ಬೆಂಗಳೂರು: ಪೊಲೀಸ್ ಠಾಣೆಗೆ ಹೋಗಿದ್ದ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಪ್ರಕರಣದಲ್ಲಿ ಸಬ್ ಇನ್‌ಸ್ಪೆಕ್ಟರ್ ಅವರನ್ನು ಅಮಾನತುಗೊಳಿಸಿ ಇಲಾಖಾ ತನಿಖೆ ಕೈಗೆತ್ತಿಕೊಳ್ಳಲಾಗಿದೆ.
ಸುದ್ದಗುಂಟೆಪಾಳ್ಯ ಠಾಣೆ ಸಬ್ ಇನ್‌ಸ್ಪೆಕ್ಟರ್ ಮಂಜುನಾಥ್ ಸ್ವಾಮಿ ಎಂಬವರ ಮೇಲೆ ಮಹಿಳೆಯೊಬ್ಬರು ಅನುಚಿತ ವರ್ತಿಸಿದ ಕುರಿತು ಆರೋಪಿಸಿದ್ದರು. ಏಪ್ರಿಲ್ 10ರಂದು ಈ ಕುರಿತು ಸರಣಿ ಟ್ವೀಟ್ ಮಾಡಿದ್ದರು. ಇದು ಇಲಾಖೆಗೆ ಮುಜುಗರ ತಂದಿತ್ತು.
ಇದೀಗ ಪಿಎಸ್ಐ ಮೇಲೆ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ಎಫ್ಐಆರ್ ದಾಖಲಾಗುತ್ತಿದ್ದಂತೆ ಸಬ್ ಇನ್‌ಸ್ಪೆಕ್ಟರ್ ಅಮಾನತು ಮಾಡಿ ಇಲಾಖೆ ತನಿಖೆಗೆ ಆದೇಶ ಹೊರಡಿಸಲಾಗಿದೆ.
ಘಟನೆ ಸಂಬಂಧ ಆಗ್ನೇಯ ವಿಭಾಗ ಡಿಸಿಪಿ ಸಿ.ಕೆ.ಬಾಬಾ ಹೇಳಿಕೆ ನೀಡಿದ್ದಾರೆ. ನಮ್ಮ ಕಚೇರಿಯಿಂದ ಮಹಿಳೆ ಸಂಪರ್ಕ ಮಾಡಿದ್ದೆವು. ಎಫ್ಐಆರ್ ದಾಖಲಿಸಲು ಲಿಖಿತ ದೂರು ನೀಡಬೇಕು ಎಂದಿದ್ದೆವು. ನಿನ್ನೆ ಸಂಜೆ ನಮ್ಮ ಕಚೇರಿಗೆ ಬಂದು ಲಿಖಿತ ರೂಪದಲ್ಲಿ ದೂರು ನೀಡಿದ್ದಾರೆ. ಆ ಆಧಾರದ ಮೇಲೆ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 354 a ,354d ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಸತ್ಯಾಂಶವನ್ನು ತಿಳಿದುಕೊಳ್ಳಲು ತನಿಖೆ ನಡೆಸಲಾಗುತ್ತಿದೆ. ಹಿರಿಯ ಅಧಿಕಾರಿಗೆ ತನಿಖೆ ಜವಾಬ್ದಾರಿಯನ್ನು ನೀಡಲಾಗಿದೆ ಎಂದಿದ್ದಾರೆ.
ಗಂಡ, ಬಾವಮೈದನಿಂದ ಕಿರುಕುಳ, ದೂರು
ಬೆಂಗಳೂರು: ಹುಡುಗಿತರ ಜತೆ ರೀಲ್ಸ್ ಮಾಡುವ ಗಂಡ, ಪೋರ್ನ್ ಸಿನಿಮಾ ನೋಡುವ ಬಾವಮೈದ, ಇವರಿಬ್ಬರೂ ಸೇರಿ ತನಗೆ ನೀಡುವ ಕಿರುಕುಳ, ವರದಕ್ಷಿಣೆ ಪೀಡನೆ ಬಗ್ಗೆ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ.
ಗಂಡ ಪ್ರಮೋದ್ ಕುಮಾರ್ ಬೇರೆ ಹುಡುಗಿಯರ ಜೊತೆಗೆ ರೀಲ್ಸ್ ಮಾಡುತ್ತಾನೆ. ಮದುವೆಯಾದ ಬಳಿಕ ಬೇರೆಯಾಗಿಯೇ ಮಲಗುತ್ತಿದ್ದಾನೆ. ಬಾವಮೈದ ಅಭಿ ಗೌಡ ಟಿವಿಗೆ ಯೂಟ್ಯೂಬ್ ಕನೆಕ್ಟ್ ಮಾಡಿ ಪೋರ್ನ್ ವಿಡಿಯೋ ನೋಡುತ್ತಾನೆ. ಇದನ್ನು ಪ್ರಶ್ನಿಸಿದರೆ ಕೆಟ್ಟ ದೃಷ್ಟಿಯಲ್ಲಿ ನೋಡಿ ಮುಟ್ಟಲು ಬರುತ್ತಾನೆ. ಚಿನ್ನದ ಸರ, ಬ್ರಾಸ್ಲೇಟ್ ನೀಡಿದ್ದಲ್ಲದೆ 30 ಲಕ್ಷ ಖರ್ಚು ಮಾಡಿ ಮದುವೆ ಮಾಡಿಕೊಟ್ಟರೂ ಕೂಡ ಹೊಸ ಮನೆ ಖರೀದಿಗೆ ಹಣ ಬೇಕೆಂದು ಪತಿ ಹಾಗೂ ಆತನ ಮನೆಯವರು ಕಿರುಕುಳ ನೀಡುತ್ತಿದ್ದಾರೆ ಎಂದು ಪತ್ನಿ ದೂರು ನೀಡಿದ್ದಾರೆ. ನಾಲ್ವರ ಮೇಲೆ ಪೂರ್ವ ವಿಭಾಗ ಮಹಿಳಾ ಪೊಲೀಸರ ಬಳಿ ದೂರು ದಾಖಲಿಸಲಾಗಿದ್ದು, ತನಿಖೆ ಕೈಗೆತ್ತಿಕೊಳ್ಳಲಾಗಿದೆ.
ಇದನ್ನೂ ಓದಿ: Police Misbehavior: ಪೊಲೀಸ್ ಠಾಣೆಗೆ ತೆರಳಿದ್ದ ಮಹಿಳೆ ಜೊತೆ ಸಬ್ ಇನ್ಸ್‌ಪೆಕ್ಟರ್ ಅನುಚಿತ ವರ್ತನೆ