ಬೆಂಗಳೂರು: ಕಳೆದ ಆ.25ರಂದು ದಕ್ಷಿಣ ಭಾರತದಲ್ಲಿಯೇ ಪ್ರಪ್ರಥಮ ಹವಾನಿಯಂತ್ರಿತ ʼಶ್ರೀ ಕೃಷ್ಣದೇವರಾಯ ಪಾಲಿಕೆ ಬಜಾರ್ʼ (Krishnadevaraya Palika Bazaar) ಅನ್ನು ಬೆಂಗಳೂರಿನ ವಿಜಯನಗರ ಕ್ಷೇತ್ರ ವ್ಯಾಪ್ತಿಯ ಮೆಟ್ರೊ ನಿಲ್ದಾಣದ ಬಳಿ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದರು.
ವ್ಯಾಪಾರಸ್ಥರ ಅನುಕೂಲಕ್ಕೆಂದು ಕೋಟಿ ಕೋಟಿ ಖರ್ಚು ಮಾಡಿ ಬೆಂಗಳೂರಿನ ವಿಜಯನಗರದಲ್ಲಿ ಪಾಲಿಕೆ ಬಜಾರ್ (Palika Bazaar) ನಿರ್ಮಿಸಲಾಗಿತ್ತು. ಆದರೆ ಅದ್ಯಾಕೋ ಏನೋ ಮೊಟ್ಟಮೊದಲ ಹವಾನಿಯಂತ್ರಿತ ಭೂಗತ ಮಾರುಕಟ್ಟೆ ಪಾಲಿಕೆ ಬಜಾರ್‌ಯತ್ತ ತಿರುಗಿ ನೋಡುವವರೇ ಯಾರು ಇಲ್ಲದಂತಾಗಿದೆ. ಇತ್ತ ವ್ಯಾಪಾರಿಗಳಿಗೆ ಮೊದಲು ಇದ್ದ ವ್ಯಾಪಾರವೂ ಇಲ್ಲದೆ ನೊಣ ಹೊಡೆಯುವ ಸ್ಥಿತಿ ಎದುರಾಗಿದೆ.
ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ 13 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಭೂಗತ ಮಾರುಕಟ್ಟೆ ಇದು. ವ್ಯಾಪಾರಿಗಳ ಅನುಕೂಲಕ್ಕೆಂದು 79 ಮಳಿಗೆಗಳಿರುವ ಪಾಲಿಕೆ ಬಜಾರ್‌ನ ನಿರೀಕ್ಷೆ ಹುಸಿಯಾಗಿದೆ. ಖರೀದಿಗೆ ಜನರು ಬಾರದ ಹಿನ್ನೆಲೆಯಲ್ಲಿ ವ್ಯಾಪಾರಸ್ಥರಿಗೆ ಹೊಡೆತ ಬಿದ್ದಿದೆ.
ಬಜಾರ್‌ವರೆಗೆ ತೆರಳುವುದಕ್ಕೆ ಜನರು ಹಿಂದೇಟು ಹಾಕುತ್ತಿದ್ದಾರೆ. ಅದರಲ್ಲೂ ಕೆಲವು ವ್ಯಾಪಾರಸ್ಥರು ಮೊದಲು ಇರುವ ಅಂಗಡಿಗಳನ್ನು ಬಿಟ್ಟು ಬರುತ್ತಿಲ್ಲ. ಇದರಿಂದ ಪಾಲಿಕೆ ಬಜಾರ್‌ನಲ್ಲಿರುವ ವ್ಯಾಪಾರಿಗಳಿಗೆ ಹೊಡೆತ ಬಿದ್ದಿದೆ. ಗಣ್ಯಾತಿ ಗಣ್ಯರಿಂದ ಉದ್ಘಾಟನೆಯಾಗಿದ್ದ ಪಾಲಿಕೆ ಬಜಾರ್ ಈಗ ಬಿಕೋ ಎನ್ನುತ್ತಿದೆ. ಕೋಟಿ ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಬಜಾರ್ ಇದೀಗ ನೀರಿನಲ್ಲಿ ಹೋಮ ಮಾಡಿದ್ದಂತಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ