Site icon Vistara News

PM Narendra Modi : ಸಾಮಾನ್ಯ ಕಾರ್ಯಕರ್ತರಂತೆ ಬ್ಯಾರಿಕೇಡ್‌ ಬಳಿ ನಿಂತ ಬಿಜೆಪಿ ನಾಯಕರು

BJP leaders

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಬೆಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು (BJP President) ಸೇರಿದಂತೆ ಎಲ್ಲ ಹಿರಿಯ ನಾಯಕರು ಸಾಮಾನ್ಯ ಕಾರ್ಯಕರ್ತರಂತೆ ಬ್ಯಾರಿಕೇಡ್‌ ಬಳಿ ನಿಂತಿದ್ದ ದೃಶ್ಯ ಗಮನ ಸೆಳೆದಿದೆ.

ಪ್ರಧಾನಿ ಮೋದಿ ಅವರು ಚಂದ್ರಯಾನ 3 (Chandrayaana 3) ಯಶಸ್ಸಿಗಾಗಿ ಇಸ್ರೊ ವಿಜ್ಞಾನಿಗಳನ್ನು (ISRO Scientist) ಅಭಿನಂದಿಸಿ ಗೌರವಿಸಲು ಬರುತ್ತಿರುವುದರಿಂದ ಯಾವುದೇ ಸರ್ಕಾರಿ ಗೌರವಗಳು ಬೇಡ, ನಾಯಕರ ಸ್ವಾಗತ ಬೇಡ, ಬಿಜೆಪಿ ನಾಯಕರು ಕೂಡಾ ವಿಮಾನ ನಿಲ್ದಾಣಕ್ಕೆ ಬರುವುದು ಬೇಡ ಎಂದು ಪ್ರಧಾನಿ ಕಚೇರಿಯಿಂದ ಮಾಹಿತಿ ಬಂದ ಹಿನ್ನೆಲೆಯಲ್ಲಿ ಈ ನಡೆ ಕಂಡುಬಂದಿದೆ.

ಯಾರಿಗೂ ಪ್ರಧಾನಿ ಭೇಟಿಗೆ ಅವಕಾಶ ಇಲ್ಲದೆ ಇರುವುದರಿಂದ ಜನಪ್ರತಿನಿಧಿಗಳಿಗೆ ಪೊಲೀಸರು ಕೂಡಾ ಯಾವುದೇ ವಿಶೇಷ ಅವಕಾಶವನ್ನು ನೀಡುತ್ತಿಲ್ಲ. ಹೀಗಾಗಿ ಬಂದೋಬಸ್ತ್ ವೇಳೆ ಶಾಸಕ, ಸಂಸದರನ್ನೂ ಪೊಲೀಸರು ಬ್ಯಾರಿಕೇಡ್ ಬಳಿಯೇ ನಿಲ್ಲಿಸಿದ್ದಾರೆ.

ಜನ ಸಾಮಾನ್ಯರು ನಿಲ್ಲೋ ಜಾಗದಲ್ಲೇ ಶಾಸಕ, ಸಂಸದರನ್ನು ಪೊಲೀಸರು ನಿಲ್ಲಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಸಂಸದ ನಳೀನ್ ಕುಮಾರ್ ಕಟೀಲ್, ಶಾಸಕರಾದ ಆರ್ ಆಶೋಕ್, ಹೆಚ್ ವಿಶ್ಚನಾಥ್, ಎಂ ಕೃಷ್ಣಪ್ಪ, ಮುನಿರತ್ನ ಅವರು ಕೂಡಾ ಬ್ಯಾರಿಕೇಡ್ ಬಳಿಯೇ ನಿಲ್ಲುವಂತಾಯಿತು. ಸಂಸದ ತೇಜಸ್ವಿ ಸೂರ್ಯ ಅವರಂತೂ ಜನರ ನಡುವೆಯೇ ಹೋಗಿ ನಿಂತಿದ್ದರು.

ಇದನ್ನೂ ಓದಿ: PM Narendra Modi: ಬೆಂಗಳೂರಿಗೆ ಬಂದಿಳಿದ ಮೋದಿ; ಇಸ್ರೋ ಕಚೇರಿ ಬಳಿ ಸಂಭ್ರಮ, ಬಿಗಿ ಬಂದೋಬಸ್ತ್

ಮುಖ್ಯಮಂತ್ರಿಗಳು ಕೂಡಾ ಬರುವುದು ಬೇಕಾಗಿಲ್ಲ ಎಂದಿದ್ದ ಪ್ರಧಾನಿ ಕಚೇರಿ

ಬೆಂಗಳೂರು: ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಲು ಬೆಂಗಳೂರಿಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ (pm narendra modi) ಅವರನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತ ಶರ್ಮ ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಈ ವೇಳೆ ರಾಜ್ಯ ಪೋಲಿಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಪೋಲಿಸ್ ಆಯುಕ್ತ ದಯಾನಂದ್ ಹಾಜರಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ (cm siddaramaiah) ಸೇರಿದಂತೆ ರಾಜ್ಯ ಕಾಂಗ್ರೆಸ್‌ ಸರ್ಕಾರದ ಸಚಿವರಾಗಲೀ ಶಾಸಕರಾಗಲೀ ಎಲ್ಲೂ ಕಾಣಿಸಲಿಲ್ಲ. ರಾಜ್ಯ ಸರ್ಕಾರದ ರಾಜಕೀಯ ಪ್ರತಿನಿಧಿಗಳ ಅಹ್ವಾನ ಬೇಡ ಎಂದು ಪಿಎಂ ಕಚೇರಿಯಿಂದ ಮಾಹಿತಿ ನೀಡಲಾಗಿದೆ ಎನ್ನಲಾಗಿದ್ದು, ಹೀಗಾಗಿ ಅಧಿಕಾರಿಗಳನ್ನು ಮಾತ್ರ ರಾಜ್ಯ ಸರ್ಕಾರ ಕಳುಹಿಸಿ ಕೊಟ್ಟಿದೆ.

ಪಿಎಂ ಸ್ವಾಗತ ಮಾಡಲು ಹೋಗುವಂತೆ ಪರಮೇಶ್ವರ್‌ ಅವರಿಗೆ ಸೂಚಿಸಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಕೊನೆಯ ಕ್ಷಣದಲ್ಲಿ ಪಿಎಂ ಕಚೇರಿಯಿಂದ ಮಾಹಿತಿ ಹೋಗಿದ್ದು, ರಾಜ್ಯಪಾಲರು ಮತ್ತು ಸಿಎಂ ಸಹ ಸ್ವಾಗತ ಕೋರುವ ಅವಶ್ಯಕತೆ ಇಲ್ಲ ಎಂದು, ಕೇವಲ ಸರ್ಕಾರಿ ಅಧಿಕಾರಿಗಳಿಂದ ಮಾತ್ರ ಸ್ವಾಗತ ಕೋರುವಂತೆ ಸಂದೇಶ ರವಾನೆಯಾಗಿದೆ. ಹೀಗಾಗಿ ಸ್ವಾಗತ ಕೋರಲು ರಾಜ್ಯ ಸರ್ಕಾರದ ಸಚಿವರು ತೆರಳಿಲ್ಲ.

Exit mobile version