ಬೆಂಗಳೂರು: ರಾಜ್ಯದಲ್ಲಿ ಈಗ ಲೋಕಸಭಾ ಚುನಾವಣೆ (Parliament Election) ನಡೆದರೆ ಬಿಜೆಪಿಗೆ 23 ಸ್ಥಾನ ಬರಬಹುದು, ಕಾಂಗ್ರೆಸ್ ಐದು ಸ್ಥಾನಗಳಲ್ಲಿ ಗೆಲ್ಲಬಹುದು ಎಂಬ ರಾಷ್ಟ್ರೀಯ ಮಾಧ್ಯಮಗಳ ಸಮೀಕ್ಷಾ (National Media Survey Report) ವರದಿ ನೋಡಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಗರಂ ಆಗಿದ್ದಾರೆ. ಜತೆಗೆ ರಾಜ್ಯದ ನಾಯಕರಿಗೆ ತಕ್ಷಣದಿಂದಲೇ ಕಾರ್ಯಾಚರಣೆ ಆರಂಭಿಸಿ 28ರಲ್ಲಿ 20 ಸ್ಥಾನ ಗೆಲ್ಲುವುದಕ್ಕೆ ಪೂರಕವಾದ ಕಾರ್ಯತಂತ್ರ ರೂಪಿಸುವಂತೆ ಸೂಚಿಸಿದ್ದಾರೆ.
ರಾಷ್ಟ್ರೀಯ ಮಾಧ್ಯಮಗಳ ಪ್ರಕಾರ ಈಗಲೇ ಚುನಾವಣೆ ನಡೆದರೆ ದೇಶದಲ್ಲಿ ಎನ್‌ಡಿಎ ಮೈತ್ರಿಕೂಟ (NDA Group) 30೦ಕ್ಕೂ ಅಧಿಕ ಸ್ಥಾನಗಳೊಂದಿಗೆ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಅದರಲ್ಲೂ ಕಾಂಗ್ರೆಸ್ ಭಾರಿ ನಿರೀಕ್ಷೆ ಹೊಂದಿರುವ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ನಿರಾಸೆ ಕಾದಿದೆ ಎಂಬ ಮಾಹಿತಿ ಇದೆ.2019ರಲ್ಲಿ ಕರ್ನಾಟಕದಲ್ಲಿ ಬಿಜೆಪಿ 25+1 ಸ್ಥಾನಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ ಒಂದೊಂದು ಸ್ಥಾನಗಳನ್ನು ಗೆದಿದ್ದವು.
ಆದರೆ, ಈ ಬಾರಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲಬೇಕು ಎನ್ನುವುದು ಕಾಂಗ್ರೆಸ್ ಟಾರ್ಗೆಟ್ ಆಗಿದೆ. ಕಾಂಗ್ರೆಸ್ ಪಕ್ಷ ವಿಧಾನಸಭಾ ಚುನಾವಣೆಯಲ್ಲಿ ಪಡೆದ ಜನಪ್ರಿಯತೆ, ನಂತರ ಕೊಟ್ಟ ಗ್ಯಾರಂಟಿ ಸ್ಕೀಮ್‌ಗಳನ್ನು ಮತಗಳಾಗಿ ಪರಿವರ್ತಿಸಿ ಗೆಲ್ಲಬೇಕು ಎನ್ನುವುದು ಅದರ ಕಾರ್ಯತಂತ್ರ. ಇದರಿಂದ ಕಾಂಗ್ರೆಸ್‌ನ ಒಟ್ಟು ಸ್ಥಾನ ಸಂಖ್ಯೆ ಹೆಚ್ಚಳಕ್ಕೂ ಪೂರಕವಾಗುತ್ತದೆ ಎನ್ನುವುದು ನಿರೀಕ್ಷೆ. ಆದರೆ, ಸಮೀಕ್ಷೆಗಳು ಕಾಂಗ್ರೆಸ್‌ಗೆ ಅತಿ ಹೆಚ್ಚು ಅಂದರೆ ಐದು ಸ್ಥಾನಗಳಷ್ಟೇ ಸಿಗಬಹುದು ಎನ್ನುತ್ತಿವೆ.
ಇದನ್ನೂ ಓದಿ: Lok Sabha Election: ಇಂದೇ ಎಲೆಕ್ಷನ್ ನಡೆದ್ರೆ ಎನ್‌ಡಿಎಗೆ ಅಧಿಕಾರ, ‘ಇಂಡಿಯಾ ಕೂಟ’ಕ್ಕೆ ಸೋಲು! ಯಾರಿಗೆ ಎಷ್ಟು ಸೀಟು?
ಸಭೆ ನಡೆಸಿದ ಮಲ್ಲಿಕಾರ್ಜುನ ಖರ್ಗೆ
ಸಮೀಕ್ಷೆಗಳ ಮಾಹಿತಿ ಹೊರಬೀಳುತ್ತಿದ್ದಂತೆಯೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯದ ಹಿರಿಯ ನಾಯಕರ ಜತೆ ಮಾತನಾಡಿದ್ದು, ಗ್ಯಾರಂಟಿ ನಡುವೆಯೂ ರಾಜ್ಯದಲ್ಲಿ ಪಕ್ಷಕ್ಕೆ ಹಿನ್ನಡೆ ಯಾಕೆ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಜತೆಗೆ ಮಾತುಕತೆ ನಡೆಸಿದ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯದಲ್ಲಿ ಕಾಂಗ್ರೆಸ್ 20 ಸ್ಥಾನ ಗೆಲ್ಲಲೇಬೇಕು ಎಂಬ ಸೂಚನೆ ನೀಡಿದ್ದಾರೆ. ಇನ್ನೂ ಒಂಬತ್ತು ತಿಂಗಳು ಇರೋದರಿಂದ ತಂತ್ರಗಾರಿಕೆ ರೂಪಿಸುವಂತೆ ತಿಳಿಸಿದ್ದಾರೆ.
ಇದರ ನಡುವೆಯೇ ಡಾ.ಜಿ ಪರಮೇಶ್ವರ್ ಹಾಗೂ ಸಂಸದ ಡಿಕೆ ಸುರೇಶ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಗಳೂರಿನ ಸದಾಶಿವ ನಗರ ನಿವಾಸದಲ್ಲಿ ಭೇಟಿ ಮಾಡಿದ್ದಾರೆ. ಅವರ ನಡುವೆ ರಾಜ್ಯದ ಸದ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ.
ಆರು ತಿಂಗಳು ಮೊದಲೇ ಅಭ್ಯರ್ಥಿ ಆಯ್ಕೆ ಆಗಲಿ ಎಂದ ಸಲೀಂ ಅಹ್ಮದ್
ಈ ನಡುವೆ ಮಂಗಳೂರಿನಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಅವರು ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕನಿಷ್ಟ 20 ಸೀಟ್ ಗೆಲ್ಲುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಕೇಂದ್ರದಲ್ಲಿ ಇಂಡಿಯಾ ಸರ್ಕಾರ ಬರುತ್ತೆ ರಾಹುಲ್ ಗಾಂಧಿ ಪ್ರಧಾನಮಂತ್ರಿ ಆಗ್ತಾರೆ ಎಂದೂ ಹೇಳಿದರು.
ʻʻʻಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಘೋಷಣೆ ವಿಚಾರವನ್ನು ಪ್ರಸ್ತಾಪಿಸಿದ ಅವರು ಚುನಾವಣೆಗೆ ಆರು ತಿಂಗಳ ಮೊದಲು ಅಭ್ಯರ್ಥಿಗಳನ್ನು ಘೋಷಣೆ ಮಾಡಬೇಕು ಎಂದು ಕೇಳಿಕೊಂಡಿದ್ದೇವೆʼʼ ಎಂದರು.
ʻʻಹಿರಿಯ ರಾಜ್ಯ ಮುಖಂಡರನ್ನು ವೀಕ್ಷಕರಾಗಿ ಎಐಸಿಸಿ ನೇಮಕ ಮಾಡುತ್ತದೆ. ಈ ವೀಕ್ಷಕರ ಪಟ್ಟಿಯನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಈ ವೀಕ್ಷಕರು ಶಾಸಕರು, ಮಾಜಿ ಶಾಸಕರು ಪಕ್ಷದ ಪ್ರಮುಖರ ಜೊತೆ ಚರ್ಚೆ ಮಾಡ್ತಾರೆ. ಚುನಾವಣೆಗೆ ಆರು ತಿಂಗಳು ಮೊದಲು ಅಭ್ಯರ್ಥಿಗಳನ್ನು ಘೋಷಣೆ ಮಾಡಬೇಕೆಂದು ಹೇಳಿದ್ದೇವೆ. ಈ ಪ್ರಕ್ರಿಯೆಗಳು ಮುಗಿದ ಕೂಡಲೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆಯಿದೆʼʼ ಎಂದು ಹೇಳಿದರು.