ಬೆಂಗಳೂರು: ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರ ಹೇಳಿಕೆಯನ್ನು ವಿರೋಧಿಸಿ ಕಾಂಗ್ರೆಸ್ ನಡೆಸುತ್ತಿದ್ದ ಅಭಿಯಾನ ಸ್ಥಳಕ್ಕೆ ಬಂದ ಎರಡು ಠಾಣೆಗಳ ಇನ್ಸ್‌ಪೆಕ್ಟರ್‌ಗಳು, ಪ್ರಸಾದದ ಬಾಕ್ಸ್ ವಶಪಡಿಸಿಕೊಂಡು ತೆರಳಿದ್ದಾರೆ.
ಕಾಂಗ್ರೆಸ್ ಸರ್ಕಾರವಿದ್ದರೆ ಕಲ್ಲು ಹೊಡೆಯಬಹುದಿತ್ತು ಎಂದು ಇತ್ತೀಚೆಗೆ ಸಂಸದ ತೇಜಸ್ವಿ ಸೂರ್ಯ ಹೇಳಿಕೆ ನೀಡಿದ್ದರ ಹಿನ್ನೆಲೆಯಲ್ಲಿ ʻಧ್ವೇಷ ಬಿಡಿ ಸಂಸದ ತೇಜಸ್ವಿ ಸೂರ್ಯʼ ಅಭಿಯಾನಕ್ಕೆ ಕಾಂಗ್ರೆಸ್ ಚಾಲನೆ ನೀಡಿತ್ತು. ಅಭಿಯಾನದ ಆರಂಭವಾಗಿ, ಶ್ರೀನಗರದಲ್ಲಿರುವ ಕೆಪಿಸಿಸಿ ವಕ್ತಾರ ಡಾ. ಶಂಕರ ಗುಹಾ ದ್ವಾರಕಾನಾಥ್ ಅವರ ಕಚೇರಿಯಲ್ಲಿ, ಪಂಚ ಪುಷ್ಪಗಳಲ್ಲಿ ವಿಶೇಷವಾದ ಪಂಚದುರ್ಗಾ ಮಹಾಪೂಜೆ ನೆರವೇರಿಸಲಾಯಿತು.
ಪೂಜೆಯಲ್ಲಿ ಬಸವನಗುಡಿ ಕ್ಷೇತ್ರದ ಕಾರ್ಯಕರ್ತರು ಭಾಗಿಯಾಗಿದ್ದರು. ತೇಜಸ್ವಿ ಸೂರ್ಯ ಹಾಗೂ ಶಾಸಕ ರವಿಸುಬ್ರಹ್ಮಣ್ಯ ಅವರಿಗೆ ಒಳ್ಳೆಯ ಮನಸ್ಸನ್ನು ದೇವರು ದಯಪಾಲಿಸಲಿ ಎಂದು ಪ್ರಾರ್ಥನೆ ಮಾಡಲಾಯಿತು.
ಇದನ್ನೂ ಓದಿ | ತೇಜಸ್ವಿ ಸೂರ್ಯ ವಿರುದ್ಧ ಪ್ರತಿಭಟನೆ: ಕಾಂಗ್ರೆಸ್ ವಕ್ತಾರ ಡಾ.ಶಂಕರ್ ಗುಹಾ ದ್ವಾರಕನಾಥ್ ಬೆಳ್ಳೂರು ಬಂಧನ
ಕಾಂಗ್ರೆಸ್ ಸರ್ಕಾರವಿದ್ದರೆ ಕಲ್ಲು ಹೊಡೆಯಬಹುದಾಗಿತ್ತು ಎಂದು ಇತ್ತೀಚೆಗೆ ಸಂಸದರು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅವರ ಹೇಳಿಕೆಯಿಂದ ಅಶಾಂತಿಯ ವಾತಾವರಣ ನಿರ್ಮಾಣವಾಗುವ ಸಾಧ್ಯತೆಯಿತ್ತು. ಹಾಗಾಗಿ ‘Quit hatred Tejasvi Surya’ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಸಂಸದರಲ್ಲಿರುವ ದ್ವೇಷ, ಕ್ಲೇಶ, ದುಷ್ಟ ಬುದ್ಧಿಗಳು ದೂರವಾಗಲಿ, ತಮ್ಮ ಕ್ಷೇತ್ರದ ಜನರನ್ನು ಪ್ರೀತಿಯಿಂದ ಕಾಣುವಂತಾಗಲಿ ಎಂದು ಪೂಜೆ ಮಾಡಲಾಗುತ್ತಿದೆ ಎಂದು ಡಾ. ಶಂಕರ ಗುಹಾ ದ್ವಾರಕಾನಾಥ್ ತಿಳಿಸಿದ್ದರು.
ಪೂಜೆಯ ಬಳಿಕ ಸಂಸದರಿಗೆ ಕಳಿಸಿಕೊಡಲು ಪ್ರಸಾದವನ್ನು ಸಿದ್ಧಪಡಿಸಲಾಗಿತ್ತು. ಪ್ರಸಾದವನ್ನು ಒಂದು ಬಾಕ್ಸ್‌ನಲ್ಲಿ ಹಾಕಿ ಕೊರಿಯರ್ ಮಾಡಲು ನಿರ್ಧರಿಸಲಾಗಿತ್ತು. ಈ ಸಮಯದಲ್ಲಿ ಹೊಯ್ಸಳ ವಾಹನದಲ್ಲಿ ಸ್ಥಳಕ್ಕೆ ಹನುಮಂತನಗರ ಹಾಗೂ ಶಂಕರಪುರ ಠಾಣೆಗಳ ಇನ್ಸ್‌ಪೆಕ್ಟರ್‌ಗಳು ಆಗಮಿಸಿದ್ದಾರೆ.
ಹೀಗೆ ನೀವು ನ್ಯೂಸೆನ್ಸ್ ಮಾಡುತ್ತೀರ ಎಂದು ಆರೋಪಿಸಿದ್ದಾರೆ. ನಾವು ನ್ಯೂಸೆನ್ಸ್ ಮಾಡುತ್ತಿಲ್ಲ, ಪ್ರಸಾದ ಕಳಿಸುತ್ತಿದ್ದೇವೆ ಅಷ್ಟೆ. ಅದನ್ನು ಸ್ವೀಕರಿಸುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ ಎಂದು ಡಾ. ಶಂಕರ ಗುಹಾ ದ್ವಾರಕಾನಾಥ್ ತಿಳಿಸಿದ್ದಾರೆ. ಕೆಲ ಹೊತ್ತು ಮಾತುಕತೆ ನಂತರ ಕಾಂಗ್ರೆಸ್ ಕಾರ್ಯಕರ್ತರನ್ನು ಪಕ್ಕಕ್ಕೆ ಸರಿಸಿ, ಕೊರಿಯರ್ ಮಾಡಲು ಸಿದ್ಧಪಡಿಸಲಾಗಿದ್ದ ಬಾಕ್ಸ್ ಅನ್ನು ಎತ್ತಿಕೊಂಡು ತೆರಳಿದ್ದಾರೆ.
ಇದನ್ನೂ ಓದಿ | ದ್ವೇಷ ಬಿಡಿ ಸಂಸದ ತೇಜಸ್ವಿ ಸೂರ್ಯ ಅಭಿಯಾನಕ್ಕೆ ಚಾಲನೆ