Site icon Vistara News

BY Vijayendra : ಯಾವುದು ಲಾಟ್ರಿ ಅಂತ ಎಲೆಕ್ಷನ್‌ನಲ್ಲಿ ಗೊತ್ತಾಗುತ್ತೆ; ಡಿಕೆಶಿಗೆ ವಿಜಯೇಂದ್ರ ಸವಾಲ್‌

BY VIjayendra DK Shivakumar

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ (BS Yediyurappa) ಅವರ ಕೃಪಾಕಟಾಕ್ಷದಿಂದ ಬಿ.ವೈ ವಿಜಯೇಂದ್ರ (BY Vijayendra) ಅವರು ಬಿಜೆಪಿ ರಾಜ್ಯಾಧ್ಯಕ್ಷ (BJP State President) ಆಗಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DCM DK Shivakumar) ಅವರ ಹೇಳಿಕೆಗೆ ವಿಜಯೇಂದ್ರ ಅವರು ತಿರುಗೇಟು ನೀಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ‌ ಬಿಜೆಪಿ ಕಾರ್ಯಕರ್ತರು ಅವರಿಗೆ ತಕ್ಕ ಉತ್ತರ ನೀಡುತ್ತಾರೆ ಎಂದು ವಿಜಯೇಂದ್ರ ಬೆಂಗಳೂರಿನಲ್ಲಿ ಹೇಳಿದ್ದಾರೆ.

ಸೋಮವಾರ ಬೆಳಗ್ಗೆ‌ ಡಾಲರ್ಸ್ ಕಾಲೊನಿಯ ತಮ್ಮ ನಿವಾಸದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ವಿಜಯೇಂದ್ರ ಅವರು, ನನಗೆ ರಾಜ್ಯಾಧ್ಯಕ್ಷತೆ ಸಿಕ್ಕಿರುವುದು ಲಾಟರಿನೋ, ಬಂಪರ್‌ ಲಾಟರಿನೋ ಎನ್ನುವುದನ್ನು ರಾಜ್ಯದ ಜನ ಮತ್ತು ಬಿಜೆಪಿ ಕಾರ್ಯಕರ್ತರು ತೋರಿಸುತ್ತಾರೆ ಎಂದು ಸವಾಲು ಹಾಕಿದರು.

ಯಾವ ಕ್ಷೇತ್ರದ ಟಿಕೆಟ್‌ ಕೂಡಾ ಫೈನಲ್‌ ಆಗಿಲ್ಲ

ಮಂಡ್ಯ ಮತ್ತು ಹಾಸನ ಟಿಕೆಟ್‌ ಬಿಜೆಪಿಗೆ ಸಿಗಲಿದೆ ಎಂಬ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಯಾವ ಕ್ಷೇತ್ರದಿಂದ ಯಾರು ಸ್ಪರ್ಧಿಸಬೇಕು ಎಂಬುದನ್ನು ನಮ್ಮ ಪಕ್ಷದ ವರಿಷ್ಠರು ತೀರ್ಮಾನಿಸಲಿದ್ದಾರೆ. 28 ಕ್ಷೇತ್ರಗಳ ಅಭ್ಯರ್ಥಿಗಳು ಯಾರು ಯಾರೆಂದು ಬಿಜೆಪಿ ವರಿಷ್ಠರು ತೀರ್ಮಾನ ಮಾಡಲಿದ್ದಾರೆ. ಕಾರ್ಯಕರ್ತರ ಅಭಿಪ್ರಾಯದ ಮೇರೆಗೆ ಸೂಕ್ತ ಅಭ್ಯರ್ಥಿಯನ್ನು ಘೋಷಿಸಲಿದ್ದಾರೆ, ಸದ್ಯಕ್ಕೆ ಮೈತ್ರಿ ಪಕ್ಷಗಳ ನಡುವೆ ಟಿಕೆಟ್‌ ಹಂಚಿಕೆ ನಡೆದಿಲ್ಲ, ಯಾವ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್‌ ಎಂಬುದೂ ನಿರ್ಧಾರವಾಗಿಲ್ಲ ಎಂದು ಹೇಳಿದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರವನ್ನೇ ಆರಂಭ ಮಾಡಿರುವ ಮಾಜಿ ಸಚಿವ ಡಾ. ಕೆ ಸುಧಾಕರ್‌ ಅವರ ಬಗ್ಗೆಯೂ ಇದೇ ಮಾತು ಹೇಳಿದರು.

ಹೈನುಗಾರರ 716 ಕೋಟಿ ಬಾಕಿ ಮೊತ್ತ ತಕ್ಷಣ ಬಿಡುಗಡೆಗೆ ವಿಜಯೇಂದ್ರ ಆಗ್ರಹ

ಬೆಂಗಳೂರು: ರಾಜ್ಯ ಸರಕಾರಕ್ಕೆ ರೈತರ ಬಗ್ಗೆ ನೈಜ ಕಾಳಜಿ ಇದ್ದರೆ ಬಾಕಿ ಉಳಿಸಿದ ಹೈನುಗಾರರ ಪ್ರೋತ್ಸಾಹಧನವನ್ನು ಗೌರವಯುತವಾಗಿ ತಕ್ಷಣ ಬಿಡುಗಡೆ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದರು. ರಾಜ್ಯದ ಕಾಂಗ್ರೆಸ್ ಸರಕಾರದ ಧೋರಣೆಯಿಂದ ಜನರು ಮಾತ್ರವಲ್ಲ; ಜಾನುವಾರುಗಳೂ ಈ ಸರಕಾರಕ್ಕೆ ಶಾಪ ಹಾಕುತ್ತಿವೆ. ರಾಜ್ಯದ ರೈತರು, ಬಡವರ ಕೋಪವಷ್ಟೇ ಅಲ್ಲ, ಜಾನುವಾರುಗಳ ಕೋಪಕ್ಕೂ ಕೂಡ ರಾಜ್ಯ ಸರಕಾರ ಸಿಲುಕಿದೆ ಎಂದು ತಿಳಿಸಿದರು.

BY Vijayendra Pressmeet

ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನವನ್ನು ನೀಡುತ್ತಿದ್ದರು. ಅದರ ಪರಿಣಾಮವಾಗಿ ಬಿಜೆಪಿ ಆಡಳಿತದಲ್ಲಿದ್ದಾಗ 26 ಲಕ್ಷ ಗ್ರಾಮೀಣ ರೈತರಿಂದ ಪ್ರತಿದಿನ 80-85 ಲಕ್ಷ ಲೀಟರ್ ಹಾಲು ಸಂಗ್ರಹಿಸಲಾಗುತ್ತಿತ್ತು. ಇಂದಿನ ಕಾಂಗ್ರೆಸ್ ಸರಕಾರವು ಹಾಲು ಉತ್ಪಾದಕ ರೈತರಿಗೆ 716 ಕೋಟಿ ಬಾಕಿ ಪ್ರೋತ್ಸಾಹಧನವನ್ನು ಉಳಿಸಿಕೊಂಡಿದೆ ಎಂದು ಟೀಕಿಸಿದರು. ಇದರ ಪರಿಣಾಮವಾಗಿ 10 ಲಕ್ಷ ಲೀಟರ್‍ನಷ್ಟು ಹಾಲು ಸಂಗ್ರಹಣೆ ಕಡಿಮೆ ಆಗಿದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಹಿರಿಯರು ಬಿಜೆಪಿ ಬಗ್ಗೆ ಟೀಕಿಸುತ್ತಾರೆ; ‘ಮಾನ ಮರ್ಯಾದೆ ಇದ್ದರೆ..’ ಎನ್ನುತ್ತಾರೆ. ನಾನು ಆ ಭಾಷೆ ಬಳಸುವುದಿಲ್ಲ. ರಾಜ್ಯ ಸರಕಾರಕ್ಕೆ ರೈತರ ಬಗ್ಗೆ ನೈಜ ಕಾಳಜಿ ಇದ್ದರೆ ಬಾಕಿ ಉಳಿಸಿದ ಹೈನುಗಾರರ ಪ್ರೋತ್ಸಾಹಧನವನ್ನು ಗೌರವಯುತವಾಗಿ ಈ ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ರೈತರ ದುಡ್ಡು ಉಳಿಸಿಕೊಂಡ ಪಾಪದ ಸರಕಾರ ಎಂದು ಜನರು ಶಾಪ ಹಾಕುತ್ತಿದ್ದಾರೆ ಎಂದು ಟೀಕಿಸಿದರು.

ಇದನ್ನೂ ಓದಿ: DK Shivakumar: ಕೇಂದ್ರದಿಂದ ಅನ್ಯಾಯವಾಗಿದೆ ಎಂದು ರಾಜ್ಯ ಬಿಜೆಪಿಗರೇ ಒಪ್ಪಿದ್ದಾರೆ ಎಂದ ಡಿಕೆಶಿ

ಜಾನುವಾರುಗಳ ಜೊತೆ ಹೋರಾಟ..

ರಾಜ್ಯ ಸರಕಾರ ಪ್ರತಿಬಾರಿ ತನ್ನ ಹೊಣೆಗಾರಿಕೆ ಮರೆತು ಕೇಂದ್ರ ಸರಕಾರವನ್ನು ತೋರಿಸುತ್ತಿದೆ. ಹಣಕಾಸು ವಿಚಾರ ಬಂದೊಡನೆ ‘ಮೋದಿಯವರು ಕೊಡುತ್ತಿಲ್ಲ; ಬಿಜೆಪಿಯವರಿಗೆ ಮಾನ ಮರ್ಯಾದೆ ಇದ್ದರೆ ಮೋದಿಯವರಿಗೆ ಮಾತನಾಡಲಿ’ ಎನ್ನುವ ಮಾತು ರಾಜ್ಯ ಸರಕಾರ ಮತ್ತು ಕಾಂಗ್ರೆಸ್ ನಾಯಕರಿಂದ ಕೇಳುತ್ತಿದ್ದೇವೆ. ಪ್ರೋತ್ಸಾಹಧನವನ್ನು ಕೂಡಲೇ ಬಿಡುಗಡೆ ಮಾಡದಿದ್ದರೆ ಜನರು ಮತ್ತು ಜಾನುವಾರುಗಳು ಒಟ್ಟಿಗೆ ಸೇರಿ ಹೋರಾಟಕ್ಕೆ ಇಳಿಯುವ ಅನಿವಾರ್ಯತೆ ಬರಲಿದೆ ಎಂದು ಎಚ್ಚರಿಸಿದರು.

ಗೌರವಾನ್ವಿತ ಮುಖ್ಯಮಂತ್ರಿಗಳು ಇವತ್ತು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡುವ ಮಾಹಿತಿ ಇದೆ. ರಾಜಸ್ವ ಸ್ವೀಕೃತಿ ಗುರಿ (ರೆವಿನ್ಯೂ ರಿಸೀಟ್) 2 ಲಕ್ಷ 38 ಸಾವಿರ ಕೋಟಿ ಇದ್ದು, ಡಿಸೆಂಬರ್ ಅಂತ್ಯಕ್ಕೆ 1 ಲಕ್ಷ 61 ಸಾವಿರ ಕೋಟಿ ರಾಜಸ್ವ ಮಾತ್ರ ಸ್ವೀಕಾರ ಆಗಿದೆ. ಕೇವಲ ಶೇ 67 ಇವರ ಸಾಧನೆ. ನಮ್ಮ ಸರಕಾರ ಇದ್ದಾಗ ಡಿಸೆಂಬರ್ ವೇಳೆಗೆ ಶೇ 82 ಗುರಿ ಸಾಧಿಸಿದ್ದೆವು. ಸಿಎಂ ಅವರಿಗೆ ಗುರಿ ಸಾಧಿಸಲು ಸಾಧ್ಯವಾಗಿಲ್ಲ ಎಂದು ಆರೋಪಿಸಿದರು. ಶೇ 82ರಿಂದ ಶೇ 67ಕ್ಕೆ ಇಳಿದುದಕ್ಕೆ ಮೋದಿಜೀ ಅವರ ಮೇಲೆ ಆರೋಪ ಮಾಡುವುದನ್ನು ಬಿಟ್ಟು, ಯಾಕಾಗಿ ಗುರಿ ಮುಟ್ಟಲು ಸಾಧ್ಯವಾಗಿಲ್ಲ ಎಂದು ಜನರಿಗೆ ಉತ್ತರಿಸಿ ಎಂದು ಕೇಳಿದರು.

ಫೆಬ್ರವರಿ 10ರಂದು ಅಮಿತ್‌ ಶಾ ಬೆಂಗಳೂರಿಗೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಇದೇ 10ರಂದು ಬೆಂಗಳೂರಿಗೆ ಬರಲಿದ್ದಾರೆ. ಇಲ್ಲಿ ಲೋಕಸಭಾ ಕ್ಷೇತ್ರಗಳ ಕ್ಲಸ್ಟರ್ ಸಭೆಯಲ್ಲಿ ಭಾಗವಹಿಸುತ್ತಾರೆ. ನಂತರ ಕೋರ್ ಕಮಿಟಿ ಸದಸ್ಯರ ಜೊತೆ ಸಮಾಲೋಚನೆ ಮಾಡಲಿದ್ದಾರೆ. ಸರಕಾರಿ ಕಾರ್ಯಕ್ರಮವೂ ಇದೆ ಎಂದು ಕೇಳಿದ್ದೇವೆ; ಸಂಜೆ 5 ಗಂಟೆಗೆ ಸುತ್ತೂರು ಜಾತ್ರೆಯಲ್ಲೂ ಪಾಲ್ಗೊಳ್ಳುತ್ತಾರೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ಕ್ಲಸ್ಟರ್‌ ಎಂದರೆ ನಾಲ್ಕು ಲೋಕಸಭಾ ಕ್ಷೇತ್ರಗಳ ಗುಂಪು.

ಮಾಧ್ಯಮ ಗೋಷ್ಠಿಯ ವೇಳೆ ವಿಜಯೇಂದ್ರ ಅವರ ಜತೆ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಪಿ.ರಾಜೀವ್, ಪ್ರೀತಂ ಗೌಡ, ಮತ್ತು ಇತರರು ಇದ್ದರು.

Exit mobile version