Site icon Vistara News

Operation Leopard : ಆಪರೇಷನ್‌ ಸಕ್ಸಸ್‌; 3 ದಿನದಿಂದ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆ

Chirate siezed

ಆನೇಕಲ್: ಬೊಮ್ಮನಹಳ್ಳಿಯ ಕೂಡ್ಲು ಗೇಟ್‌ ಬಳಿ‌ ಇರುವ ಕೃಷ್ಣಾ ರೆಡ್ಡಿ ಬಡಾವಣೆಯಲ್ಲಿ ಕಳೆದ ಮೂರು ದಿನಗಳಿಂದ ಜನರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆ ಸಿಕ್ಕಿದೆ. ಅರಣ್ಯಾಧಿಕಾರಿಗಳು ನಡೆಸಿದ್ದ ಕಾರ್ಯಾಚರಣೆ (Operation Leopard) ಯಶಸ್ವಿಯಾಗಿದೆ. ಬುಧವಾರ ಬೆಳಗ್ಗೆ ಪಾಳುಬಿದ್ದ ಕಟ್ಟಡವೊಂದರ ಬೇಸ್‌ಮೆಂಟ್‌ನಲ್ಲಿ ಪತ್ತೆಯಾಗಿ ಹಿಡಿಯಲು ಹೋದ ವೈದ್ಯರ ಮೇಲೆ ದಾಳಿ ಮಾಡಿ ಪರಾರಿಯಾಗಿದ್ದ ಈ ಚಿರತೆ ಕಟ್ಟಡದ ಪಕ್ಕದ ಖಾಲಿ ಜಾಗದಲ್ಲಿ ಸೆರೆಯಾಗಿದೆ.

ಬೇಸ್‌ಮೆಂಟ್‌ನಿಂದ ಆರಂಭಿಸಿ ಕಟ್ಟಡದ ನಾನಾ ಭಾಗಗಳಲ್ಲಿ ಓಡಾಡಿದ್ದ ಚಿರತೆ ಕೊನೆಗೆ ಪಕ್ಕದ ಖಾಲಿ ಜಾಗಕ್ಕೆ ಜಿಗಿದು ಪರಾರಿಯಾಗಲು ಯತ್ನಿಸಿತ್ತು. ಈ ಹಂತದಲ್ಲಿ ಅದು ಸೆರೆಯಾಗಿದೆ.

ಕೂಡ್ಲು ಸಮೀಪದ ಕೃಷ್ಣಾರೆಡ್ಡಿ ಬಡಾವಣೆಯಲ್ಲಿ ಕಳೆದ ಭಾನುವಾರ ರಾತ್ರಿ ಚಿರತೆಯೊಂದು ಓಡಾಡಿತ್ತು. ರಾತ್ರಿ 11 ಗಂಟೆಗೆ ಕಾಂಪೌಂಡ್ ಗೋಡೆ ಜಿಗಿದು ಓಡಿದ್ದನ್ನು ಪರಪ್ಪನ ಅಗ್ರಹಾರ ಲಾ ಆ್ಯಂಡ್ ಆರ್ಡರ್ ಪೊಲೀಸರು ಗಮನಿಸಿದ್ದರು. ಮರುದಿನ ಗಮನಿಸುವಾಗ ಅಲ್ಲಿ ಚಿರತೆಯ ಹೆಜ್ಜೆಗಳು ಪತ್ತೆಯಾಗಿತ್ತು. ಕಡೆಂಜಾ ಅಪಾರ್ಟ್‌ಮೆಂಟ್‌ನಲ್ಲಿ ಮಧ್ಯಾಹ್ನದ ಹೊತ್ತಿಗೇ ಚಿರತೆ ಮೆಟ್ಟಿಲು ಹತ್ತಿ ಹೋಗುವುದು ಸಿಸಿ ಟಿವಿಯಲ್ಲಿ ದಾಖಲಾಗಿತ್ತು.

ವೈದ್ಯರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವುದು

ಈ ಎಲ್ಲ ಘಟನಾವಳಿಗಳ ಹಿನ್ನೆಲೆಯಲ್ಲಿ ಸೋಮವಾರ ಸಂಜೆಯಿಂದಲೇ ಕಾರ್ಯಾಚರಣೆಗೆ ಇಳಿದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಂದು ದಿನವಾದರೂ ಚಿರತೆಯನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಈ ನಡುವೆ ಮಂಗಳವಾರ ಸಂಜೆ ಥರ್ಮಲ್ ತಂತ್ರಜ್ಞಾನದ ಡ್ರೋಣ್ ಮೂಲಕ ಕಾರ್ಯಾಚರಣೆ ನಡೆಸಿದ್ದರೂ ಸಿಕ್ಕಿರಲಿಲ್ಲ. ಮೂರನೇ ದಿನದ ಕಾರ್ಯಾಚರಣೆಗೆ ಹುಣಸೂರಿನಿಂದ ವನ್ಯ ಜೀವಿ ರಕ್ಷಣಾ ತಂಡ ಆಗಮಿಸಿತ್ತು. ಜತೆಗೆ ವನ್ಯ ಜೀವಿ ಸಂರಕ್ಷಣಾ ವಿಭಾಗದ ಶಾರ್ಪ್ ಶೂಟರ್ಸ್ ಕೂಡಾ ಬಂದಿದ್ದರು.

ಬುಧವಾರ ಮುಂಜಾನೆಯಿಂದ ಏನಾಯಿತು?

ಬುಧವಾರ ಮುಂಜಾನೆ ಕಟ್ಟಡದ ಎಲ್ಲ ಸ್ಕೆಚ್‌ಗಳೊಂದಿಗೆ ಕಾಲಿಟ್ಟ ಅರಣ್ಯಾಧಿಕಾರಿಗಳು, ವೈದ್ಯಾಧಿಕಾರಿಗಳಿಗೆ ಕಟ್ಟಡದ ಬೇಸ್‌ಮೆಂಟ್‌ನಲ್ಲೇ ಚಿರತೆ ಕಂಡಿದೆ. ಕೂಡಲೇ ಸಜ್ಜಿತರಾದ ಅಧಿಕಾರಿಗಳು ಅದಕ್ಕೆ ಅರಿವಳಿಕೆ ಪ್ರಯೋಗವನ್ನು ನಡೆಸಿದ್ದಾರೆ. ಆದರೆ ಆ ಹೊತ್ತಿಗೇ ಚಿರತೆ ಇಬ್ಬರು ವೈದ್ಯಾಧಿಕಾರಿಗಳ ಮೇಲೆ ದಾಳಿ ಮಾಡಿ ಅಲ್ಲಿಂದ ಪರಾರಿಯಾಗಿದೆ ಎಂದು ತಿಳಿದುಬಂದಿದೆ. ಗಾಯಗೊಂಡ ವೈದ್ಯರನ್ನು ಕೂಡಲೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಯಿತು.

Chirathe Escape

ಚಿರತೆಗೆ ಮೊದಲ ಸುತ್ತಿನ ಅರಿವಳಿಕೆ ನೀಡಲಾಗಿದೆ ಎಂದು ಹೇಳಲಾಗಿದೆ. ಹಾಗೆ ಸ್ವಲ್ಪ ಮಂಪರಿಗೆ ಸರಿದಂತೆ ಕಂಡ ಚಿರತೆ ಕೆಲವೇ ನಿಮಿಷದಲ್ಲಿ ಎಚ್ಚೆತ್ತು ದಾಳಿ ಮಾಡಿದೆ ಎನ್ನಲಾಗಿದೆ. ಸಾಮಾನ್ಯವಾಗಿ ಯಾವುದೇ ಪ್ರಾಣಿಗೆ ಅರವಳಿಕೆ ಮದ್ದು ನೀಡಬೇಕಾದ್ರೆ ಹೆಚ್ಚು ಮಾಂಸ ಇರುವ ಸ್ಥಳ ನೋಡಿ ಹೊಡೆಯಬೇಕು. ಆದರೆ, ಅರಿವಳಿಕೆ ಹಾಕುವ ಪ್ರಯತ್ನದಲ್ಲಿ ವೈದ್ಯರು ವಿಫಲವಾಗಿದ್ದಾರೆ. ಎರಡು ಬಾರಿ ಅರವಳಿಕೆ ಮದ್ದು ಹೊಡೆದರೂ ಸರಿಯಾದ ಜಾಗಕ್ಕೆ ಬಿದ್ದಿರಲಿಲ್ಲ ಎನ್ನಲಾಗಿದೆ. ಎರಡನೇ ಬಾರಿ ಹೊಡೆದ ಅರಿವಳಿಕೆ ಯಶಸ್ವಿಯಾಗಿದೆ ಎಂದು ತಿಳಿದು ಡಾ. ಕಿರಣ್‌ ಅವರು ಪರಿಶೀಲನೆಗೆ ಮುಂದಾಗಿದ್ದರು ಎನ್ನಲಾಗಿದೆ. ಅಷ್ಟರಲ್ಲಿ ಚಿರತೆ ಕಿರಣ್ ಮೇಲೆ ದಾಳಿ ಮಾಡಿ ಎಸ್ಕೇಪ್ ಆಗಿದೆ. ಕುತ್ತಿಗೆ ಭಾಗ ಮತ್ತು ಕೈಗೆ ಪರಚಿ ಎಸ್ಕೇಪ್ ಆಗಿದೆ. ಓಡುವ ಭರದಲ್ಲಿ ಇನ್ನಿಬ್ಬರ ಮೇಲೆಯೂ ದಾಳಿ ಮಾಡಿತ್ತು.

ಮೇಲಿನ ಮಹಡಿಗಳಿಗೆ ಓಡಿದ ಚಿರತೆ

ಬೇಸ್‌ಮೆಂಟ್‌ನಿಂದ ಮೇಲಿನ ಮಹಡಿಗಳಿಗೆ ಓಡಿದ ಚಿರತೆಯನ್ನು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಅಲ್ಲಿಗೂ ಬಿಡದೆ ಬೆನ್ನಟ್ಟಿದ್ದರು. ಈ ನಡುವೆ ಅದು ಮಹಡಿಯಿಂದ ಮಹಡಿಗೆ ಜಿಗಿದು ತಪ್ಪಿಸಿಕೊಳ್ಳಲು ಯತ್ನಿಸಿತು. ಕೊನೆಗೆ ಅದು ಪಾಳು ಬಿದ್ದ ಕಟ್ಟಡದ ಪಕ್ಕದಲ್ಲಿರುವ ಖಾಲಿ ಸೈಟ್‌ಗೆ ಹಾರಿತು. ಅಲ್ಲಿ ಸಾಕಷ್ಟು ಪೊದೆಗಳು ಇದ್ದುದರಿಂದ ಅದಕ್ಕೆ ರಕ್ಷಣೆ ಪಡೆಯಲು ಸಹಾಯವಾಗಿತ್ತು.

ಈ ನಡುವೆ ಅರಣ್ಯಾಧಿಕಾರಿಗಳು ಜೆಸಿಬಿಯನ್ನು ತರಿಸಿ ಖಾಲಿ ಜಾಗವನ್ನು ಲೆವೆಲ್‌ ಮಾಡಿದರು. ಮಾತ್ರವಲ್ಲ, ಜೆಸಿಬಿಯನ್ನು ಬಳಸಿಕೊಂಡೇ ವೈದ್ಯರು ಅರಿವಳಿಕೆ ನೀಡಲು ಮುಂದಾದರು. ಕೊನೆಗೆ ಈ ಪ್ರಯತ್ನ ಯಶಸ್ವಿಯಾಯಿತು. ಅರಿವಳಿಕೆ ನೀಡಿದಾಗ ಸ್ವಲ್ಪ ಸುಸ್ತಾದ ಚಿರತೆಯನ್ನು ಮೊದಲು ಬಲೆಯಲ್ಲಿ ಕೆಡವಿ ಬಳಿಕ ಬೋನಿಗೆ ಹಾಕಿ ಸಾಗಿಸಲಾಯಿತು. ಈ ಚಿರತೆಯನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಕಳುಹಿಸಲಾಗುತ್ತದೆ ಎನ್ನಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ.
ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version