ಬೆಂಗಳೂರು: ನಗರ ಹೊರವಲಯದ ಆನೇಕಲ್ ತಾಲೂಕಿನ ಜಿಗಣಿ, ಹೆಬ್ಬಗೋಡಿಯ ಹಲವು ಕಡೆ ಸುಳ್ಳು ದಾಖಲೆ ಸೃಷ್ಟಿಸಿ ನಕಲಿ ಆಧಾರ್ ಕಾರ್ಡ್ ಮಾಡುತ್ತಿದ್ದ ಸಾಮಾನ್ಯ ಸೇವಾ ಕೇಂದ್ರಗಳ(ಸಿಎಸ್‌ಸಿ) ಮೇಲೆ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.
ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಮತ್ತು ಆಂತರಿಕ ಭದ್ರತಾ ವಿಭಾಗದ ಡಿವೈಎಸ್ಪಿ ಶಕುಂತಲಾ ಗೌಡರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಕಳೆದ ಹಲವು ದಿನಗಳಿಂದ ನಕಲಿ ಆಧಾರ್ ಕಾರ್ಡ್ ಸೃಷ್ಟಿ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು, ಸೈಬರ್ ಕ್ರೈಮ್ ವಿಭಾಗಕ್ಕೆ ದೂರು ನೀಡಿದ್ದರು.
ದೂರು ಆಧರಿಸಿ ಕಾರ್ಯಾಚರಣೆಗಿಳಿದ ಪೊಲೀಸರು, ಜಿಗಣಿ ಪೊಲೀಸ್ ಠಾಣೆಯ ಮುಂಭಾಗದ ಶ್ರೀ ಕಂಪ್ಯೂಟರ್ ಸಾಮಾನ್ಯ ಸೇವಾ ಕೇಂದ್ರದ ಮಾಲೀಕ ಪುಂಡಲೀಕ ಹಾಗೂ ಸಿಬ್ಬಂದಿ ಮುಖೇಶ್ ಹಾಗೂ ಲಕ್ಷ್ಮೀಕಾಂತ್ ಪ್ರಮುಖ ಕಿಂಗ್‌ಪಿನ್‌ಗಳು ಎಂಬುವುದು ತಿಳಿದು ಬರುತ್ತಿದ್ದಂತೆ ಜಿಗಣಿ, ಹೆಬ್ಬಗೋಡಿ ಮತ್ತು ಆನೇಕಲ್ ಪಟ್ಟಣದ ಸಾಮಾನ್ಯ ಸೇವಾ ಕೇಂದ್ರಗಳ ಮೇಲೆ ದಾಳಿ ನಡೆಸಿದ್ದಾರೆ.
ಇದನ್ನೂ ಓದಿ | Accident | ರಿಪ್ಪನ್‌ಪೇಟೆಯಲ್ಲಿ ವಿದ್ಯುತ್ ಕಂಬಕ್ಕೆ ಗೂಡ್ಸ್ ಆಟೋ ಡಿಕ್ಕಿ; ಚಾಲಕ ಸಾವು
ಆರೋಪಿಗಳು ಆನೇಕಲ್ ತಾಲೂಕಿನ ಜಿಗಣಿ, ಹೆಬ್ಬಗೋಡಿ ಹಾಗೂ ಕಿತ್ತಗಾನ ಹಳ್ಳಿ ವ್ಯಾಪ್ತಿಯಲ್ಲಿ ಸೈಬರ್ ಅಂಗಡಿಗಳನ್ನು ತೆರೆದು ಸಾವಿರಾರು ರೂಪಾಯಿ ಪಡೆದು ನಕಲಿ ಆಧಾರ್ ಕಾರ್ಡ್‌ಗಳನ್ನು ತಯಾರಿಸುತ್ತಿದ್ದರು. ಜಿಗಣಿಯಲ್ಲಿನ ಶ್ರೀ ಕಂಪ್ಯೂಟರ್, ಪುನೀತ್ ಸೈಬರ್ ಜೋನ್ ಹೆಬ್ಬಗೋಡಿಯ ಗ್ಲೋಬಲ್ ಕಂಪ್ಯೂಟರ್ ಹಾಗೂ ಕಿತ್ತಗಾನಹಳ್ಳಿಯ ಹಲವು ಕಡೆ ನಕಲಿ ಆಧಾರ್ ಕಾರ್ಡ್ ತಯಾರು ಮಾಡುತ್ತಿದ್ದ ಕೇಂದ್ರಗಳ ಮೇಲೆ ದಾಳಿ ನಡೆಸಲಾಗಿದೆ.
ದಾಳಿಯ ವೇಳೆ ಗೆಜೆಟೆಡ್ ಅಧಿಕಾರಿಗಳ ನಕಲಿ ಸೀಲ್, ಸಿಗ್ನೇಚರ್ ಮಾಡಿದ ಅಪ್ಲಿಕೇಶನ್ ಹಾಗೂ ಅಧಾರ್ ಪ್ರಿಂಟ್ ಮಾಡುವ ಮಷಿನ್‌ಗಳನ್ನು ಟೇಬಲ್ ಕೆಳಗೆ ಬಿಸಾಡಿ ಆರೋಪಿಗಳು ನುಣುಚಿಕೊಳ್ಳುವ ಯತ್ನ ನಡೆಸಿದ್ದರು. ಆದರೆ ಮೊದಲೇ ಮಾಹಿತಿ ಪಡೆದಿದ್ದ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಆರೋಪಿಗಳ ಬಣ್ಣ ಬಯಲಾಗಿದೆ. ಬಳಿಕ ಆಧಾರ್ ಕಾರ್ಡ್ ಮಾಡಲು ಇಟ್ಟುಕೊಂಡಿದ್ದ ಅರ್ಜಿಗಳು, ಕಂಪ್ಯೂಟರ್ ಹಾರ್ಡ್ ಡಿಸ್ಕ್, ಪೆನ್ ಡ್ರೈವ್ ಸೇರಿ ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿರುವುದಾಗಿ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ತಿಳಿಸಿದ್ದಾರೆ.
ನಕಲಿ ಆಧಾರ್ ಕಾರ್ಡ್ ಪ್ರಕರಣದ ಮೂಲ ಹುಡುಕಲು ಹೋದರೆ ನಗರದ ತಿಲಕ್ ನಗರ ಠಾಣೆಯಲ್ಲಿ ಸೆರೆಯಾದ ಮೋಸ್ಟ್ ವಾಂಟೆಡ್ ಶಂಕಿತ ಉಗ್ರ ಅಖ್ತರ್ ಹುಸೇನ್‌ಗೆ ಇಲ್ಲಿನ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ನಕಲಿ ದಾಖಲೆ ಸೃಷ್ಟಿಸಿ ಅಧಾರ್ ಕಾರ್ಡ್ ತಯಾರಿಸಲಾಗಿತ್ತು ಎಂಬುವುದು ಪೊಲೀಸ್ ಇಲಾಖೆಯ ಬಲ್ಲ ಮೂಲಗಳ ಮಾಹಿತಿಯಾಗಿದೆ. ಜತೆಗೆ ಬೆಂಗಳೂರು ಹೊರವಲಯದಲ್ಲಿ ಬೀಡು ಬಿಟ್ಟಿರುವ ಬಾಂಗ್ಲಾ ವಲಸಿಗರಿಗೂ ಆಧಾರ್ ಕಾರ್ಡ್ ಮಾಡಿ ಕೊಟ್ಟಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ | ಮನೆಯಲ್ಲಿ ಕಳವು ಮಾಡಿದವನ ಬಂಧನ, 8 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಜಪ್ತಿ