ಬೆಂಗಳೂರು: ಗಂಡ, ಹೆಂಡತಿ ಮತ್ತು ಒಬ್ಬ ಮಗ. ಸುಂದರವಾಗಿ ಸಾಗುತ್ತಿದ್ದ ಕುಟುಂಬದಲ್ಲಿ ಈಗ ಬಿರುಗಾಳಿ ಎದ್ದಿದೆ. ಗಂಡ ಯಾವುದೋ ಸಂಕಷ್ಟದಲ್ಲಿ ಸಿಲುಕಿದ್ದಾನೆ ಎನ್ನುವುದನ್ನು ತಿಳಿದ ಹೆಂಡತಿ, ಈ ತಾಳಿ ತೆಗೆದುಕೊಂಡು ಹೋಗಿ ಎಂದು ಬಿಚ್ಚಿಕೊಟ್ಟಿದ್ದಳು. ಆದರೆ, ಈಗ ಆಕೆ ತಾಳಿ ಭಾಗ್ಯವನ್ನೇ ಕಳೆದುಕೊಂಡಿದ್ದಾಳೆ. ಪೊಲೀಸರು ನೀಡಿದ ಚಿತ್ರಹಿಂಸೆಯಿಂದ (Police torture) ನೊಂದ, ಭಯಗೊಂಡ ಅವನು ತನ್ನ ಪ್ರಾಣವನ್ನೇ (Self Harming) ಕಳೆದುಕೊಂಡಿದ್ದಾನೆ.
ಇದು ಹಣದ ವಿಚಾರಕ್ಕೆ ಪೊಲೀಸರಿಂದ ಕಿರುಕುಳಕ್ಕೆ ಒಳಗಾಗಿ ಪ್ರಾಣ ಕಳೆದುಕೊಂಡ ನಾಗರಾಜ್ ಎಂಬ ವ್ಯಕ್ತಿಯ ಕಥೆ. ತಲಘಟ್ಟಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆಯಲ್ಲಿ ವೈಯಾಲಿಕಾವಲ್ ಹಾಗೂ ಹೆಣ್ಣೂರು ಪೊಲೀಸರೇ ಆರೋಪಿಗಳು.
ನಾಗರಾಜ್ ಮೊದಲು ಬಾಷ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ್ ಎರಡು ವರ್ಷದ ಹಿಂದೆ ಕೆಲಸ ಬಿಟ್ಟು ಸನಾವುಲ್ಲಾ ಎಂಬಾತ ಆರಂಭಿಸಿದ್ದ ಇಪಿಪಿ ಅಂದ್ರೆ ಎನ್ವಿರಾನ್ಮೆಂಟಲ್ ಪೊಲ್ಯೂಷನ್ ಪ್ರಾಜೆಕ್ಟ್ ಕಂಪನಿ ಸೇರಿಕೊಂಡಿದ್ದರು. ಈ ಕಂಪನಿ ಲೋನ್ ಬೇಕಾದವರಿಗೆ ಬ್ಯಾಂಕ್‌ನಿಂದ ಲೋನ್ ಕೊಡಿಸಿ ಅದರಿಂದ ಕಮಿಷನ್ ಪಡೆಯುವ ಕೆಲಸ ಮಾಡುತ್ತಿತ್ತು.
ಈ ನಡುವೆ, ನಟರಾಜ್ ಎಂಬಾತನಿಂದ 8 ಲಕ್ಷ ಕಮಿಷನ್ ಪಡೆದು ಲೋನ್ ಕೊಡಿಸಿರಲಿಲ್ಲ ಎಂದು ಹೇಳಲಾಗಿದೆ. ಹಾಗಾಗಿ ನಟರಾಜ್ ವೈಯಾಲಿ ಕಾವಲ್ ಠಾಣೆಗೆ ದೂರು ನೀಡಿದರು.
ಈ ನಡುವೆ, ಪೊಲೀಸರು ಮಾಲೀಕ ಸನಾವುಲ್ಲಾನನ್ನು ಬಿಟ್ಟ ಸಂಸ್ಥೆಯ ಸಿಬ್ಬಂದಿ ನಾಗರಾಜ್ ಅವರನ್ನು ಮಂಗಳವಾರ ಸಂಜೆ 3 ಗಂಟೆ ಸುಮಾರಿಗೆ ಕರೆಸಿ ಬೆಲ್ಟ್, ಶೂ, ಬ್ಯಾಟ್ ನಿಂದ ಥಳಿಸಿ ನಾಳೆ ಹಣ ತರುವಂತೆ ಕಳಿಸಿದ್ದರು ಎಂಬ ಆರೋಪವಿದೆ.
ಮಂಗಳವಾರ ರಾತ್ರಿ ಸಿಕ್ಕಾಪಟ್ಟೆ ನೋವಿನೊಂದಿಗೆ ಮನೆಗೆ ಬಂದಿದ್ದ ನಾಗರಾಜ್ ಪತ್ನಿ ಬಳಿ ಎಲ್ಲವನ್ನೂ ಹೇಳಿದ್ದರು. ಪತ್ನಿ ಬೆಳಗ್ಗೆ ಎದ್ದವರೇ ಒಮ್ಮೆ ವಿಚಾರಿಕೊಂಡು ಬನ್ನಿ. ಪೊಲೀಸರು ದುಡ್ಡು ಕೇಳಿದ್ರೆ ಈ ತಾಳಿಯನ್ನು ಇಟ್ಟು ಕೊಟ್ಟು ಬಿಡಿ ಎಂದು ತಾಳಿ ಕೊಟ್ಟು ಕೆಲಸಕ್ಕೆ ಹೊರಟಿದ್ದರು.
ಆದರೆ, ಇನ್ನೇನು ಕೆಲಸ ಆರಂಭಿಸಬೇಕು ಎನ್ನುವಷ್ಟರಲ್ಲೆ ಆಕೆಯ ಮೊಬೈಲ್ ಗೆ ಮೆಸೇಜ್ ಬಂದಿತ್ತು. ದಯವಿಟ್ಟು ಕ್ಷಮಿಸು, ಮಗುವನ್ನು ಚೆನ್ನಾಗಿ ನೋಡಿಕೋ ಎಂದು ಅದರಲ್ಲಿ ಬರೆದಿತ್ತು. ನಾಗರಾಜ್ ತಲಘಟ್ಟಪುರದಲ್ಲಿರುವ ಫ್ಲಾಟ್ ನಲ್ಲಿ ಆತ್ಮ ಹತ್ಯೆ ಶರಣಾಗಿದ್ದರು. ಅಲ್ಲದೇ 2ರಿಂದ 3 ಪುಟಗಳ ಡೇತ್ ನೋಟ್ ಕೂಡಾ ಬರೆದಿದ್ದರು. ಪತ್ನಿ ವಿನುತಾ ಅವರು ಸ್ಥಳಕ್ಕೆ ಬರುವ ಹೊತ್ತಿಗೆ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಡೆತ್ ನೋಟ್‌ನಲ್ಲಿ ನನ್ನ ಸಾವಿಗೆ ಸಂಸ್ಥೆ ಮಾಲೀಕ ಸನಾವುಲ್ಲಾ, ನಟರಾಜ್, ಎಂ.ಸಿ.ಹಿರೇಗೌಡ, ವೈಯಾಲಿಕಾವಲ್ ಇನ್ಸ್ ಪೆಕ್ಟರ್ ಕಾರಣ ಎಂದು ಉಲ್ಲೇಖ ಮಾಡಲಾಗಿದೆ.
ಇನ್ಸ್ ಪೆಕ್ಟರ್ ಸೇರಿ ಐವರ ವಿರುದ್ಧ ಎಫ್.ಐ.ಆರ್
ಈ ನಡುವೆ, ಪ್ರಕರಣಕ್ಕೆ ಸಂಬಂಧಿಸಿ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸನಾವುಲ್ಲಾ, ನಟರಾಜ್, ಈರೇಗೌಡ ಮೊದಲ ಮೂರು ಆರೋಪಿಗಳಾದರೆ ವೈಯಾಲಿಕಾವಲ್ ಠಾಣಾಧಿಕಾರಿ ಶ್ರೀನಿವಾಸ್ ನಾಲ್ಕನೇ ಆರೋಪಿ, ಹೆಣ್ಣೂರು ಠಾಣಾ ಸಿಬ್ಬಂದಿ ಶಿವಕುಮಾರ್ 5 ನೇ ಆರೋಪಿಯಾಗಿದ್ದಾರೆ.