ಬೆಂಗಳೂರು: ಬೆಂಗಳೂರಲ್ಲೊಂದು ಪೈಶಾಚಿಕ ಕೃತ್ಯ (Physical Abuse) ನಡೆದಿದೆ. ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವತಿ ಮೇಲೆ ಅತ್ಯಾಚಾರ ನಡೆದಿದೆ. ನಾಗಲ್ಯಾಂಡ್ ಮೂಲದ ಯುವತಿಯ ಸ್ಥಿತಿ ತೀರ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.
ನಿನ್ನೆ ಶನಿವಾರ ಮಧ್ಯರಾತ್ರಿ ಘಟನೆ ನಡೆದಿದೆ. ಆಟೋದಲ್ಲೇ ಯುವತಿ ಮೇಲೆ ಅತ್ಯಾಚಾರ ನಡೆದಿದೆ ಎನ್ನಲಾಗಿದೆ. ಖಾಸಗಿ ಕಾಲೇಜಿನಲ್ಲಿ ಪದವಿ ಓದುತ್ತಿದ್ದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆದಿದೆ. ಕೋರಮಂಗಲದ ಪಬ್‌ಗೆ ಹೋಗಿ ವಾಪಸ್ ಮನೆಗೆ ಆಟೋದಲ್ಲಿ ಬರುವಾಗ ಅತ್ಯಾಚಾರ ನಡೆದಿದೆ ಎನ್ನಲಾಗಿದೆ.
ಭಾನುವಾರ ಘಟನೆ ಸಂಬಂಧ ದೂರು ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಸಂತ್ರಸ್ತೆಗೆ ಮೆಡಿಕಲ್ ಟೆಸ್ಟ್ ಮಾಡಿಸಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಎಚ್‌ಎಸ್‌ಆರ್ ಲೇಔಟ್ ಠಾಣೆ ಪೊಲೀಸರಿಂದ ತನಿಖೆ ಮುಂದುವರಿದಿದ್ದು, ಸಿಸಿಕ್ಯಾಮೆರಾಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.
ಡ್ರಾಪ್ ಕೊಡುವ ನೆಪದಲ್ಲಿ ಅತ್ಯಾಚಾರ
ಘಟನೆ ಕುರಿತು ಹೆಚ್ಚುವರಿ ಪೊಲೀಸ್ ಆಯುಕ್ತ ರಮನ್ ಗುಪ್ತಾ ಮಾಹಿತಿ ನೀಡಿದ್ದಾರೆ. ಶನಿವಾರ ಮಧ್ಯರಾತ್ರಿ 1:30ರ ಸಂಧರ್ಭದಲ್ಲಿ ಈ ಘಟನೆ ನಡೆದಿದೆ. ಅಪರಿಚಿತನ ಜತೆಗೆ ಯುವತಿ ಡ್ರಾಪ್ ತೆಗೆದುಕೊಂಡಿದ್ದಾಳೆ. ಇದೇ ಅವಕಾಶವನ್ನು ಬಳಸಿಕೊಂಡ ಆರೋಪಿ ಅತ್ಯಾಚಾರವೆಸಗಿದ್ದಾನೆ. ಇದು ಗೆಟ್ ಟು ಗೆದರ್ ಪಾರ್ಟಿ ಮುಗಿಸಿ ಅಲ್ಲಿಂದ ವಾಪಾಸ್ ಬರುವಾಗ ಘಟನೆ ನಡೆದಿದೆ. ಇದು ಗ್ಯಾಂಗ್ ರೇಪ್ ಅಲ್ಲ, ಡ್ರಾಪ್ ತೆಗೆದುಕೊಂಡವನಿಂದ ಈ ಕೃತ್ಯ ನಡೆದಿದೆ. ನಾವು ಕೂಡ ಘಟನಾ ಸ್ಥಳಕ್ಕೆ ಹೋಗಿದ್ದೇವೆ, ಈಗಾಗಲೆ ಐದು ಜನರ ತಂಡವನ್ನು ರಚನೆ ಮಾಡಲಾಗಿದೆ.
ಯುವತಿ ರ‍್ಯಾಪಿಡೋ ಅಥವಾ ರ‍್ಯಾಂಡಮ್ ಬೈಕ್‌ನಲ್ಲಿ ಡ್ರಾಪ್ ಪಡೆದಿದ್ದಳಾ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಸದ್ಯಕ್ಕೆ ಹೆಚ್ಚಿನ ತನಿಖೆ ನಡೆಯುತ್ತಿದೆ, ಸಂತ್ರಸ್ತೆ ಹೊರ ರಾಜ್ಯದವಳಾಗಿದ್ದು, ಆಕೆಯ ಮೊಬೈಲ್ ಮಿಸ್ ಆಗಿದೆ. ಆಸ್ಪತ್ರೆಯಲ್ಲಿರುವ ಆಕೆ ಚೇತರಿಸಿಕೊಂಡಿದ್ದಾಳೆ. ಬಿಎನ್ ಎಸ್ ಸೆಕ್ಷನ್ 64 ಅಡಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ ಎಂದರು.
ಇದನ್ನೂ ಓದಿ: Accident News : ನರಗುಂದಲ್ಲಿ ಭೀಕರ ಅಫಘಾತ; ಸಾರಿಗೆ ಬಸ್ ಗುದ್ದಿ ಕಾರಿನಲ್ಲಿದ್ದ ಒಂದೇ ಕುಟುಂಬದ ನಾಲ್ವರ ದುರ್ಮರಣ
ದಲಿತನಿಗೆ ಕ್ಷೌರ ಮಾಡಲು ನಿರಾಕರಣೆ ವಿಚಾರದಲ್ಲಿ ನಡೆದ ಜಗಳ ಕೊಲೆಯಲ್ಲಿ ಅಂತ್ಯ
ಕೊಪ್ಪಳ: ಕ್ಷೌರ ಮಾಡುವ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ದಲಿತರೊಬ್ಬರನ್ನು ಕೊಲೆ ಮಾಡಿರುವ (Murder Case) ಘಟನೆ ಯಲಬುರ್ಗಾದ ಸಂಗನಾಳದಲ್ಲಿ ನಡೆದಿದೆ. ಕ್ಷೌರಿಕ ಮುದುಕಪ್ಪ ಹಡಪದ ಕೊಲೆ ಆರೋಪಿಯಾಗಿದ್ದು, ಯಮನೂರಸ್ವಾಮಿ ಬಂಡಿಹಾಳ ಕೊಲೆಯಾದ ವ್ಯಕ್ತಿಯಾಗಿದ್ದಾರೆ. ತನ್ನ ಕ್ಷೌರ ಮಾಡಲು ಹೇಳಿದ ವ್ಯಕ್ತಿಯನ್ನು ಕೊಲೆ ಮಾಡಿರುವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆಯಾದ ಯಮನೂರಸ್ವಾಮಿ ತಮ್ಮ ಕ್ಷೌರ ಮಾಡಲು ಮುದುಕಪ್ಪ ಅವರಿಗೆ ಹೇಳಿದ್ದ. ಆದರೆ ಜಾತಿ ಕಾರಣಕ್ಕೆ ಆ ಕೆಲಸ ಮಾಡಲು ನಿರಾಕರಿಸಿದ್ದ. ಈ ವಿಚಾರದಲ್ಲಿ ಪರಸ್ಪರ ವಾಗ್ವಾದ ನಡೆದಿತ್ತು. ಜಗಳ ತಾರಕಕ್ಕೇರಿ ಮುದುಕಪ್ಪ ಕೊಲೆ ಮಾಡಿದ್ದಾನೆ.
ಜಾತಿ ನಿಂದನೆ, ಕೊಲೆ
ಯಮನೂರ ಕ್ಷೌರ ಮಾಡಿಸಿಕೊಳ್ಳುವುದಕ್ಕೆ ಹೋಗಿದ್ದಾಗ ಮುದುಕಪ್ಪ ಮೊದಲು ಹಣ ಕೊಡುವಂತೆ ಕೇಳಿದ್ದಾನೆ. ಆದರೆ ಯಮನೂರ ಸ್ವಲ್ಪ ಹೊತ್ತು ಬಿಟ್ಟು ದುಡ್ಡು ಕೊಡುವುದಾಗಿ ಹೇಳಿದ್ದರು. ಮಾದಿಗರಿಗೆ ಕ್ಷೌರ ಮಾಡುವುದು ಕಷ್ಟ. ಅಂಥದ್ದರಲ್ಲಿ ಹಣ ಕೊಡದೇ ಕ್ಷೌರ ಮಾಡುವುದು ಹೇಗೆ ಎಂದು ಮುದುಕಪ್ಪ ಪ್ರಶ್ನಿಸಿದ್ದಾರೆ. ಈ ಮಾತಿಗೆ ಯಮನೂರ ಆಕ್ಷೇಪ ವ್ಯಕ್ತಪಡಿಸಿದ್ದು ಜಾತಿ ನಿಂದನೆ ಮಾಡಬಾರದಾಗಿ ಎಚ್ಚರಿಕೆ ಕೊಟ್ಟಿದ್ದರು. ಇದರಿಂದ ಸಿಟ್ಟಿಗೆದ್ದ ಮುದುಕಪ್ಪ ಯಮನೂರ ಅವರ ಶರ್ಟ್ ಹಿಡಿದು ಎಳೆದಾಡಿದ್ದ. ಈ ವೇಳೆ ಗಲಾಟೆ ನಡೆದಿದ್ದು ಆರೋಪಿ ತನ್ನ ಕೆಲಸ ಮಾಡುವ ಕತ್ತರಿಯಿಂದಲೇ ಹೊಕ್ಕಳ ಕೆಳಗೆ ಚುಚ್ಚಿ ಕೊಲೆ ಮಾಡಿದ್ದಾನೆ ಎಂದು ಎಫ್ಐಆರ್ನಲ್ಲಿ ದಾಖಲಾಗಿದೆ.
ಡಾಬಾದಿಂದ ಲೋಕಲ್ ಬ್ರಾಂಡ್ ಎಣ್ಣೆ ಕದಿಯುತ್ತಿದ್ದವನ ಮುಖ ಸಿಸಿಟಿವಿಯಲ್ಲಿ ಸೆರೆ
ರಾಯಚೂರು : ಡಾಬಾವೊಂದಕ್ಕೆ ನುಗ್ಗಿ ಪ್ರತಿನಿತ್ಯ ಲೋಕಲ್ ಎಣ್ಣೆ ಕದಿಯುತ್ತಿದ್ದ ವ್ಯಕ್ತಿಯೊಬ್ಬನ ಮುಖ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆರೋಪಿಯ ಕುರಿತು ಡಾಬಾ ಮಾಲೀಕರು ಮುದ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಎಣ್ಣೆ ಆಸೆಗೆ ಬಂದಿದ್ದ ಆತ ಮುಖಕ್ಕೆ ಮುಸುಕು ಧರಿಸಿರಲಿಲ್ಲ. ಹೀಗಾಗಿ ಕ್ಯಾಮೆರಾದಲ್ಲಿ ಆತನ ಚಹರೆ ಸಂಪೂರ್ಣವಾಗಿ ಸೆರೆಯಾಗಿದೆ. ಹೀಗಾಗಿ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸುವ ಸಾಧ್ಯತೆಗಳಿವೆ.
ಆರೋಪಿಗೆ ಡಾಬಾಕ್ಕೆ ನುಗ್ಗಿ ಲೋಕಲ್ ಬ್ರ್ಯಾಂಡ್ ಎಣ್ಣೆ ಕದಿಯುವ ಚಾಳಿ ಶುರುವಾಗಿತ್ತು. ಅಲ್ಲಿ ಹಣ ಇದ್ದರೂ ಅದನ್ನು ಮುಟ್ಟೇ ಕೇವಲ ಒಟಿ, ಚಾಯ್ಸ್ ಸೇರಿದಂತೆ ಲೋಕಲ್ ಬ್ರಾಂಡ್ನ ಮದ್ಯ ಎತ್ತಿಕೊಂಡು ಪರಾರಿಯಾಗುತ್ತಿದ್ದ. ಲಿಂಗಸಗೂರು ತಾಲೂಕಿನ ಮಾಕಾಪೂರ ಗ್ರಾಮದಲ್ಲಿರುವ ಡಾಬಾದ ಮಾಲೀಕರು ಇದರಿಂದ ಬೇಸತ್ತಿದ್ದರು. ಮಾಲೀಕ ಬಸವರಾಜ್ ಅವರು ಆರೋಪಿಯನ್ನು ಹಿಡಿಯುವ ಉದ್ದೇಶದಿಂದ ಸಿಸಿ ಟಿವಿ ಕ್ಯಾಮೆರಾವನ್ನು ಅಳವಡಿಸಿದ್ದರು. ಆರೋಪಿ ಈ ಬಗ್ಗೆ ಅರಿಯದೇ ಒಳಗೆ ನುಗ್ಗಿ ಮತ್ತೆ ಎಣ್ಣೆಗಾಗಿ ತಡಕಾಡಿದಾಗ ಆತನ ಮುಖ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ