ಬೆಂಗಳೂರು: ವ್ಯಕ್ತಿಯೊಬ್ಬರನ್ನು ಕಿಡ್ನ್ಯಾಪ್ ಮಾಡಿ ಎರಡು ದಿನ ಕಾಲ ಒತ್ತೆಯಲ್ಲಿಟ್ಟು ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದ (Police Extortion) ಪ್ರಕರಣಕ್ಕೆ ಸಂಬಂಧಿಸಿ ಪಿಎಸ್‌ಐ ಸೇರಿಸಿ ಮೂವರನ್ನು ಕರ್ತವ್ಯದಿಂದ ಸಸ್ಪೆಂಡ್ ಮಾಡಲಾಗಿದೆ.
ತನಿಖೆ ವೇಳೆ ಪಿಎಸ್‌ಐ ರಂಗೇಶ್ ಸೇರಿ ಮೂವರು ಸಿಬ್ಬಂದಿಗಳು ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಸಾಬೀತಾಗಿದೆ. ತನಿಖಾ ರಿಪೋರ್ಟ್ ಸಲ್ಲಿಕೆಯಾದ ಬೆನ್ನಲ್ಲೆ ಇವರನ್ನು ಸಸ್ಪೆಂಡ್ ಮಾಡಲಾಗಿದೆ. ಬಾಗಲೂರು ಪೊಲೀಸರಿಂದ ಪೊಲೀಸ್ ಕಮೀಷನರ್‌ಗೆ ಪ್ರಾಥಮಿಕ ತನಿಖಾ ವರದಿ ಸಲ್ಲಿಕೆಯಾಗಿದೆ. ಕರ್ತವ್ಯಲೋಪ, ಜೊತೆಗೆ ಹಣದ ಬೇಡಿಕೆ ಇಟ್ಟು ಬೆದರಿಕೆ ಹಾಕಿರುವುದು ರಿಪೋರ್ಟ್‌ನಲ್ಲಿ ಉಲ್ಲೇಖವಾಗಿದೆ. ಎರಡು ದಿನಗಳ ಬಳಿಕ ತಡವಾಗಿ ಪ್ರಕರಣ ದಾಖಲು ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಆರೋಪಿಗಳಾದ ಪಿಎಸ್‌ಐ ರಂಗೇಶ್, ಮಹದೇವ ನಾಯಕ್, ಮಹೇಶ್ ಪರಾರಿಯಾಗಿದ್ದು, ಅವರಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ.
ರಾಮಾಂಜಿನಿ ಎಂಬಾತನನ್ನು ಪಿಎಸ್‌ಐ ರಂಗೇಶ್, ಕಾನ್‌ಸ್ಟೇಬಲ್‌ಗಳಾದ ಹರೀಶ್, ಮಹದೇವ ನಾಯಕ್ ಮತ್ತು ಮಹೇಶ್ ಕಿಡ್‌ನ್ಯಾಪ್ ಮಾಡಿ 45 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಮಾರತ್ತಹಳ್ಳಿಯ ಪಿಎಸ್ಐ ಆಗಿದ್ದ ರಂಗೇಶ್ ಮತ್ತು ತಂಡದವರು ರಾಮಾಂಜನಿಯನ್ನು ಬಾಗಲೂರಿನ ಅಂಗಡಿಯಿಂದ ಕರೆತಂದಿದ್ದರು. ಆದರೆ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿರಲಿಲ್ಲ. ಕಾರಿನಲ್ಲಿ ಮಾರತ್ತಹಳ್ಳಿ ರೌಂಡ್ಸ್ ಹಾಕಿಸಿ, ಪೊಲೀಸ್ ಠಾಣೆ ಪಕ್ಕದಲ್ಲಿ ರಾಮಾಂಜನಿಯನ್ನು ಎರಡು ದಿನಗಳ ಕಾಲ ಜೊತೆಗೆ ಇಟ್ಟುಕೊಂಡಿದ್ದರು.
ರಾಮಾಂಜನಿಯ ತಂದೆಗೆ ಫೋನ್ ಮಾಡಿಸಿ 45 ಲಕ್ಷ ರೂಪಾಯಿ ಹಣ ತರುವಂತೆ ಹೇಳಿಸಿದ್ದರು. ಮಾರ್ಚ್ 21ರಂದು ಬಾಗಲೂರು ಪೊಲೀಸ್ ಠಾಣೆಯಲ್ಲಿ ರಾಮಾಂಜನಿ ತಂದೆ ದೂರು ನೀಡಿದ್ದರು. ಮಗನನ್ನು ಕಿಡ್ನಾಪ್ ಮಾಡಿದ್ದಾರೆಂದು ಎಫ್ಐಆರ್ ದಾಖಲಿಸಿದ್ದರು. ಬಾಗಲೂರು ಪೊಲೀಸರು ಮಾರತ್ತಹಳ್ಳಿ ಪೊಲೀಸರ ಸಂಪರ್ಕ ಮಾಡಿದ್ದರು. ಈ ವೇಳೆ ರಾಮಾಂಜನಿಯನ್ನು ಮಾರತ್ತಹಳ್ಳಿ ಠಾಣೆ ಬಳಿ ಇರಿಸಿಕೊಂಡಿದ್ದು ಗೊತ್ತಾಗಿದೆ. ನಂತರ ಬಾಗಲೂರು ಠಾಣೆಗೆ ರಾಮಾಂಜನಿಯನ್ನು ಕಿಡ್‌ನ್ಯಾಪ್ ಟೀಂ ಬಿಟ್ಟುಬಂದಿದ್ದು, ವಿಚಾರಣೆ ವೇಳೆ ರಾಮಾಂಜನಿ ಎಲ್ಲವನ್ನೂ ಹೇಳಿದ್ದರು.
ಇದೆಲ್ಲಾ ಹೈಡ್ರಾಮಾ ಬಳಿಕ ರಾಮಾಂಜನಿ ಮೇಲೆ ಮಾರತ್ತಹಳ್ಳಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು. ಹುಲಿ ಚರ್ಮ ಮಾರಾಟಕ್ಕೆ ಯತ್ನ ಎಂದು ಎಫ್ಐಆರ್ ದಾಖಲಿಸಿದ್ದು, ಅದು ಕೂಡ ನಕಲಿ ಹುಲಿ ಚರ್ಮ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.
ಇದನ್ನೂ ಓದಿ: Lokayukta Raid: ರಾಣೆಬೆನ್ನೂರು ಪಿಎಸ್‌ಐ, ವಾಹನ ಚಾಲಕ ಲೋಕಾಯುಕ್ತ ಬಲೆಗೆ; 40 ಸಾವಿರ ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ದರು