ಬೆಂಗಳೂರು: ಕೇಂದ್ರ ಅರಣ್ಯ ಮತ್ತು ಹವಾಮಾನ ಬದಲಾವಣೆ ನಿಯಂತ್ರಣ ಸಚಿವಾಲಯವು ಏಕ ಬಳಕೆ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಿಷೇಧಿಸಿದ ಹೊರಡಿಸಿದ್ದ ಆದೇಶವು ಜು.೧ ರಿಂದ ದೇಶಾದ್ಯಂತ ಜಾರಿಗೆ ಬಂದಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಪರಿಸರ ಹೋರಾಟಗಾರರು, ಪ್ಲಾಸ್ಟಿಕ್ ವಿರೋಧಿಗಳು ಕೇಂದ್ರದ ಈ ಕ್ರಮವನ್ನು ಸ್ವಾಗತಿಸಿದ್ದಾರೆ. ಆದರೆ ಕೆಲ ಪ್ಲಾಸ್ಟಿಕ್ ಸಾಮಗ್ರಿಗಳ ನಿಷೇಧದಿಂದ ದುಬಾರಿ ಬೆಲೆ ತೆತ್ತು ಪರ್ಯಾಯ ಸಾಮಗ್ರಿಗಳನ್ನು ಕೊಳ್ಳಬೇಕಾಗದುತ್ತದೆ ಎಂದು ಗ್ರಾಹಕರು ಬೇಸರ ವ್ಯಕ್ತಪಡಿಸಿದ್ದಾರೆ.
ಪರಿಸರಕ್ಕೆ ಕಂಟಕವಾಗಿರುವ ಪ್ಲಾಸ್ಟಿಕ್ ಬಳಕೆಯನ್ನು 2016ರಲ್ಲೇ ನಿಷೇಧಿಸಲಾಗಿತ್ತು. ಆದರೆ ಇದರ ಜಾರಿಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿರಲಿಲ್ಲ. ಇದೀಗ ಜುಲೈ 1ರಿಂದ ನಿಷೇಧಿತ ಏಕ ಬಳಕೆಯ ಪ್ಲಾಸ್ಟಿಕ್ ಬಳಸಿದರೆ ಅಂತಹವರಿಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಲಾಗಿದೆ. ಹೀಗಾಗಿ ಇದರ ಬಿಸಿ ಎಲ್ಲರಿಗೂ ತಟ್ಟಿದೆ.
ಇದನ್ನೂ ಓದಿ | Plastic Ban | ರಾಜ್ಯದಲ್ಲಿ ಜುಲೈ 1ರಿಂದ ಏಕ ಬಳಕೆ ಪ್ಲಾಸ್ಟಿಕ್ ನಿಷೇಧ
ಹೊಸ ನಿಯಮ ಕಟ್ಟುನಿಟ್ಟಾಗಿ ಜಾರಿಯಾಗುತ್ತಿದ್ದಂತೆ ಬಿಬಿಎಂಪಿ ಮಾರ್ಷಲ್‌ಗಳು ಫೀಲ್ಡ್ ಗಿಳಿದು ದಾಳಿ ನಡೆಸಿದರು. ಪ್ರಮುಖವಾಗಿ ಶಾಪಿಂಗ್ ಏರಿಯಾವಾಗಿರುವ ಕೆ.ಆರ್.ಮಾರುಕಟ್ಟೆ, ಅವಿನ್ಯೂ ರೋಡ್ ಗಳಲ್ಲಿ ಮಾರ್ಷಲ್‌ಗಳು ಕಾರ್ಯಚರಣೆ ನಡೆಸಿದರು. ಹೋಲ್ ಸೆಲ್ ಮಳಿಗೆ, ರಸ್ತೆ ಬದಿ ವ್ಯಾಪಾರಿಗಳ ಮೇಲೂ ದಾಳಿ ನಡೆಸಿ ಪ್ಲಾಸ್ಟಿಕ್ ವಸ್ತುಗಳನ್ನು ವಶಕ್ಕೆ ಪಡೆಯಲಾಯಿತು.
ಈ ಪ್ಲಾಸ್ಟಿಕ್ ಬಳಸುತ್ತಿದ್ದರೆ ನಿಲ್ಲಿಸಿ ಬಿಡಿ?
ಸರ್ಕಾರದ ಆದೇಶದ ಪ್ರಕಾರ ಯಾವುದೇ ವ್ಯಕ್ತಿಯಾಗಲಿ, ಚಿಲ್ಲರೆ ವ್ಯಾಪಾರಿ ಅಥವಾ ಮಾರಾಟಗಾರರು ಏಕ ಬಳಕೆಯ ಯಾವುದೇ ರೀತಿಯ ಪ್ಲಾಸ್ಟಿಕ್ ಬಳಸುವಂತಿಲ್ಲ. ಪ್ರಮುಖವಾಗಿ ಕ್ಯಾರಿಬ್ಯಾಗ್, ಪ್ಲಾಸ್ಟಿಕ್ ಭಿತ್ತಿಪತ್ರ, ಪ್ಲಾಸ್ಟಿಕ್ ತೋರಣ, ಫ್ಲೆಕ್ಸ್, ಪ್ಲಾಸ್ಟಿಕ್ ಬಾವುಟ, ಸ್ಟ್ರಾ ಪ್ಲಾಸ್ಟಿಕ್ ತಟ್ಟೆ, ಪ್ಲಾಸ್ಟಿಕ್ ಲೋಟ, ಪ್ಲಾಸ್ಟಿಕ್ ಚಮಚ, ಕ್ಲಿಂಗ್ ಫಿಲ್ಡ್ ಮತ್ತು ಊಟದ ಟೇಬಲ್ ಮೇಲೆ ಹಾಕುವ ಪ್ಲಾಸ್ಟಿಕ್ ಹಾಳೆ, ಥರ್ಮೋಕೋಲ್, ಪ್ಲಾಸ್ಟಿಕ್ ಮೈಕ್ರೋ ಬೀಡ್ಸ್‌ನಿಂದ ತಯಾರಾದಂತಹ ವಸ್ತುಗಳ ಬಳಕೆಯನ್ನು ನಿಷೇಧಿಸಲಾಗಿದೆ. ಈ ನಿಷೇಧಿತ ಪ್ಲಾಸ್ಟಿಕ್ ಅನ್ನು ನೀವು ಏನಾದರೂ ಬಳಸುತ್ತಿದ್ದರೆ ನಿಲ್ಲಿಸಿಬಿಡಿ, ಇಲ್ಲವಾದರೆ ಮಾರ್ಷಲ್‌ಗಳು ದಂಡ ಹಾಕುತ್ತಾರೆ.
ಗಂಗಾವತಿಯಲ್ಲಿ ಅಂಗಡಿಗಳ ಮೇಲೆ ದಾಳಿ
ಕೊಪ್ಪಳದ ಗಂಗಾವತಿ ನಗರಸಭೆ ಅಧಿಕಾರಿಳು ಪ್ಲಾಸ್ಟಿಕ್ ಬಳಕೆಯ ವಿರುದ್ಧ ದಿಢೀರ್ ಕಾರ್ಯಾಚರಣೆ ವೇಳೆ ಅಂಗಡಿ ಮಾಲೀಕರು ಹಾಗೂ ಸಿಬ್ಬಂದಿಗಳ ಮಧ್ಯೆ ವಾಗ್ವಾದವೇ ನಡೆಯಿತು. ನಗರಸಭೆಯ ಪರಿಸರ ವಿಭಾಗದ ಎಂಜಿನೀಯರ್ ಚೇತನ್ ಕುಮಾರ್ ಮತ್ತು ಹಿರಿಯ ಆರೋಗ್ಯ ನಿರೀಕ್ಷಕ ನಾಗರಾಜ್ ನೇತೃತ್ವದಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಸುತ್ತಿರುವ ಅಂಗಡಿ-ಮುಂಗಟ್ಟುಗಳ ಮೇಲೆ ದಾಳಿ ನಡೆಸಲಾಯಿತು. ಈ ವೇಳೆ ಅಪಾರ ಪ್ರಮಾಣದ ಪ್ಲಾಸ್ಟಿಕ್ ಕವರ್‌ಗಳನ್ನು ವಶಕ್ಕೆ ಪಡೆದುಕೊಂಡರು. ಭಗೀರಥ ಉಪ್ಪಾರ ವೃತ್ತದಿಂದ ಹಿಡಿದು ಬೇರೂನಿ ಮಸೀದಿ ಭಾಗದ ಅಂಗಡಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದರು.
ಇದನ್ನೂ ಓದಿ | ಜುಲೈ 1ರಿಂದ ಪ್ಲಾಸ್ಟಿಕ್ ಸ್ಟ್ರಾ ಬಳಕೆ ನಿಷೇಧ, ಸಣ್ಣ ಟೆಟ್ರಾ ಪ್ಯಾಕ್ ಜ್ಯೂಸ್ ಇನ್ನು ಸಿಗಲ್ವಾ?