Site icon Vistara News

ಭಾವನನ್ನು ಜೈಲಿಗೆ ಕಳಿಸಲು ಬೆಂಗಳೂರು ಏರ್‌ಪೋರ್ಟ್‌ಗೇ ಬಾಂಬ್‌ ಬೆದರಿಕೆ !

ಬೆಂಗಳೂರು: ಕುಟಂಬದಲ್ಲಿದ್ದ ಕಲಹದ ಹಿನ್ನೆಲೆಯಲ್ಲಿ ಭಾವನನ್ನು ಜೈಲಿಗೆ ಕಳಿಸಬೇಕೆಂಬ ಕಾರಣಕ್ಕೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇದೆ ಎಂದು ಬೆದರಿಕೆ ಒಡ್ಡಿದವನು ಈಗ ಪೊಲೀಸರ ಅತಿಥಿಯಾಗಿದ್ದಾನೆ. ಸುಭಾಶಿಷ್‌ ಗುಪ್ತಾ ಬಂಧಿತ.

ಶುಕ್ರವಾರ ಬೆಳಗಿನ ಜಾವ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಬಾಂಬ್ ಬೆದರಿಕೆ ಕರೆ ಬಂತು. ಅಪರಿಚಿತ ವ್ಯಕ್ತಿಯೊಬ್ಬ ಕಂಟ್ರೋಲ್ ರೂಂಗೆ ಕರೆ ಮಾಡಿ, ಕೆಲ ಪ್ರದೇಶದಲ್ಲಿ ಮತ್ತು ಏರ್‌ಪೋರ್ಟ್‌ನಲ್ಲಿ ಬಾಂಬ್ ಇಟ್ಟಿರೋದಾಗಿ ಹೇಳಿದ್ದಾನೆ.

ಇದನ್ನೂ ಓದಿ | ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತಮ್ಮ ಹೆಸರು ಬೇಡ ಎಂದ BSY: ಮುಖ್ಯಮಂತ್ರಿ ಬೊಮ್ಮಾಯಿಗೆ ಪತ್ರ

ಬಾಂಬ್ ಬೆದರಿಕೆ ಕರೆ ಹಿನ್ನಲೆ ನಗರದ ಪೊಲೀಸರು ಅಲರ್ಟ್ ಆಗಿದ್ದಾರೆ. ವಿಮಾನ ನಿಲ್ದಾಣದ ಎಲ್ಲ ಕಡೆಗಳಲ್ಲಿ ಪೊಲೀಸರು ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳದೊಂದಿಗೆ ಪರಿಶೀಲನೆ ನಡೆಸಿದರು. ಭದ್ರತೆ ಹೆಚ್ಚಿಸಲಾಯಿತು.

ಇದೇ ವೇಳೆ ಕರೆ ಬಂದ ವಿವರಗಳನ್ನು ಪತ್ತೆ ಹಚ್ಚಲು ಮುಂದಾದರು. ಕೆಲವೇ ಗಂಟೆಗಳಲ್ಲಿ ಸುಭಾಶಿಷ್‌ ಗುಪ್ತನನ್ನು ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ವಿಚಾರಣೆ ಮಾಡಿದಾಗ ಆರೋಫಿ ಬಾಯಿ ಬಿಟ್ಟಿದ್ದಾನೆ.

ಸುಭಾಶಿಷ್‌ ಅಕ್ಕನಿಗೆ ವಿವಾಹವಾಗಿತ್ತು. ಆದರೆ ಅಕ್ಕ ಭಾವನ ನಡುವೆ ಸಾಂರಸ್ಯ ಏರ್ಪಡದ ಕಾರಣಕ್ಕೆ ವಿಚ್ಛೇದನವಾಗಿತ್ತು. ತನ್ನ ಅಕ್ಕನಿಗೆ ಭಾವ ಮೋಸ ಮಾಡಿದ ಎಂಬ ಸಿಟ್ಟು ಸುಭಾಶಿಷನಿಗೆ ಇತ್ತು. ಹೇಗಾದರೂ ಮಾಡಿ ಭಾವನ ಮೇಲೆ ಸೇಡು ತೀರಿಸಿಕೊಳ್ಳಬೇಕು ಎಂದು ಆಲೋಚಿಸಿದ. ಕೊನೆಗೆ, ಭಾವನ ಹೆಸರಿನಲ್ಲಿ ಏರ್‌ಪೋರ್ಟ್‌ ಬಾಂಬ್‌ ಬೆದರಿಕೆ ಪ್ಲ್ಯಾನ್‌ ಮಾಡಿದ್ದಾನೆ. ಭಾವನ ಹೆಸರು ಹೇಳಿದ ಕೂಡಲೆ ಅವನನ್ನು ಪೊಲೀಸರು ಬಂಧಿಸುತ್ತಾರೆ ಎಂದು ಭಾವಿಸಿದ್ದ. ಇದೀಗ ತನ್ನ ಉಪಾಯ ತಲೆಕೆಳಗಾಗಿ ಸ್ವತಃ ಸುಭಾಶಿಷ್‌ ಬಂಧಿತನಾಗಿದ್ದಾನೆ.

ಆರೋಪಿಯನ್ನು ಬಂಧಿಸಿದ ದೇವನಹಳ್ಳಿ ಪೊಲೀಸರು, ವಿಧಾನಸೌಧ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಮುಂದಿನ ವಿಚಾರಣೆ ನಡೆಯುತ್ತಿದೆ.

ಇದನ್ನೂ ಓದಿ | ಬೆಂಗಳೂರು ನಗರ ನೂತನ ಆಯುಕ್ತ ಪ್ರತಾಪ್‌ ರೆಡ್ಡಿ ಪೂರ್ಣ ಮಾಹಿತಿ !

Exit mobile version