ಬೆಂಗಳೂರು: ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಎಡಿಜಿಪಿ ಅಮೃತ್ ಪಾಲ್ ಅವರನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ವಿಚಾರಣೆ ನಡೆಸಿದ ವೇಳೆ ಈ ಹಿಂದೆ ನೇಮಕಾತಿ ವಿಭಾಗದಲ್ಲಿ ಡಿಜಿಯಾಗಿದ್ದ ಅಮೃತ್ ಪಾಲ್ ವಿರುದ್ಧ ಆರೋಪ ಕೇಳಿಬಂದಿತ್ತು. ಹೀಗಾಗಿ ಅವರನ್ನು ನಾಲ್ಕನೇ ಬಾರಿ ವಿಚಾರಣೆ ನಡೆಸಿದ ಸಿಐಡಿ ಅಧಿಕಾರಿಗಳು ಸೋಮವಾರ ಬಂಧಿಸಿದ್ದಾರೆ.
ಅಮೃತ್ ಪಾಲ್ ಅವರ ಕಚೇರಿಯಲ್ಲೇ ಓಎಂಆರ್ ಶೀಟ್ ತಿದ್ದಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಆರೋಗ್ಯ ತಪಾಸಣೆ ಬಳಿಕ ಒಂದನೇ ಎಸಿಎಂಎಂ ಕೋರ್ಟ್‌ಗೆ ಅಮೃತ್ ಪಾಲ್ ಅವರನ್ನು ಹಾಜರುಪಡಿಸಲಾಗುತ್ತದೆ. ಬೌರಿಂಗ್ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ರಾಜ್ಯದ ಇತಿಹಾಸದಲ್ಲೇ ಎಡಿಜಿಪಿ ಬಂಧನವಾಗಿರುವ ಪ್ರಕರಣ ಇದಾಗಿದೆ.
ಅಮೃತ್ ಪಾಲ್ ಹಿನ್ನೆಲೆ
ಪಂಜಾಬ್ ಮೂಲದವರಾದ ಅಮೃತ್ ಪಾಲ್, 1995ರ ಬ್ಯಾಚ್ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ. 2000-2003ರವರೆಗೆ ಉಡುಪಿ ಎಸ್‌ಪಿ ಆಗಿ ಕಾರ್ಯ ನಿರ್ವಹಿಸಿದ್ದರು. 2014ರಲ್ಲಿ ಕರ್ನಾಟಕ ವೆಸ್ಟರ್ನ್ ರೇಂಜ್ ಐಜಿಯಾಗಿ ಸೇವೆ ಸಲ್ಲಿಸಿದ್ದರು. 2018 ಸೆಂಟ್ರಲ್ ರೇಂಜ್ ಐಜಿ, 2019ರಲ್ಲಿ ನೇಮಕಾತಿ ವಿಭಾಗದ ಎಡಿಜಿಪಿಯಾಗಿ ಬಡ್ತಿ ಪಡೆದಿದ್ದರು. ಈ ಅವಧಿಯಲ್ಲೆ ಪಿಎಸ್‌ಐ ಪರೀಕ್ಷೆಗಳು ನಡೆದಿದ್ದವು.
ಪ್ರಕರಣದಲ್ಲಿ ಬಂಧನವಾಗಿರುವುದರಿಂದ ಅಮೃತ್ ಪಾಲ್ ಸದ್ಯದಲ್ಲೆ ಅಮಾನತಾಗಲಿದ್ದಾರೆ. ಮತ್ತೊಂದೆಡೆ ಪೊಲೀಸ್ ಕಸ್ಟಡಿ ಮುಗಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಿದ್ದು, ಒಂದು ವೇಳೆ ಜಾಮೀನು ಸಿಕ್ಕಿ ಹೊರಬಂದರೂ ಕರ್ತವ್ಯದಲ್ಲಿ ಮುಂದುವರೆಯುವುದು ಬಹುಕಷ್ಟ.
ತಪ್ಪನ್ನು ಒಪ್ಪಿಕೊಂಡಿರಲಿಲ್ಲ ಪಾಲ್
ಪಿ.ಎಸ್.ಐ ಪರೀಕ್ಷೆ ವೇಳೆ ಕಿರಿಯ ಅಧಿಕಾರಿಗಳ ಜತೆ ಶಾಮೀಲಾಗಿ, ಹಣ ಪಡೆದುಕೊಂಡಿರಬಹುದಾದ ಶಂಕೆಯನ್ನು ತನಿಖಾಧಿಕಾರಿಗಳು ವ್ಯಕ್ತಪಡಿಸಿದ್ದರು. ಪೋನ್ ಸಂಪರ್ಕ ಮತ್ತು ಕೆಲ ತಾಂತ್ರಿಕ ಸಾಕ್ಷ್ಯಗಳನ್ನು ಇಟ್ಟುಕೊಂಡು ಅಮೃತ್ ಪಾಲ್ ಅವರನ್ನು ಪ್ರಶ್ನಿಸಲಾಗಿತ್ತು. ಈ ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿರುವ ಆರೋಪಿಗಳ ನೀಡಿರುವ ಹೇಳಿಕೆಯನ್ನು ಆಧರಿಸಿ ಕೂಡ ಪ್ರಶ್ನೆ ಮಾಡಲಾಗಿತ್ತು. ಆದರೆ ಅಮೃತ್ ಪಾಲ್ ಯಾವುದಕ್ಕೂ ಸರಿಯಾದ ಉತ್ತರ ನೀಡಿಲ್ಲ ಎಂದು ಸಿಐಡಿಯ ಮೂಲಗಳು ತಿಳಿಸಿವೆ.
ʻನೇಮಕಾತಿ ಸಂದರ್ಭದಲ್ಲಿ ನಡೆದ ಅವ್ಯವಹಾರಗಳಿಗೆ ಮತ್ತು ನನಗೂ ಯಾವುದೇ ಸಂಬಂಧವಿಲ್ಲ, ನಾನು ನಿಯಮಗಳ ಅನುಸಾರ ಕೆಲಸ ಮಾಡಿದ್ದೇನೆ ಅಷ್ಟೇ. ಕೆಳ ಹಂತದ ಅಧಿಕಾರಿಗಳು, ಅಭ್ಯರ್ಥಿಗಳು ಹಾಗೂ ಇತರರ ಬಗ್ಗೆ ನನಗೇನೂ ಗೊತ್ತಿಲ್ಲ. ನೇಮಕಾತಿ ವಿಭಾಗದ ಅಧಿಕಾರಿಗಳು ಹಣ ಪಡೆದುಕೊಂಡ ಮಾಹಿತಿ ಇಲ್ಲ. ಅಕ್ರಮ ನಡೆಯಲು ನಾನು ಯಾವುದೇ ಅವಕಾಶ ಮಾಡಿಕೊಟ್ಟಿಲ್ಲ. ನನ್ನ ಮೇಲೆ ಇಲ್ಲ-ಸಲ್ಲದ ಆರೋಪ ಮಾಡಲಾಗಿದೆ. ಸುಖಾಸುಮ್ಮನೆ ನನಗೆ ಕಿರಕುಳ ಕೊಡಲು ಯತ್ನಿಸಲಾಗುತ್ತಿದೆʼ ಎಂದು ಅಮೃತ್ ಪಾಲ್ ವಿಚಾರಣೆ ವೇಳೆ ತಿಳಿಸಿದ್ದರು ಎನ್ನಲಾಗಿತ್ತು.
ಇದನ್ನೂ ಓದಿ | ಪಿಎಸ್‌ಐ ನೇಮಕಾತಿ ಅಕ್ರಮ; ಮತ್ತಿಬ್ಬರು ಆರೋಪಿಗಳ ಬಂಧನ