ಬೆಂಗಳೂರು: ಪೇಯಿಂಗ್ ಗೆಸ್ಟ್ ರೂಮುಗಳಲ್ಲಿ (Paying Guest Facility) ಯಾವುದೇ ವ್ಯವಸ್ಥೆ ಇಲ್ಲ, ಕೇಳಿದರೆ ವಾರ್ಡನ್ ದೊಣ್ಣೆ ಹಿಡಿದು ಧಮ್ಕಿ ಹಾಕುತ್ತಾರೆ ಎನ್ನುವುದು ಯುವತಿಯರ ದೂರು. ಪಿಜಿಯ ಕೆಲವರು ಯುವತಿಯರು ಮದ್ಯಪಾನ ಮಾಡುತ್ತಾರೆ, ಪ್ರಶ್ನಿಸಿದರೆ ಹಲ್ಲೆ ಮಾಡುತ್ತಾರೆ, ದೂರು ನೀಡುತ್ತಾರೆ ಎನ್ನುವುದು ವಾರ್ಡನ್ ಮತ್ತು ಮಾಲೀಕರ ಅಹವಾಲು. ಹೀಗೆ ಎರಡು ಗುಂಪುಗಳ ನಡುವಿನ ಗುದ್ದಾಟಕ್ಕೆ (Fight in PG)
ಬೆಂಗಳೂರಿನ (Bangalore News) ಮಹಾಲಕ್ಷ್ಷೀ ಲೇ ಔಟ್‌ನಲ್ಲಿರುವ ಪ್ರೇಮಾ ಎಂಬ ಹೆಸರಿನ ಪಿಜಿಯೇ ಈ ಗಲಾಟೆಗಳ ಕೇಂದ್ರ ಬಿಂದು. ಇದು ಬೆಂಗಳೂರಿನ ಹಲವು ಪಿಜಿಗಳಲ್ಲಿ ಕಂಡುಬರುವ ಕಥೆ ಮತ್ತು ವ್ಯಥೆಯೂ ಹೌದು. ಜತೆಗೆ ಇಂಥ ಪಿಜಿಗಳಲ್ಲಿ ನಮ್ಮ ಹೆಣ್ಮಕ್ಕಳನ್ನು ಹೇಗೆ ಬಿಡುವುದಪ್ಪಾ ಎಂಬ ನಿಟ್ಟುಸಿರು ಕೂಡಾ ಹೌದು.
ಪ್ರೇಮಾ ಪಿಜಿಯ ನಾಲ್ಕು ಮಂದಿ ಯುವತಿಯರು ಅಲ್ಲಿನ ವಾರ್ಡನ್ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರೆ. ಪಿಜಿಯಲ್ಲಿ ಯಾವ ವ್ಯವಸ್ಥೆಯೂ ಸರಿ ಇಲ್ಲ. ಬರುವಾಗ ಆ ತರ ಇದೆ, ಈ ತರ ಇದೆ ಎಂದೆಲ್ಲಾ ಹೇಳಿ ಮರುಳು ಮಾಡುತ್ತಾರೆ, ಬಂದ ಮೇಲೆ ಇಲ್ಲಿ ಏನೂ ಇರುವುದಿಲ್ಲ. ಪ್ರಶ್ನೆ ಮಾಡಿದರೆ ಧಮ್ಕಿ ಹಾಕುತ್ತಾರೆ ಎನ್ನುವುದು ಇವರ ದೂರು. ಜೊತೆಗೆ ಅವ್ಯವಸ್ಥೆ ಪ್ರಶ್ನೆ ಮಾಡಿದ್ದಕ್ಕೆ ಲೇಡಿ ವಾರ್ಡನ್ ದೊಣ್ಣೆ ಹಿಡಿದು ಧಮ್ಕಿ ಹಾಕುತ್ತಿರುವ ವಿಡಿಯೋವನ್ನು ಯುವತಿಯರೇ ಮಾಡಿದ್ದು ಅದು ಈಗ ವೈರಲ್ ಆಗಿದೆ.
ಊಟ ಚೆನ್ನಾಗಿಲ್ಲ, ಹಲವು ಬಾರಿ , ಊಟದಲ್ಲಿ ಜಿರಳೆ ಸಿಕ್ಕಿದೆ. ನೀರು ಬರುವುದಿಲ್ಲ. ಅವ್ಯವಸ್ಥೆ ಪ್ರಶ್ನೆ ಮಾಡಿದ್ರೆ ಧಮ್ಕಿ ಹಾಕ್ತಾರೆ. ಬಾಡಿಗೆ ಕೊಡದಿದ್ರೆ ಕೆಟ್ಟ ಪದ ಬಳಸ್ತಾರೆ, ವಾರ್ಡನ್ ಓನರ್ ಸೇರಿಕೊಂಡು ಪಿಜಿಯಲ್ಲಿರೋ ಯುವತಿಯರಿಗೆ ಕಿರುಕುಳ ಕೊಡ್ತಾರೆ ಎಂದು ಅವರು ದೂರು ನೀಡಿದ್ದಾರೆ.
ನಾನಲ್ಲ, ಅವರೇ ಕುಡಿದು ಬರೋದು ಅಂತಾರೆ ವಾರ್ಡನ್
ಈ ನಡುವೆ ಯುವತಿಯರ ಆರೋಪಗಳೆಲ್ಲವನ್ನೂ ವಾರ್ಡನ್ ಕಲ್ಪನಾ ನಿರಾಕರಿಸುತ್ತಾರೆ. ವಿಸ್ತಾರ ನ್ಯೂಸ್ ಜತೆ ಮಾತನಾಡಿದ ಪಿಜಿಯ ವಾರ್ಡನ್, ನಾನು ಯಾವುದೇ ರೀತಿಯ ಹಲ್ಲೆ ನಡೆಸಿಲ್ಲ, ದೂರು ಕೊಟ್ಟ ಯುವತಿಯರೇ ನಮ್ಮ ಮೇಲೆ ಹಲ್ಲೆ ನಡೆಸುವ ಪ್ರಯತ್ನ ಮಾಡಿದ್ದಾರೆ ಎಂದಿದ್ದಾರೆ.
ಪಿಜಿಯಲ್ಲಿ ಕದ್ದು ಮದ್ಯಪಾನ ಮಾಡ್ತಾರೆ, ಲೇಟ್ ಆಗಿ ಪಿಜಿಗೆ ಬರ್ತಾರೆ ಅದನ್ನ ಪ್ರಶ್ನೆ ಮಾಡಿದರೆ ನಮ್ಮ ಮೇಲೆ ಹಲ್ಲೆ ಮಾಡ್ತಾರೆ. ಇವರೇ ಜಿರಳೆ ಹಿಡಿದು ಆಹಾರದಲ್ಲಿ ಹಾಕಿ ಫೋಟೋ ತೆಗೆದು ಕಂಪ್ಲೆಂಟ್ ಮಾಡ್ತಾರೆ. ಇನ್ಫ್ಲೂಯೆನ್ಸ್ ಮೂಲಕ ಪಿಜಿ ಮುಚ್ಚಿಸ್ತಿವಿ ಎಂದು ಬೆದರಿಕೆ ಹಾಕ್ತಾರೆ. ಪಿಜಿಯ ಬೇರೆ ಯುವತಿಯರಿಗೂ ಆಮಿಷ ಒಡ್ಡಿ ಅವರ ಪರವಾಗಿ ಮಾತನಾಡುವಂತೆ ಹೇಳುತ್ತಾರೆ. ನನ್ನನ್ನೂ ಪಿಜಿ ಓನರ್ ವಿರುದ್ಧ ಮಾತನಾಡುವಂತೆ ಪುಸಲಾಯಿಸುತ್ತಾರೆ ಎಂದಿದ್ದಾರೆ.
ಇದನ್ನೂ ಓದಿ : Love Case : ಪ್ರೇಮಿ ಜತೆ ಓಡಿಹೋದ 2 ಮಕ್ಕಳ ತಾಯಿ ; ಸಿಟ್ಟಿಗೆದ್ದ ಗಂಡನಿಂದ ಲವರ್ ಮನೆ ಧ್ವಂಸ
ಪಿಜಿಗೆ ಭೇಟಿ ನೀಡಿದ ಬಿಬಿಎಂಪಿ ಅಧಿಕಾರಿಗಳು ನೋಟಿಸ್ ಜಾರಿ
ಮಹಾಲಕ್ಷ್ಮಿ ಲೇ ಔಟ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣ ತನಿಖಾ ಹಂತದಲ್ಲಿದೆ. ಘಟನೆಯ ಬೆನ್ನಲ್ಲೇ ಬಿಬಿಎಂಪಿ ಅಧಿಕಾರಿಗಳು ಕೂಡ ಪಿಜಿಗೆ ಭೇಟಿ ನೀಡಿದ್ದು ಅವ್ಯವಸ್ಥೆ ಪರಿಶೀಲನೆ ಮಾಡಿ ನೋಟಿಸ್ ನೀಡಿದ್ದಾರೆ. ಜೊತೆಗೆ ಈ ಪಿಜಿಗೆ ಲೈಸೆನ್ಸ್ ಇಲ್ಲದೇ ಇರುವುದು ಕೂಡ ಪತ್ತೆಯಾಗಿದೆ. 15 ದಿನಗಳ ಒಳಗಡೆ ಉತ್ತರ ನೀಡದೆ ಹೋದರೆ ಮುಚ್ಚಿಸೋ ಸಾಧ್ಯತೆ ಇದ್ದು ಪೊಲೀಸರು ಯಾವ ರೀತಿಯ ಕ್ರಮ ಜರುಗಿಸುತ್ತಾರೆ ಕಾದು ನೋಡಬೇಕಿದೆ.