Site icon Vistara News

ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಯೋಜನೆಗೆ 9,000 ಮರಗಳಿಗೆ ಕೊಡಲಿ

namma metro

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಯೋಜನೆಯಿಂದಾಗಿ ನಗರದಲ್ಲಿ ಕನಿಷ್ಠ 9,000 ಮರಗಳು ನಾಶವಾಗಿವೆ ಎಂದು ಮಾಹಿತಿ ಹಕ್ಕು ಕಾಯಿದೆಯ ಅರ್ಜಿಯೊಂದರಲ್ಲಿ ಬಹಿರಂಗವಾಗಿದೆ.

ಮೆಟ್ರೋ ಯೋಜನೆಯು ನಗರದ ಜನದಟ್ಟಣೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಸದ್ಯ ಎರಡು- ನೇರಳೆ ಮತ್ತು ಹಸಿರು ರೇಖೆಯ- ಮೆಟ್ರೋ ಲೈನುಗಳು ಕಾರ್ಯಾಚರಿಸುತ್ತಿವೆ. ಈ ಎರಡು ಲೈನುಗಳ ಕಾಮಗಾರಿಯಲ್ಲಿಯೇ ಇಷ್ಟು ಮರಗಳನ್ನು ಕತ್ತರಿಸಲಾಗಿದೆ. ಇನ್ನೂ ಗುಲಾಬಿ, ನೀಲಿ ಮತ್ತು ಹಳದಿ ಬಣ್ಣಗಳ ಲೈನುಗಳ ವಿಸ್ತರಣೆ ಕಾರ್ಯ ನಡೆಯುತ್ತಿದ್ದು, ಇನ್ನಷ್ಟು ಮರಗಳನ್ನು ಕಡಿಯಲು ಕಾರಣವಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಮೆಟ್ರೋದ ಮೂರನೇ ಹಂತದ ಕಾಮಗಾರಿಯು ಪೂರ್ವ, ದಕ್ಷಿಣ ಮತ್ತು ಉತ್ತರ ಬೆಂಗಳೂರನ್ನು ಸಂಪರ್ಕಿಸಲಿದೆ. ಮೊದಲ ಹಂತದ ನೇರಳೆ ಮತ್ತು ಹಸಿರು ಲೈನುಗಳಲ್ಲಿ ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL) 2007 ಮತ್ತು 2014ರ ನಡುವೆ 2,688 ಮರಗಳನ್ನು ಉರುಳಿಸಿದೆ. ಈ ವಿವರಗಳು RTI ಕಾಯಿದೆಯಡಿಯಲ್ಲಿ ಲಭ್ಯವಾಗಿವೆ.

BMRCL 2008ರಿಂದ 2019ರವರೆಗೆ ನಗರದ ವಿವಿಧೆಡೆ ಇತರ ಯೋಜನೆಗಳಿಗಾಗಿ 680 ಮರಗಳನ್ನು ಕಡಿದಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಅರಣ್ಯ ವಿಭಾಗ ಮತ್ತು ಕರ್ನಾಟಕ ಅರಣ್ಯ ಇಲಾಖೆ ಮಾಹಿತಿಯು ಮೆಟ್ರೋ ಯೋಜನೆಗಳಿಗಾಗಿ ಇನ್ನೂ 1,682 ಮರಗಳನ್ನು ಕಡಿಯಲಾಗಿದೆ ಎಂದು ಬಹಿರಂಗಪಡಿಸಿದೆ. ಬೆಂಗಳೂರಿನ ವಿವಿಧೆಡೆ ಒಟ್ಟು 9,154 ಮರಗಳನ್ನು ಈ ಅವಧಿಯಲ್ಲಿ ಕಡಿಯಲಾಗಿದೆಯಂತೆ.

ಹಸಿರು ನಗರಿ, ಉದ್ಯಾನ ನಗರಿ ಎಂಬ ಬಿರುದುಗಳನ್ನು ಬೆಂಗಳೂರು ನಿಧಾನವಾಗಿ ಕಳೆದುಕೊಳ್ಳುವ ಹಂತದತ್ತ ತೆರಳುತ್ತಿದೆ ಎಂದು ಈ ಮಾಹಿತಿ ಬಹಿರಂಗಪಡಿಸಿದೆ. ಈ ಹಿಂದೆ ಸ್ಟೀಲ್‌ ಬ್ರಿಡ್ಜ್‌ ನಿರ್ಮಾಣಕ್ಕೆ ಹಸಿರು ಕವಚ ಕಡಿಯಲು ಮುಂದಾದಾಗ ಹಲವರು ವಿರೋಧಿಸಿದ್ದು, ನಂತರ ಈ ಪ್ರತಿರೋಧವೂ ತಣ್ಣಗಾಗಿತ್ತು. ಲಾಲ್‌ಬಾಗ್‌ ಹಾಗೂ ಕಬ್ಬನ್‌ ಪಾರ್ಕ್‌ಗಳ ಹಸಿರು ಆವರಣವನ್ನು ತುಸು ಕಡಿತಗೊಳಿಸಲು ಮುಂದಾದಾಗ ಬೆಂಗಳೂರಿನ ಪ್ರಜ್ಞಾವಂತರು ಧ್ವನಿಯೆತ್ತಿದ್ದರು.

ಇದನ್ನೂ ಓದಿ: ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್‌ ದರ ಎಷ್ಟಿದೆ?

Exit mobile version