್ಸಿ, ಡ್ಯಾಡಿ ಮುಂತಾದ ಬ್ರಾಂಡ್‌ಗಳನ್ನು ಇವರು ಸ್ಥಾಪಿಸಿ ಜನಪ್ರಿಯಗೊಳಿಸಿದ್ದಾರೆ. ಈ ಪಬ್ ಹೆಣ್ಣೂರು ಮುಖ್ಯರಸ್ತೆಯಲ್ಲಿದೆ.