ಬೆಂಗಳೂರು: ವರದಕ್ಷಿಣೆ ಪ್ರಕರಣದಲ್ಲಿ ಹೇಳಿಕೆ ನೀಡಲು ತೆರಳಿದ್ದ ಮಹಿಳೆಯ ಜತೆ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರು ಅನುಚಿತವಾಗಿ ನಡೆದುಕೊಂಡ (Police misbehavior) ಬಗ್ಗೆ ದೂರು ನೀಡಲಾಗಿದೆ.
ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಮೇಲೆ ಮಂಜುನಾಥಸ್ವಾಮಿ ಗಂಭೀರ ಆರೋಪ ಮಾಡಲಾಗಿದ್ದು, ಸಂತ್ರಸ್ತ ಮಹಿಳೆ ಈ ಬಗ್ಗೆ ಸರಣಿ ಟ್ವೀಟ್ ಮಾಡಿದ್ದಾರೆ.
ಮಹಿಳೆಯ ಹೇಳಿಕೆ ಪಡೆಯುವ ನೆಪದಲ್ಲಿ ಕೂರಿಸಿಕೊಂಡ ಇನ್ಸ್‌ಪೆಕ್ಟರ್ ಆಕೆಯ ಕೈ ಹಾಗೂ ಸೊಂಟ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದಾರೆ. ಅಷ್ಟೇ ಅಲ್ಲದೆ ಫೋನ್ ನಂಬರ್ ಪಡೆದುಕೊಂಡು ವಾಟ್ಸಾಪ್ ಮೆಸೇಜ್‌ಗಳ ಮೂಲಕ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆ ಆರೋಪ ಮಾಡಿದ್ದಾರೆ. ಈ ದೂರುಗಳನ್ನು ಟ್ವಿಟರ್ ಮೂಲಕ ಸಿಟಿ ಪೊಲೀಸ್ ಕಮೀಷನರ್‌ಗೆ ಟ್ಯಾಗ್ ಮಾಡಿದ್ದಾರೆ.
ಯುವತಿ ಜತೆ ಅನುಚಿತವಾಗಿ ವರ್ತಿಸಿದ ಇನ್‌ಸ್ಪೆಕ್ಟರ್ ಅಮಾನತು
ಯುವತಿಯ ಜತೆ ಅನುಚಿತವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಕೆ.ಪಿ.ಅಗ್ರಹಾರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಅನ್ನು ಅಮಾನತು (Suspend) ಮಾಡಲಾಗಿದೆ. ಗೋಪಾಲಕೃಷ್ಣ ಗೌಡ ಅಮಾನತುಗೊಂಡ ಪೊಲೀಸ್ ಇನ್‌ಸ್ಪೆಕ್ಟರ್. ಜೀವನ್ ಭೀಮಾನಗರದಲ್ಲಿ ಹೊಟೇಲ್ ಒಂದಕ್ಕೆ ತೆರಳಿದ ಪೊಲೀಸ್ ಇನ್‌ಸ್ಪೆಕ್ಟರ್, ಕಂಠಪೂರ್ತಿ ಕುಡಿದು ಅಲ್ಲಿದ್ದ ಯುವತಿಯ ಜತೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ ಅಸಭ್ಯ ಪದಬಳಕೆ ಮಾಡಿ ಆಕೆಯ ತೇಜೋವಧೆ ಮಾಡಿದ್ದಾರೆ.
ನಂತರ ಅಲ್ಲಿಂದ ತೆರಳಿದ ಯುವತಿ ನೇರವಾಗಿ ಜೀವನ್ ಭೀಮಾ ನಗರ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ದೂರು ದಾಖಲಿಸಿಕೊಂಡ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ತನಿಖೆ ನಡೆಸಿ ಸಿಸಿಟಿವಿಯನ್ನೂ ಪರಿಶೀಲನೆ ನಡೆಸಿದ್ದಾರೆ. ನಂತರ ಯುವತಿಯ ಅನುಮತಿ ಪಡೆದು ಎನ್‌ಸಿಆರ್ ದಾಖಲಿಸಿದ್ದಾರೆ. ಈ ಘಟನೆಯಿಂದ ಪೊಲೀಸ್ ಇಲಾಖೆಗೆ ಮುಜುಗರವಾದ ಹಿನ್ನೆಲೆಯಲ್ಲಿ ಶಿಸ್ತು ಕ್ರಮ ಕೈಗೊಂಡಿರುವ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ ಅವರು, ಕೆ.ಪಿ.ಅಗ್ರಹಾರ ಪೊಲೀಸ್ ಇನ್‌ಸ್ಪೆಕ್ಟರ್ ಗೋಪಾಲಕೃಷ್ಣ ಗೌಡನನ್ನು ಅಮಾನತುಗೊಳಿಸಿ ಆದೇಶ ನೀಡಿದ್ದಾರೆ.
ಇದನ್ನೂ ಓದಿ: ಅಬುಧಾಬಿಯ ಲಾಟರಿ ಖರೀದಿಸಿ, 44 ಕೋಟಿ ರೂ. ಗೆದ್ದ ಬೆಂಗಳೂರು ವ್ಯಕ್ತಿ; ಕರೆ ಬಂದಾಗ ನಂಬರ್ ಬ್ಲಾಕ್ ಮಾಡಿದ್ದೇಕೆ?