ಬೆಂಗಳೂರು: ಬಿಬಿಎಂಪಿಯಿಂದ ಕೈಗೊಂಡಿರುವ ಒತ್ತುವರಿ ತೆರವು ಕಾರ್ಯ(Rajakaluve Encroachment) ಆಮೆಗತಿಯಲ್ಲಿ ಸಾಗುತ್ತಿದೆ. ಯಲಹಂಕ ವಲಯದಲ್ಲಿ ಪಾಲಿಕೆ ಸರ್ವೇ ಪ್ರಕಾರ 96 ಕಡೆ ಒತ್ತುವರಿಯಾಗಿದೆ. ಆದರೆ ಈವರೆಗೆ 5 ಕಡೆ ಮಾತ್ರ ಒತ್ತುವರಿ ತೆರವು ಮಾಡಲಾಗಿದೆ ಎನ್ನಲಾಗಿದೆ.
ಕೇವಲ ಒಂದು ದೊಡ್ಡ ರಾಜಕಾಲುವೆ ಒತ್ತುವರಿ ತೆರವು ಬಿಟ್ಟರೆ, ಬಾಕಿ ಉಳಿದವೆಲ್ಲ ತೂಬುಗಾಲುವೆ ಒತ್ತುವರಿ ತೆರವಿನಲ್ಲೇ ಬಿಬಿಎಂಪಿ ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ. ಕೇವಲ ಸಿಂಗಾಪುರ ಕೆರೆ ಸುತ್ತಮುತ್ತ ಮಾತ್ರ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ.
ಇದನ್ನೂ ಓದಿ | Rajakaluve Encroachment | ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಿಂದಲೇ ರಾಜಕಾಲುವೆ ಒತ್ತುವರಿ!
ಸೆ.13ರಂದು ಎಲ್ಲಿ, ಎಷ್ಟು ತೆರವು?
ಸ್ಯಾಟಲೈಟ್ ಟೌನ್ ವ್ಯಾಪ್ತಿಯಲ್ಲಿ ಎನ್‌ಸಿಬಿಎಸ್ ಸಂಸ್ಥೆಯಿಂದ ಮಾಡಿದ್ದ 120 ಮೀಟರ್ ರಾಜಕಾಲುವೆ ಒತ್ತುವರಿ ತೆರವು ಮಾಡಲಾಗಿದೆ. ಎನ್‌ಸಿಬಿಎಸ್ ನಿಂದ ರಾಜಕಾಲುವೆ ಮೇಲೆ ನಿರ್ಮಾಣವಾಗಿದ್ದ ಕಾಂಪೌಂಡ್ ಗೋಡೆಯನ್ನು ತೆರವುಗೊಳಿಸಲಾಗಿದೆ.
ಸೆ.14ರಂದು ಎಲ್ಲಿ, ಎಷ್ಟು ತೆರವು?
ಸಿಂಗಾಪುರ ವಿಲೇಜ್‌ನಲ್ಲಿ ಬಾಲನ್ ಗ್ರೂಪ್ (ಜ್ಯೂಸ್ ಫ್ಯಾಕ್ಟರಿ) ನಿಂದ 21 ಮೀಟರ್ ಅಗಲ, 65 ಮೀಟರ್ ಉದ್ದ ಜಾಗ ಒತ್ತುವರಿಯಾಗಿತ್ತು. ಸಿಂಗಾಪುರದ ಕಮಾಂಡೋ ಗ್ಲೋರಿ ಅಪಾರ್ಟ್‌ಮೆಂಟ್ ಹಿಂಭಾಗ ಸರ್ವೇ ನಂ.97 ಹಾಗೂ 100ರಲ್ಲಿ 2.4 ಮೀ. ಅಗಲ ಹಾಗೂ 200 ಮೀ.ಉದ್ದದ ತೂಬುಗಾಲುವೆ ಒತ್ತುವರಿ ತೆರವು ಮಾಡಲಾಗಿದೆ. ಸಿಂಗಾಪುರದ ಡ್ರೀಮ್ ಲ್ಯಾಂಡ್ ಮಾರ್ಕ್ ಅಪಾರ್ಟ್‌ಮೆಂಟ್ ನಿಂದ 2.4 ಅಗಲ, 75 ಮೀ ಉದ್ದದ ತೂಬುಗಾಲುವೆ ಒತ್ತುವರಿಯಾಗಿದ್ದು, ಅರ್ಧ ಭಾಗ ತೆರವು ಮಾಡಲಾಗಿದೆ.
ಸೆ.15ರಂದು ಎಲ್ಲಿ, ಎಷ್ಟು ತೆರವು?
ಸಿಂಗಾಪುರದ ಡ್ರೀಮ್ ಲ್ಯಾಂಡ್ ಮಾರ್ಕ್ ಅಪಾರ್ಟ್‌ಮೆಂಟ್ ನಿಂದ 2.4 ಅಗಲ, 75 ಮೀ ಉದ್ದದ ತೂಬುಗಾಲುವೆ ಒತ್ತುವರಿಯಾಗಿದ್ದ ಸ್ಥಳದಲ್ಲಿ ಬಾಕಿ ಉಳಿದ ಅರ್ಧ ಭಾಗ ತೆರವು ಮಾಡಲಾಗಿದೆ. ಸಿಂಗಾಪುರದ ಸರ್ವೇ ನಂ.94, 95ರಲ್ಲಿ ತೂಬುಗಾಲುವೆ ಒತ್ತುವರಿ ಮಾಡಿ ಲೇಔಟ್ ನಿರ್ಮಾಣ ಮಾಡಲಾಗಿದ್ದು, ಇಲ್ಲೇ ಇಡೀ ದಿನ ಅಧಿಕಾರಿಗಳು ಕಾಲ ಕಳೆದಿದ್ದಾರೆ. ಸರ್ವೇ ನಂ. 94, 95ರಲ್ಲಿ ಲೇಔಟ್‌ನಲ್ಲಿ ಶುಕ್ರವಾರವೂ ತೆರವು ಕಾರ್ಯ ಮುಂದುವರಿಯಿತು.
ದಾಸರಹಳ್ಳಿ ವಲಯದಲ್ಲಿ ಮುಂದುವರಿದ ಕಾರ್ಯಾಚರಣೆ
ದಾಸರಹಳ್ಳಿ ವಲಯ ನೆಲಗದರನಹಳ್ಳಿ ರಸ್ತೆ ರುಕ್ಮಿಣಿ ನಗರದಲ್ಲಿ ಮೂರೂಕಾಲು ಗುಂಟೆ ಜಾಗ ಒತ್ತುವರಿ ಮಾಡಲಾಗಿದೆ. ಕಾಲುವೆಯ ಮೇಲಿರುವ ಮನೆ ಹಾಗೂ ಕಟ್ಟಡದ ಭಾಗಗಳನ್ನು ತೆರವು ಮಾಡಿದ್ದು, ಕಟ್ಟಡವನ್ನು ಒಡೆಯಲು ಮಾಲೀಕರು ಸಮಯಾವಕಾಶ ಕೋರಿ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವಕಾಶ ಕೊಟ್ಟಿರುವ ಪಾಲಿಕೆ, ನಿಗದಿತವಾಗಿ ಮಾಲೀಕರು ಒತ್ತುವರಿ ಜಾಗ ಪೂರ್ಣವಾಗಿ ತೆರವು ಮಾಡದಿದ್ದರೆ ಆ ಭಾಗವನ್ನು ಕೂಡ ಸಂಪೂರ್ಣವಾಗಿ ತೆರವು ಮಾಡಲಾಗುತ್ತದೆ ಎಂದು ಪಾಲಿಕೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ದಾಸರಹಳ್ಳಿವಲಯ ಜಂಟಿ ಆಯುಕ್ತ ಜಗದೀಶ್ ಚಂದ್ರ ಮಾತನಾಡಿ, ಜೆಸಿಬಿ ಹೋಗಲು ಸಾಧ್ಯವಾಗದಿರುವ ಕಡೆ ಸಿಬ್ಬಂದಿಯ ಮೂಲಕ ಒತ್ತುವರಿ ತೆರವು ಕಾರ್ಯಾಚರಣೆಗೆ 20 ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | ರಾಜಕಾಲುವೆ ಹೆಸರನ್ನು ಬದಲಾಯಿಸಿ: ಸದನದಲ್ಲಿ ಹೊಸ ಹೆಸರು ಸೂಚಿಸಿದ ಎ.ಟಿ. ರಾಮಸ್ವಾಮಿ